ರೇಷ್ಮೆ ಕೃಷಿಯು ವಿಫುಲ ಉದ್ಯೋಗಾವಕಾಶ ಹೊಂದಿದೆ: ಎಂ.ಬಿ ರಾಜೇಶ್ ಗೌಡ

Advertisement

ರೇಷ್ಮೆ ಕೃಷಿಯು ಕೃಷಿ ಆಧಾರಿತ ಗ್ರಾಮೀಣ ಗುಡಿ ಕೈಗಾರಿಕೆಯಾಗಿದ್ದು, ವಿಫುಲ ಉದ್ಯೋಗಾವಕಾಶವನ್ನು ಹೊಂದಿದೆ ಎಂದು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಎಂ.ಬಿ. ರಾಜೇಶ್ ಗೌಡ ಅವರು ತಿಳಿಸಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ‌ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಅಂಬೇಡ್ಕರ್ ಭವನದಲ್ಲಿಂದು ನಡೆದ ರೇಷ್ಮೆ ಕೃಷಿಮೇಳ ಮತ್ತು ಪ್ರಶಸ್ತಿ ವಿತರಣೆ ಸಮಾರಂಭ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯು ಜಂಟಿಯಾಗಿ ಆಯೋಜಿಸಿರುವ ರೇಷ್ಮೆ ಕೃಷಿ ಮೇಳ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ರಾಜ್ಯದ ರೇಷ್ಮೆ ಬೆಳೆಗಾರರ ಸಾಧನೆಗಳನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು. ಹಿಪ್ಪುನೇರಳೆ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ವಾರ್ಷಿಕ 11,191 ಮೆ.ಟನ್ ಕಚ್ಚಾ ರೇಷ್ಮೆ ಉತ್ಪಾದನೆ ಮಾಡುತ್ತಿದೆ, ಈ ಪೈಕಿ 2,438 ಮೆ.ಟನ್ ದ್ವಿತಳಿ ರೇಷ್ಮೆ ಉತ್ಪಾದನೆ ಆಗುತ್ತಿದೆ ಎಂದರು.
ರಾಜ್ಯದಲ್ಲಿ 1,38,000 ರೇಷ್ಮೆ ಬೆಳೆಗಾರರು 2,87,500 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೇಸಾಯವನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬಿತ್ತನೆ ಪ್ರದೇಶದ ರೇಷ್ಮೆ ಬೆಳೆಗಾರರು, ರೇಷ್ಮೆ ಭಾಗೀದಾರರು, ರೇಷ್ಮೆ ಮೊಟ್ಟೆ ತಯಾರಕರು ಮತ್ತು ಚಾಕಿ ಸಾಕಾಣಿಕೆ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ ಎಂದರು. ಗುಣಮಟ್ಟದ ಕಚ್ಚಾ ರೇಷ್ಮೆ ಬೇಡಿಕೆಯನ್ನು ಪೂರೈಸುವಲ್ಲಿ ಕಳೆದ ಒಂದು ದಶಕದಿಂದಲೂ ಸ್ವಯಂಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ ಸ್ಥಾಪನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಶ್ರೀನಿವಾಸ್ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ರೇಷ್ಮೆ ವಸ್ತುಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿಮೇಳದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕರಾದ ಡಾ. ಬಿ.ಟಿ. ಶ್ರೀನಿವಾಸ್, ರೇಷ್ಮೆ ಇಲಾಖೆ ನಿರ್ದೇಶಕರಾದ ಮೇಘಲಾ, ಕೇಂದ್ರ ರೇಷ್ಮೆ ಸಂಶೋಧನ ತರಬೇತಿ ನಿರ್ದೇಶಕರಾದ ಡಾ. ಮೇರಿ ಜೋಸೆಫ್, ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಕೆ.ಶ್ರೀನಿವಾಸ್, ರಾಜ್ಯ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಮಳ್ಳೂರು ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.