ರೈತರ ಪ್ರತಿಭಟನೆ ತೀವ್ರ

Advertisement

ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ರೈತರು, ದೆಹಲಿಯ ಶಂಭುಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳಿಸಿರುವ ಜೊತೆಗೆ ಕೇಂದ್ರ ಸಚಿವರೊಂದಿಗೆ ಸಂಧಾನ ಮಾತುಕತೆಯಲ್ಲಿಯೂ ತೊಡಗಿದ್ದಾರೆ ಭಾನುವಾರ ಆರನೇ ದಿನ ಪೂರೈಸಿರುವ ಈ ಪ್ರತಿಭಟನೆ ಜೊತೆಗೆ ಕೇಂದ್ರದ ಜೊತೆ ನಾಲ್ಕನೇ ಸುತ್ತಿನ ಮಾತುಕತೆಯೂ ನಡೆದಿದೆ. ಚಂಡೀಗಢದ ಹೋಟೆಲೊಂದರಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೊಯೆಲ್, ಅರ್ಜುನ ಮುಂಡಾ ಹಾಗೂ ನಿತ್ಯಾನಂದ ರಾಯ್ ಜೊತೆ ರೈತ ನಾಯಕರು ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಫೆ. ೨೧ರಂದು ಎನ್‌ಡಿಎ ಸಂಸದರ ವಿರುದ್ಧ ಕಪ್ಪು ಬಾವುಟ ಪ್ರರ್ದಶನ ನಡೆಸುವುದಕ್ಕೂ ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಪ್ರತಿಪಕ್ಷ ನಾಯಕರು ರೈತರ ಪ್ರತಿಭಟನೆ ಬೇಗನೆ ಬಗೆಹರಿಯಲಿ ಎಂದು ಹಾರೈಸಿದ್ದಾರೆ.
ಗಡಿಯಲ್ಲಿ ಬಿಗಿಭದ್ರತೆ
ಪಂಜಾಬಿನ ಸಾವಿರಾರು ರೈತರು ಹರಿಯಾಣದ ಮೂರು ಗಡಿ ಕೇಂದ್ರಗಳಲ್ಲಿ ಜಮಾಯಿಸಿದ್ದು ಅವರೆಲ್ಲರೂ ದೆಹಲಿಗೆ ಹೋಗದಂತೆ ತಡೆಯಲಾಗಿದೆ. ತಿಕ್ರಿ ಗಡಿಯಲ್ಲಿಯೂ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
ಇಂಟರ್ನೆಟ್ ಬಂದ್ ವಿಸ್ತರಣೆ
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಂಜಾಬಿನ ಕೆಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಮೇಲೆ ಫೆ.೧೨ರಂದು ವಿಧಿಸಿದ ನಿರ್ಬಂಧ ಫೆ.೧೬ರವರೆಗೂ ಜಾರಿಯಲ್ಲಿತ್ತು. ಇದೀಗ ಆ ನಿರ್ಬಂಧವನ್ನು ಫೆ.೨೪ರವರೆಗೂ ವಿಸ್ತರಿಸಲಾಗಿದೆ. ಇದೇ ರೀತಿಯಾಗಿ ಹರಿಯಾಣದ ಏಳು ಜಿಲ್ಲೆಗಳಲ್ಲಿ ಸೋಮವಾರ ಇಂಟರ್ನೆಟ್ ಸೇವೆ ಮೇಲೆ ನಿರ್ಬಂಧ ಹೇರಲಾಗಿದೆ.