ಲೂಟ್ ಸರ್ಕಾರ ತೊಲಗಿಸಿ

Advertisement

ಹುಬ್ಬಳ್ಳಿ: ನಿಮಗೆ ನೆಮ್ಮದಿ ಜೀವನ ನಡೆಸಲು ನೆರವಾಗಬೇಕಾದ ಸರ್ಕಾರ ಲೂಟಿ ಹೊಡೆಯುತ್ತಿದೆ. ಲೂಟಿ ಸರ್ಕಾರವನ್ನು ತೊಲಗಿಸಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕರೆ ನೀಡಿದರು.
ನವಲಗುಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್. ಕೋನರಡ್ಡಿ ಪರ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿ, 40% ಸರ್ಕಾರ ತೊಲಗಿಸಿ. ಮೂರುವರೆ ವರ್ಷದಲ್ಲಿ ನಿಮ್ಮ ಜೀವನ ಸುಧಾರಣೆಗೆ ಏನೂ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಲೂಟಿ ಪ್ರಿಯ ಸರ್ಕಾರಗಳು ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಆರೋಪ ಹೊತ್ತ ಬಿಜೆಪಿ ಹಿರಿಯ ಮುಖಂಡರಿಗೆ ಪ್ರಧಾನಿಯೇ ಫೋನ್ ಮಾಡುತ್ತಾರೆ. ಆದರೆ, ಶೇ 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ, ತಡೆಗಟ್ಟಿ ಎಂದು ಮನವಿ ಮಾಡಿದರೆ ಪ್ರಧಾನಿ ಸ್ಪಂದನೆ ಇಲ್ಲ. ಪಿಎಸ್ಐ, ಶಿಕ್ಷಕ ಹುದ್ದೆ ನೇಮಕಾತಿ ಎಲ್ಲದರಲ್ಲೂ ವ್ಯಾಪಕ ಭ್ರಷ್ಟಾಚಾರ. ಇದೆಲ್ಲ ಗೊತ್ತಿದ್ದರೂ ಪ್ರಧಾನಿ ಏನೂ ಕ್ರಮಕೈಗೊಂಡಿಲ್ಲ ಎಂದು ಖಂಡಿಸಿದರು.
ಮಹದಾಯಿ ಯೋಜನೆ ರೂಪಿಸಿದ್ದೆ ನಮ್ಮ ಕಾಂಗ್ರೆಸ್ ಪಕ್ಷ. ಅಧಿಕಾರಕ್ಕೆ ಬಂದ ಬಿಜೆಪಿ ಜಾರಿಗೊಳಿಸಲಿಲ್ಲ. ಕಾಲ ಹರಣ ಮಾಡಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ ಮಹದಾಯಿ ಯೋಜನೆ ಜಾರಿಗೊಳಿಸುತ್ತೇವೆ. ಈ ಭಾಗದ ಜನರ, ರೈತರ ಜೀವನ ಸಮೃದ್ಧಿಗೊಳಿಸುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದ ಪ್ರಿಯಾಂಕ ಗಾಂಧಿ, ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಮಹಿಳೆಯರ ಬಗ್ಗೆ ನಾವು ಹೊಂದಿರುವ ಕಾಳಜಿಯ ಧ್ಯೋತಕ ಎಂದರು.
ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್, ಜಗದೀಶ ಶೆಟ್ಟರ, ಪ್ರೊ. ಐ.ಜಿ.ಸನದಿ, ಅನಿಲಕುಮಾರ ಪಾಟೀಲ, ಬಂಗಾರೇಶ ಹಿರೇಮಠ, ವಿನೋದ ಅಸೂಟಿ, ಶಾಕೀರ ಸನದಿ ಸೆರಿದಂತೆ ಅನೇಕರಿದ್ದರು. ಅಭ್ಯರ್ಥಿ ಎನ್.ಎಚ್. ಕೋನರಡ್ಡಿ ಮಾತನಾಡಿದರು.