ರೌಡಿಶೀಟರ್ ಮನೆ ಮೇಲೆ ದಾಳಿ, ಖಡಕ್ ಎಚ್ಚರಿಕೆ

Advertisement

ಹುಬ್ಬಳ್ಳಿ: ನಗರದಲ್ಲಿ ಈಚೆಗೆ ಅಪರಾಧ ಚಟುವಟಿಕೆ ಹೆಚ್ಚಾಗಿರುವುದು ಹಾಗೂ ನೇಹಾ ಮತ್ತು ಅಂಜಲಿ ಹತ್ಯೆ ನಡೆದ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತ ಅವಳಿನಗರದ ಪೊಲೀಸರು ಸೋಮವಾರ ಬೆಳಿಗ್ಗೆ ಕೆಲ ರೌಡಿಶೀಟರ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲ ರೌಡಿಶೀಟರ್‌ಗಳ ಮನೆಗಳ ಮೇಲೆ ಬೆಳಿಗ್ಗೆಯೇ ಠಾಣೆಯ ಸಿಪಿಐ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ಪೊಲೀಸರು ೧೦ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, ಖಡಕ್ ಎಚ್ಚರಿಕೆ ನೀಡಿದ್ದಾರೆ.
ರೋಹಿತ್ ಕಲಾಲ್, ಇಸ್ಮಾಯಿಲ್ ಬಾರದವಾಲೆ, ಫಜಲ್ ಪುಣೆವಾಲೆ, ದಾವಲಸಾಬ ಪುಣೆವಾಲೆ, ವಿನೋದ ಗುಡಿಹಾಳ, ಸಾಹಿಲ್‌ಭಕ್ಷ ಚಡ್ಡಾ, ಪ್ರದೀಪ ಕೂಗೋಡ, ಪುಟ್ಟರಾಜು ಕೂಗೋಡ ಎಂಬುವರ ಮನೆ ಮೇಲೆ ದಾಳಿ ನಡೆಸಲಾಗಿದೆ. ರೌಡಿಸಂ ಚಟುವಟಿಕೆಗಳಲ್ಲಿ ತೊಡಗಿದಲ್ಲಿ ಗಡಿಪಾರುಗಳಂತಹ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿ ಬಂಧನ
ಗಾಂಜಾ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ಕಿಬಸವೇಶ್ವರನಗರದ ಅರುಣ ಉರ್ಫ್ ಗುಂಡ್ಯಾ ಹಲಗಿ ಎಂಬಾತ ಗಾಂಜಾ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದನು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿದಾಗ ಆರೋಪಿತ ಸಿಕ್ಕಿಬಿದ್ದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಠಾಣೆ ಮೂಲಗಳು ತಿಳಿಸಿವೆ.
ಈ ಹಿಂದೆ ಬೆಂಡಿಗೇರಿ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಪ್ರಮುಖ ಆರೋಪಿ ಸೆಟ್ಲಮೆಂಟ್ ನಿವಾಸಿ ಅಭಿಷೇಕ ಭಜಂತ್ರಿ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದಾರೆ.