ಲೋಕಾಯುಕ್ತ ಬಲೆಗೆ ಹೆಡ್​ ಕಾನ್​ಸ್ಟೇಬಲ್

Advertisement

ದಾವಣಗೆರೆ: ಹೆಡ್​ಕಾನ್​ಸ್ಟೇಬಲ್ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್​ ಹೊನ್ನೂರಸ್ವಾಮಿ ಎಂಬುವರೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದವರು.
ಜನವರಿ 31ರಂದು ಅಪಘಾತವಾಗಿದ್ದ ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎನ್ನುವರಿಗೆ ಸೇರಿದ ದ್ವಿಚಕ್ರ ವಾಹನವನ್ನು ಮಾಯಕೊಂಡ ಠಾಣೆಗೆ ತಂದಿದ್ದ ಹೊನ್ನೂರಸ್ವಾಮಿ‌ ಅವರು; ಬೈಕ್ ಬಿಡಲು ಆರು ಸಾವಿರ ರೂಪಾಯಿ ಲಂಚ ನೀಡುವಂತೆ ಕಾನ್​ಸ್ಟೇಬಲ್ ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ 1 ಸಾವಿರ ಪಡೆದಿದ್ದ ಹೊನ್ನೂರುಸ್ವಾಮಿ ಉಳಿದ 5 ಸಾವಿರ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಲೆ ಹಾಕಿದ್ದಾರೆ. ಕಾನ್​ಸ್ಟೇಬಲ್ ಹೊನ್ನೂರುಸ್ವಾಮಿ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಲೋಕಾಯುಕ್ತ ಎಸ್​ಪಿ ಎಂಎಸ್ ಕೌಲಾಪೂರೆ ಮಾರ್ಗದರ್ಶನಲ್ಲಿ, ಇನ್​ಸ್ಪೆಕ್ಟರ್ ಹೆಚ್. ಎಸ್. ರಾಷ್ಟ್ರಪತಿ, ಪ್ರಭು, ಮಧುಸೂಧನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.