`ಲವ್ ಜಿಹಾದ್’ಗೆ ದೇಶದಲ್ಲಿ ತರಬೇತಿ ಕೇಂದ್ರ

ಜಗದೀಶ ಶೆಟ್ಟರ್‌
Advertisement

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ವ್ಯವಸ್ಥಿತ ರೀತಿಯಲ್ಲಿ ನಡೆದಿದ್ದು, ವಿಶೇಷ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ನಗರದಲ್ಲಿ ನೇಹಾ ಹಿರೇಮಠ ಅವರ ಮನೆಗೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ರಾಜ್ಯದ ವ್ಯವಸ್ಥೆ ಹದಗೆಟ್ಟಿದೆ. ದೆಹಲಿಯಲ್ಲೂ ಹುಡುಗಿಯೊಬ್ಬಳ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಇಲ್ಲಿಯೂ ಅದೇ ಮಾದರಿ ಹತ್ಯೆ ನಡೆದಿದೆ. ಲವ್ ಜಿಹಾದ್‌ಗೆ ದೇಶದಲ್ಲಿ ತರಬೇತಿ ಕೇಂದ್ರವಿರಬೇಕು ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸರ್ಕಾರ ಸರಿ ಇಲ್ಲದಾಗ ಹತ್ಯೆಗಳು ನಡೆಯುತ್ತವೆ. ಉತ್ತರ ಪ್ರದೇಶ ಈ ಹಿಂದೆ ಗೂಂಡಾ ರಾಜ್ಯವಾಗಿತ್ತು. ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ನಂತರ ಬಿಗಿ ಆಡಳಿತ ಜಾರಿಗೆ ಬಂದಿತು. ಅಲ್ಲಿನ ಜನ ಶಾಂತಿಯಿಂದ ಇದ್ದಾರೆ. ಈ ಪ್ರಕರಣದಲ್ಕು ಹಂತಕನನ್ನು ಬಂಧಿಸಲಾಗಿದೆಯೇ ಹೊರತು ಕೊಲೆಗೆ ಕಾರಣ, ಆತನ ಹಿನ್ನೆಲೆ ಕುರಿತು ವಿಚಾರಣೆ ಮಾಡಿಲ್ಲ. ಕೃತ್ಯದಲ್ಲಿ ಇನ್ನೂ ಐವರು ಕೈಜೋಡಿಸಿರುವ ಬಗ್ಗೆ ಮೃತಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಮೃತಳ ಚಾರಿತ್ರ‍್ಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ವ್ಯವಸ್ಥಿತ ತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ, ಗೃಹ ಸಚಿವರ ಹೇಳಿಕೆ ಗಮನಿಸಿದರೆ ಪ್ರಕರಣವನ್ನು ವ್ಯವಸ್ಥಿತ ರೀತಿ ಮುಚ್ಚಿ ಹಾಕುವ ಅನುಮಾನ ಕಂಡು ಬರುತ್ತಿದೆ ಎಂದು ಶೆಟ್ಟರ ಆರೋಪಿಸಿದರು.