ರೋಗಿಗಳಿಗೆ ಶಿಲೀಂದ್ರಗೊಂಡ ಮಾತ್ರೆಗಳ ವಿತರಣೆ

Advertisement

ಉಳ್ಳಾಲ: ರೋಗಿಗಳಿಗೆ ಉಪಯೋಗಕ್ಕೆ ಯೋಗ್ಯವಲ್ಲದ ಶಿಲೀಂಧ್ರಗೊಂಡ ಮಾತ್ರೆಗಳನ್ನು ನೀಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬೀರಿ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಈ ಬಗ್ಗೆ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ವಿವರಿಸಿದಾಗ ಎಲ್ಲರಿಗೂ ಜ್ವರಕ್ಕೆ ಅದೇ ಮಾತ್ರೆ ನೀಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ ರೋಗಿಯೊಬ್ಬರು ಆರೋಪಿಸಿದ್ದಾರೆ.
ಘಟನೆ ವಿವರ: ಕೆಸಿನಗರ ನಿವಾಸಿ ಹಸೈನಾರ್ ಅವರ ಪತ್ನಿ ಹಾಗೂ ಆರನೇ ತರಗತಿ ವಿದ್ಯಾರ್ಥಿನಿ ಅಸಿರಿಯಾ ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಔಷಧಿ ಪಡಕೊಳ್ಳಲು ಗುರುವಾರ ತೆರಳಿದ್ದರು. ಚಿಕಿತ್ಸೆ ನಡೆಸಿದ ವೈದ್ಯರು ಎರಡು ದಿನದ ಮಟ್ಟಿಗೆ ಸೇವಿಸಲು ಮಾತ್ರೆಗಳನ್ನು ನೀಡಿದ್ದರು. ಹಸೈನಾರ್ ಅವರ ಪುತ್ರಿ ಅಸಿರಿಯಾ ಜ್ವರಕ್ಕೆ ಕುಡಿಯಲೆಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಾತ್ರೆಯನ್ನು ಪ್ಯಾಕ್‌ನಿಂದ ತೆರೆದು ನೋಡಿದಾಗ ಮಾತ್ರೆಗಳಲ್ಲಿ ಫಂಗಸ್ ತರಹದ ಕಲೆಗಳಿದ್ದವು. ಈ ಬಗ್ಗೆ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಲ್ಲಿ ವಿಚಾರಿಸಿದ್ದು, ಈ ವೇಳೆ ಸಿಬ್ಬಂದಿ ಎಲ್ಲಾ ಮಾತ್ರೆಗಳು ಹೀಗೇ ಇವೆ. ಏನಾಗುವುದಿಲ್ಲ ಎಂದು ತಿಳಿಸಿದ್ದು, ಇದರಿಂದ ಆಕ್ರೋಶಗೊಂಡ ರೋಗಿಗಳಾದ ತಾಯಿ ಮಗಳು ಆ ಮಾತ್ರೆಯ ಫೋಟೋ ತೆಗೆದು ವೈದ್ಯಾಧಿಕಾರಿಗಳಿಗೆ ಕಳಿಸಿ ದೂರು ನೀಡಿದ್ದಾರೆ. ಬಳಿಕ ಅವರು ಖಾಸಗಿ ವೈದ್ಯಕೀಯ ಕೇಂದ್ರಕ್ಕೆ ತೆರಳಿ ಬೇರೆ ವೈದ್ಯರಿಂದ ಔಷಧಿ ಪಡೆದು ವಾಪಾಸು ಆಗಿದ್ದಾರೆ. ಇವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದ ಶಿಲೀಂಧ್ರಗೊಂಡ ಔಷಧಿಯ ಚಿತ್ರ ಹಾಗೂ ವಿಡಿಯೋ ವೈರಲ್ ಆಗಿದ್ದು, ಇಂತಹ ಔಷಧಿ ನೀಡಬಹುದೇ ಎಂದು ರೋಗಿಯ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.