ರೈಲ್ವೆ ದುರಂತಕ್ಕೆ ನೈತಿಕ ಹೊಣೆ ಯಾರದು

Advertisement

ಒಡಿಶಾದಲ್ಲಿ ಸಂಭವಿಸಿದ ಮೂರು ರೈಲುಗಳ ಡಿಕ್ಕಿಯಲ್ಲಿ ನೂರಾರು ಜನ ಸಾವನ್ನಪ್ಪಿದರು. ಅಪಘಾತ ನಡೆದು ೫೨ ಗಂಟೆಗಳು ಕಳೆದಿವೆ. ಈಗ ರೈಲು ಸಂಚಾರ ಮತ್ತೆ ಆರಂಭವಾಗಿದೆ. ಆದರೆ ಯಾರೂ ಈ ಅಪಘಾತಕ್ಕೆ ನೈತಿಕ ಹೊಣೆ ಹೊರಲು ಸಿದ್ಧರಿಲ್ಲ. ಹಿಂದೆ ಲಾಲ್ ಬಹಾದ್ದೂರ್ ಶಾಸ್ತ್ರಿ ರೈಲ್ವೆ ಸಚಿವರಾಗಿದ್ದಾಗ ಅಪಘಾತ ನಡೆಯಿತು ಎಂದ ಕೂಡಲೇ ಸಚಿವ ಪದವಿ ತ್ಯಜಿಸಿದ್ದರು. ಈ ಅದರ ಮಾತೇ ಕೇಳಿಬರುತ್ತಿಲ್ಲ. ಅಪಘಾತಕ್ಕೆ ಸಚಿವರು ಕಾರಣವೇ ಎಂದು ಮೊಂಡುವಾದ ಮಾಡುವವರೂ ಇದ್ದಾರೆ. ಆದರೆ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು. ಸರ್ಕಾರದ ಪ್ರತಿನಿಧಿಯಾದ ಸಚಿವರು ಆತ್ಮಸಾಕ್ಷಿಗೆ ಅನುಗುಣವಾಗಿ ರಾಜೀನಾಮೆ ಸಲ್ಲಿಸಬೇಕು. ಇದು ನೈತಿಕ ಪ್ರಶ್ನೆ. ಜನ ಸಚಿವರ ರಾಜೀನಾಮೆ ನಿರೀಕ್ಷಿಸಿದ್ದರು. ಆದರೆ ಇದುವರೆಗೆ ಅದರ ಬಗ್ಗೆ ಚಕಾರ ಎತ್ತಿಲ್ಲ. ಜಗತ್ತಿನಲ್ಲಿ ಅತಿ ದೊಡ್ಡ ರೈಲು ಮಾರ್ಗವನ್ನು ನಮ್ಮ ದೇಶ ಹೊಂದಿದೆ ಎಂಬುದು ಹೆಮ್ಮೆಯ ಸಂಗತಿಯಾದರೂ ಪ್ರಯಾಣಿಕರ ರಕ್ಷಣೆ ನಮ್ಮ ಹೊಣೆ ಎಂಬುದನ್ನು ಮರೆಯುವಂತಿಲ್ಲ. ಸತ್ತವರೆಲ್ಲಾ ಅಮಾಯಕರು. ನೂರಾರು ಕುಟುಂಬಗಳು ಇಂದು ಕಷ್ಟ ಸಿಲುಕಿವೆ. ಸರ್ಕಾರ ಕೊಡುವ ಪರಿಹಾರ ಯಾವ ಮೂಲೆಗೂ ಸಾಕಾಗುವುದಿಲ್ಲ. ಇಂಥ ಘಟನೆಗಳು ನಡೆಯಬಾರದು ಎಂದರೆ ಎಲ್ಲ ರೀತಿ ಸುರಕ್ಷತಾ ಕ್ರಮಗಳನ್ನು ಈಗಲೇ ಕೈಗೊಳ್ಳಬೇಕು. ರೈಲುಗಳ ಡಿಕ್ಕಿ ನಡೆಯದಂತೆ `ಕವಚ’ ತಂತ್ರಜ್ಞಾನ ವನ್ನು ಈಗ ಕೆಲವೇ ಕಿಮೀ ಅಳವಡಿಸಲಾಗಿದೆ. ಒಂದು ಕಿಮೀ ಕವಚ ಅಳವಡಿಸಲು ೫೦ ಲಕ್ಷ ರೂ. ಬೇಕು ಎಂದು ಕೈಬಿಡಲು ಬರುವುದಿಲ್ಲ. ಅದರಲ್ಲೂ ಅತಿ ವೇಗದ ರೈಲುಗಳು ಸಂಚರಿಸುವ ಮಾರ್ಗಗಳಲ್ಲಿ ಕವಚ ಇರಲೇಬೇಕು. ಇದೆಲ್ಲವನ್ನೂ ಬಿಟ್ಟು ಬುಲೆಟ್ ರೈಲು ಓಡಿಸುವುದರಲ್ಲಿ ಅರ್ಥವಿಲ್ಲ. ಹಿಂದಿನಿಂದಲೂ ರೈಲಿನಲ್ಲಿ ಪ್ರಯಾಣಿಕರಿಗೆ ಎಲ್ಲ ಸವಲತ್ತು ಕಲ್ಪಿಸಿಕೊಡುವುದರಲ್ಲಿ ಆಸಕ್ತಿವಹಿಸಿದ್ದೇವೆಯೇ ಹೊರತು ಸುರಕ್ಷಿತ ಪಯಣದ ಬಗ್ಗೆ ಕ್ರಮ ಕೈಗೊಂಡಿಲ್ಲ.
ರೈಲ್ವೆ ಇಲಾಖೆಯಲ್ಲಿರುವಷ್ಟು ನೌಕರರು ಬೇರೆ ಯಾವ ಇಲಾಖೆಯಲ್ಲೂ ಇಲ್ಲ. ಆದರೂ ನೌಕರರ ಕೊರತೆ ಇದ್ದೇ ಇದೆ. ಒಡಿಶಾದಲ್ಲಿ ನಡೆದ ಅಪಘಾತದಲ್ಲಿ ಹೊರಗಿನವರ ಕೈವಾಡ ಇದೆಯೇ ಇಲ್ಲವೆ ಎಂಬುದನ್ನು ಮೊದಲು ರೈಲ್ವೆ ಸುರಕ್ಷತಾ ವಿಭಾಗದ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು. ಆಮೇಲೆ ಸಿಬಿಐ ಮತ್ತಿತರ ತನಿಖಾಸಂಸ್ಥೆಗಳ ನೆರವು ಪಡೆಯಬೇಕು. ರೈಲ್ವೆ ಇಲಾಖೆಯ ವಿವರವಾದ ತನಿಖೆ ವರದಿ ಬಾರದೇ ಸಿಬಿಐ ಕೂಡ ಏನೂ ಮಾಡಲು ಸಾಧ್ಯವಿಲ್ಲ. ಉನ್ನತ ಸಂಸ್ಥೆಗಳ ಮೂಲಕ ತನಿಖೆ ನಡೆಸಿ ಕೊನೆಗೆ ಎಲ್ಲವನ್ನೂ ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು. ಇದರಲ್ಲಿ ರಾಜಕೀಯ ನುಸುಳಬಾರದು. ಕಳೆದ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ರೈಲ್ವೆ ಸಿಗ್ನಲ್‌ನಲ್ಲಿ ದೋಷ ಕಂಡು ಬಂದಿತ್ತು. ಇದರ ಬಗ್ಗೆ ಸ್ಥಳೀಯ ಅಧಿಕಾರಿಗಳು ದೂರು ಸಲ್ಲಿಸಿದ್ದರು. ನಾವು ರೈಲ್ವೆ ಮಂಡಳಿ ಸದಸ್ಯರಿಗೆ ಎಲ್ಲ ಸವಲತ್ತು ಕಲ್ಪಿಸಿಕೊಟ್ಟಿದ್ದೇವೆ. ಆದರೆ ಅವರು ಜನಸಾಮಾನ್ಯರ ರಕ್ಷಣೆ ಬಗ್ಗೆ ಕಿಂಚಿತ್ ಚಿಂತನೆ ನಡೆಸುವುದಿಲ್ಲ ಎಂದರೆ ಪರಿಹಾರವೇನು? ಈಗ ತಂತ್ರಜ್ಞಾನ ಉತ್ತಮಗೊಂಡಿದೆ. ವಿಮಾನಗಳ ಸಂಚಾರವನ್ನೇ ನಿಯಂತ್ರಿಸುವ ಉಪಗ್ರಹಗಳನ್ನು ನಾವು ಹೊಂದಿದ್ದೇವೆ ಎಂದ ಮೇಲೆ ರೈಲುಗಳ ಸುರಕ್ಷಿತ ಸಂಚಾರಕ್ಕೆ ಉಪಗ್ರಹ ಸಂಪರ್ಕ ಬಳಸಿಕೊಳ್ಳಲು ಅಡಚಣೆಯಾದರೂ ಏನು ಎಂಬುದು ಸ್ಪಷ್ಟವಾಗಿಲ್ಲ. ರೈಲುಗಳಿಗೆ ಸಿಗ್ನಲ್ ನೀಡುವಾಗ ಎಲ್ಲ ಮುನ್ನೆಚ್ಚರಿಕೆವಹಿಸುವುದು ಬಹಳ ಮುಖ್ಯ. ಅಪಘಾತ ಸಹಜ ಎನ್ನುವಂತೆ ಸರ್ಕಾರ ಧೋರಣೆ ತಳೆಯಬಾರದು. ಅಪಘಾತ ಸಂಭವಿಸಿದ ಮೇಲೆ ಪ್ರಧಾನಿ ಮತ್ತು ರೈಲ್ವೆ ಸಚಿವರು ಸ್ಥಳದಲ್ಲೇ ಇದ್ದು ಪರಿಹಾರ ಕಾಮಗಾರಿಯ ಮೇಲೆ ನಿಗಾವಹಿಸಿದ್ದು ಸಂತಸದ ಸಂಗತಿ. ಅದೇರೀತಿ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು. ಇಂಥ ಘಟನೆ ಮರುಕಳಿಸಬಾರದು ಎಂದರೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ರೈಲು ವೇಗವಾಗಿ ಸಂಚರಿಸಬೇಕೆಂದು ಪ್ರಯಾಣಿಕರು ಬಯಸುವುದು ಸಹಜ. ಅದರೊಂದಿಗೆ ಸುರಕ್ಷಿತವಾಗಿ ತಲುಪಬೇಕು ಎಂದು ಬಯಸುವುದು ತಪ್ಪೇನಲ್ಲ. ಇದಕ್ಕೆ ರೈಲ್ವೆ ಇಲಾಖೆ ಹೊಣೆ ಹೊರುವುದು ಅನಿವಾರ್ಯ.