ಮಾನವ ರಹಿತ ತಪಸ್ ಡ್ರೋನ್ ಪತನ: ತಪ್ಪಿದ ಭಾರಿ ದುರಂತ

Advertisement

ಚಿತ್ರದುರ್ಗ: ಡಿಆರ್‌ಡಿಒ(ರಕ್ಷಣಾ ಸಂಶೊಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಪ್ರಯೋಗಾತ್ಮಕ ಮಾನವ ರಹಿತ ದೇಸೀ ನಿರ್ಮಿತ ತಪಸ್ ೯೭ಎ – ೧೪ ಡ್ರೋನ್ ಭಾನುವಾರ ಬೆಳಗ್ಗೆ ಹಿರಿಯೂರು ತಾಲ್ಲೂಕು ವದ್ದೀಕೆರೆ ಜಮೀನಿನಲ್ಲಿ ಪತನಗೊಂಡಿದೆ. ಇದರಿಂದಾಗಿ ಡಿಆರ್‌ಡಿಒ ಆರಂಭವಾಗಿನಿಂದ ಇದು ಎರಡನೇ ದುರಂತವಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಸಮೀಪದ ಏರೋನಾಟಿಕಲ್ ಟೆಸ್ಟ್ ರೇಂಜ್(ಎಟಿಆರ್) ನಿಂದ ಭಾನುವಾರ ಮುಂಜಾನೆ ೬ ಗಂಟೆಗೆ ಮಾನವರಹಿತ ಡ್ರೋನ್ ಹಾರಾಟ ಆರಂಭಿಸಿತು. ೮.೨೦ರ ವೇಳೆಗೆ ಪತನಗೊಂಡಿದೆ. ಡ್ರೋನ್ ವಾಪಾಸ್ ಏರೋನಾಟಿಕಲ್ ಟೆಸ್ಟ್ ರೇಂಜ್‌ಗೆ ವಾಪಾಸ್ ಬರಬೇಕಾಗಿತ್ತು. ರೇಂಜ್ ಮೀರಿ ಹೋಗಿರುವುದು ಮತ್ತು ಪತನವಾಗಲು ನಿಖರವಾದ ಕಾರಣ ಇದುವರೆಗೆ ಗೊತ್ತಾಗಿಲ್ಲ.
೨೦೨೦ ಏಪ್ರಿಲ್ ೧೦ ರಂದು ಡಿಆರ್‌ಡಿಒ ಎಟಿಆರ್ ರೇಂಜ್‌ನಿಂದ ಚಾಲಕ ರಹಿತ ರುಸ್ತುಂ ಡ್ರೋನ್ ಚಳ್ಳಕೆರೆ ತಾಲ್ಲೂಕು ಜೋಡಿ ಚಿಕ್ಕೇರಹಳ್ಳಿ ಬಳಿ ಪತನಗೊಂಡಿತ್ತು. ಎರಡು ಸಾರಿ ಪತನಗೊಂಡರು ಜನ ಮತ್ತು ಜಾನುವಾರು ಪ್ರಾಣ ಹಾನಿಯಾಗಿಲ್ಲ. ಇದು ಎರಡನೇ ದೊಡ್ಡ ಪ್ರಮಾಣದ ದುರಂತವಾಗಿದೆ.
ಪ್ರಸ್ತುತ ಅಪಘಾತಕ್ಕೀಡಾದ ಡ್ರೋನ್ ಸತತ ೨೦೦ ಹಾರಾಟಗಳನ್ನು ಪೂರೈಸಿತ್ತು. ಹೀಗಿದ್ದರೂ ಡ್ರೋನ್ ಪತನಗೊಂಡಿರುವುದು ಸಿಬ್ಬಂದಿ ಹಾಗೂ ತಂತ್ರಜ್ಞರಿಗೆ ತಲೆನೋವಾಗಿದೆ.
ಬೆಂಕಿ: ಪದೇ ಪದೇ ಡ್ರೋನ್‌ನಿಂದ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಜನರು ಮೊದಲು ಹತ್ತಿರ ಬಂದು ನೋಡಿದರೂ ಹೊಗೆ ಬಂದ ಕೂಡಲೇ ಕೊಂಚ ದೂರ ಹೋದರು. ಡ್ರೋನ್ ಪತನಗೊಂಡ ತಕ್ಷಣ ಸ್ಥಳೀಯರು ಡ್ರೋನ್ ಅವಶೇಷಗಳ ಮೇಲೇರಿ ಫೋಟೋ,ವೀಡಿಯೂ ತೆಗೆಸಿಕೊಂಡರು. ವ್ಯಕ್ತಿಯೊಬ್ಬ ಪತನಗೊಂಡ ಡ್ರೋನ್ ರೆಕ್ಕೆಯೇರಿ ತೆಗೆಸಿಕೊಂಡ ಫೋಟೋ ಹಾಗೂ ವೀಡಿಯೋ ವೈರಲ್ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು. ಈಗ ಹೊಲಕ್ಕೆ ಯಾರನ್ನು ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ.
ತಪ್ಪಿದ ದುರಂತ: ಮಾನವರಹಿತ ಪರೀಕ್ಷಾರ್ಥ ಡ್ರೋನ್ ಒಂದು ವೇಳೆ ಜಮೀನು ಬಿಟ್ಟು ಬೇರೆ ಕಡೆ ಅಂದರೆ ಜನವಸತಿ ಪ್ರದೇಶದಲ್ಲಿ ಬಿದ್ದಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಜಮೀನಿನಲ್ಲಿ ಯಾರು ಕೆಲಸ ಮಾಡದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ತಪ್ಪಿಲ್ಲ. ಎರಡು ಸಾರಿ ಪತನಗೊಂಡರು ಪ್ರಾಣಹಾನಿಯಾಗಿಲ್ಲ.
ಜನರೋ ಜನರೂ; ಡ್ರೋನ್ ಪತನವಾಗಿರುವ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಜನರು ನೋಡಲು ಜಮಾಯಿಸಿದರು.ಮಹಿಳೆಯರು ಮಕ್ಕಳನ್ನು ಎತ್ತಿಕೊಂಡು ಬಂದು ವೀಕ್ಷಿಸಿದರು. ಕೆಲವರು ಡ್ರೋನ್ ಪತನಗೊಂಡು ಮುರಿದು ಬಿದ್ದಿದ್ದರಿಂದ ಅದರ ಮೇಲೆ ಕುಳಿತುಕೊಂಡಿದ್ದರು. ಗ್ರಾಮದ ಯುವಕರು ಅರದರ ಮೇಲೆ ಕುಳಿತುಕೊಳ್ಳಬೇಡಿ. ಇದು ರಕ್ಷಣಾ ಇಲಾಖೆಗೆ ಸೇರಿದ್ದು ಎಂದರೂ ಯಾರು ಕಿವಿಗೊಡಲಿಲ್ಲ. ಅದರ ಮೇಲೆ ಕುಳಿತಿದ್ದರು. ಇನ್ನೂ ಕೆಲವರು ದೂರದಲ್ಲಿ ನಿಂತುಕೊಂಡು ನೋಡುತ್ತಿದ್ದರು.
ವಿಚಾರಣೆ ಸಾಧ್ಯತೆ: ಡ್ರೋನ್ ಪತನವಾಗಲು ಕಾರಣವೇನು ಎಂಬ ಡಿಆರ್‌ಡಿಓ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಡ್ರೋನ್ ವಾಪಾಸ್ ಕುದಾಪುರಕ್ಕೆ ಬರಬೇಕಾಗಿತ್ತು. ಅದು ವ್ಯಾಪ್ತಿಯನ್ನು ಮೀರಿ ಹೋಗಲು ಕಾರಣವೇನು? ಪತನವಾಗಲು ಯಾವ ತಾಂತ್ರಿಕ ಕಾರಣಗಳೆನು ಎಂಬ ಬಗ್ಗೆ ತನಿಖೆ ನಡೆಸಲು ಇಲಾಖೆಯ ತಂತ್ರಜ್ಞರು ಹಾಗೂ ವಿಜ್ಞಾನಿಗಳ ತಂಡವನ್ನು ರಚಿಸಿದೆ. ತಂಡವು ಸಮಗ್ರ ತನಿಖೆ ನಡೆಸಿ ಪತನಕ್ಕೆ ಕಾರಣವನ್ನು ತಿಳಿಸುವ ಸಾಧ್ಯತೆಗಳಿವೆ.