ರೈತರಿಂದ ಗುಳೇ ಹೋಗುವ ಪ್ರತಿಭಟನೆ

Advertisement

ಶ್ರೀರಂಗಪಟ್ಟಣ: ರಾಜ್ಯದ ಹಿತವನ್ನು ಬದಿಗೊತ್ತಿ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ರೈತರು ‘ಗುಳೇ ಹೋಗುವ ಪ್ರತಿಭಟನೆ’ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಭೂಮಿತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಪಟ್ಟಣದ ಸ್ನಾನಘಟ್ಟ ಬಳಿಯ ಕಾವೇರಿ ನದಿ ತೀರದಲ್ಲಿ ಗುಳೇ ಹೋಗುವ ಪ್ರತಿಭಟನೆಗೆ ಚಾಲನೆ ನೀಡಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಕಾವೇರಿ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ರಾಜ್ಯ ಸರ್ಕಾರ ತಾನು ಆಡಿದ ಮಾತಿಗೆ ಬದ್ದವಾಗಿ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು. ಕ್ಷೇತ್ರದ ಶಾಸಕರು ತಮ್ಮ ಹೇಳಿಕೆಗೆ ಬದ್ದರಾಗಬೇಕು.‌ ಮತ್ತೊಮ್ಮೆ ತಮಿಳುನಾಡಿಗೆ ಸರ್ಕಾರ ಏನಾದರೂ ನೀರು ಬಿಟ್ಟಿದ್ದೇ ಆದಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಚಿವರು ರೈತರೊಂದಿಗೆ ಉಪವಾಸ ಕುಳಿತು ಕೊಳ್ಳತ್ತೇವೆ ಎಂದಿದ್ದ ಶಾಸಕ ರಮೇಶ್ ಬಂಡಿಸಿದ್ದೇಗೌಡರೇ ಬನ್ನಿ‌ ಪ್ರತಿಭಟನೆಗೆ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವ ಮೂಲಕ‌ ತಮಿಳುನಾಡಿನ ಓಲೈಕೆಗೆ ಮುಂದಾಗಿದೆ. ಹೀಗೇ ಮುಂದುವರೆದಲ್ಲಿ‌ ರೈತರು ಗುಳೇ ಹೋಗುವ ಕಾಲ ದೂರವಿಲ್ಲ. ಹಾಗಾಗಿ ನಮ್ಮ ಪೂರ್ವಿಕರು‌ ಬಾಳಿ ಬದುಕಿದ್ದ ಈ ಸ್ಥಳವನ್ನು ಬಿಟ್ಟು ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡ ಗುಳೆ ಹೊರಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗುಳೇ ಹೋಗುವ ಅಣುಕು ಪ್ರತಿಭಟನೆ ಮೂಲಕ‌ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.


ಕಾವೇರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಬಳಿಕ ತಾಲ್ಲೂಕು ಕಚೇರಿ ಎದುರು ಸುಮಾರು ಒಂದು ಗಂಟೆಗೂ ಅಧಿಕ‌ ಸಮಯ ಪ್ರತಿಭಟನೆ ನಡೆಸಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.