ಲಕ್ಷ್ಮಣ ಸವದಿಗೆ ಬಿಗ್ ಶಾಕ್ !

ಲಕ್ಷ್ಮಣ ಸವದಿ
Advertisement

ಚಿಕ್ಕೋಡಿ: ಫಲಿತಾಂಶ ಬಂದಾಗಲೇ ಸಚಿವರಾಗೋದು ಪಕ್ಕಾ ಎಂದು ನಿರೀಕ್ಷಿಸಲಾಗಿದ್ದ ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಬಿಗ್ ಶಾಕ್ ನೀಡಿದ್ದು, ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗದ್ದರಿಂದ ಬಂಡಾಯವೆದ್ದು ಕಾಂಗ್ರೆಸ್ ನಿಂದ ಸ್ಫರ್ಧಿಸಿ ಭರ್ಜರಿ ಗೆಲುವು‌ ಸಾಧಿಸಿದ್ದರು. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಬೆಳಗಾವಿ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳ ಲಿಂಗಾಯತ ಮತದಾರರನ್ನು ಸೆಳೆಯಲು ಅನುಕೂಲ ಆಗಲಿದೆ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡಿದ್ದರು. ಅದರಂತೆ ಫಲಿತಾಂಶವೂ ಬಂದು ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿ 11 ಶಾಸಕರು ಆಯ್ಕೆಯಾಗಿದ್ದರು. ಇದರ ಹಿಂದೆ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯೂ ಕಾರಣ ಎಂದು ವಿಶ್ಲೇಷಣೆ ನಡೆದಿತ್ತು.
11 ಶಾಸಕರನ್ನು ಹೊಂದಿದ್ದ ಬೆಳಗಾವಿ ಜಿಲ್ಲೆಗೆ ಮೂವರಿಗೆ ಮಂತ್ರಿ ಸ್ಥಾನ ಪಕ್ಕಾ ಎಂದೇ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು.
ಇವರಲ್ಲಿ ನಿರೀಕ್ಷೆಯಂತೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳ ಮೊದಲ ಹಂತದಲ್ಲಿಯೇ ಸಂಪುಟ ಸೇರಿದ್ದರು. ವಿಸ್ತರಣೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿತ್ತು.
ಆದರೆ, ರಾತ್ರಿ ಪಕ್ಷ ಬಿಡುಗಡೆ ಮಾಡಿದ ಸಚಿವರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರು ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಸವದಿ ಅವರು ಬಿಜೆಪಿ ತೊರೆದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿಶೇಷ ವಿಮಾನ ಕಳಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬಳಿಕ ಪಕ್ಷದ ರಾಜ್ಯ ಉಸ್ತುವಾರಿಗಳಾದ ಸುರ್ಜೆವಾಲಾ, ವೇಣುಗೋಪಾಲ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಮಾತುಕತೆ ನಡೆದು ಎರಡು ದಿನಗಳ ಬಳಿಕ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.
ಕೈ ಸೇರ್ಪಡೆಯ ಸಂದರ್ಭದಲ್ಲಿ ಯಾವುದೇ ಬೇಡಿಕೆ ಇಟ್ಟಿಲ್ಲ.
ಬೇಷರತ್ ಆಗಿ ಸೇರುತ್ತಿರುವುದಾಗಿ ಬಹಿರಂಗವಾಗಿ ಸವದಿ ಹೇಳಿಕೊಂಡಿದ್ದರೂ ಸರಕಾರ ಬಂದರೆ ಸಚಿವ ಸ್ಥಾನದ ಆಶ್ವಾಸನೆ ಪಡೆದುಕೊಂಡಿದ್ದರು ಎಂಬುದು ಸವದಿ ಬೆಂಬಲಿಗರ ವಾದ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಬಣದ ತಿಕ್ಕಾಟದಲ್ಲಿ ಲಕ್ಷ್ಮಣ ಸವದಿಗೆ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಪಕ್ಷಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡು ಈಗ ಸಚಿವ ಸ್ಥಾನ ನೀಡದೆ ಇರುವುದು ಸಹಜವಾಗಿ ಸವದಿ ಹಾಗೂ ಬೆಂಬಲಿಗರನ್ನು ಕೆರಳಿಸಿದೆ. ಸವದಿಗೆ ಸಚಿವ ಸ್ಥಾನ ತಪ್ಪಲು ಜಿಲ್ಲೆಯ ಕೆಲವರ ಪಿತೂರಿಯೂ ಕಾರಣ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಲಕ್ಷ್ಮಣ ಸವದಿ ಮುಂದಿನ ನಡೆ ಕುತೂಹಲ ಕೆರಳಿಸಿದೆ.