ಲೋಕ ಶಿಕ್ಷಣ ಟ್ರಸ್ಟ್‌ನಿಂದ ವಿದ್ಯಾವರ್ಧಕ ಸಂಘಕ್ಕೆ 1 ಲಕ್ಷ ಚೆಕ್ ವಿತರಣೆ

ಕರ್ನಾಟಕ ವಿದ್ಯಾವರ್ಧಕ ಸಂಘ
????????????????????????????????????
Advertisement

ಧಾರವಾಡ: ಸಂಯುಕ್ತ ಕರ್ನಾಟಕ ಹೆಸರಿನಲ್ಲಿ ವರ್ಷದಲ್ಲಿ ಒಂದು ದಿನ(ಸಂಘದ ಸಂಸ್ಥಾಪನ ದಿನ ಸಂದರ್ಭದಲ್ಲಿ) ಕಾರ್ಯಕ್ರಮ ಆಯೋಜಿಸಲು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 1 ಲಕ್ಷ ರೂ. ಚೆಕ್‌ನ್ನು ಲೋಕ ಶಿಕ್ಷಣ ಟ್ರಸ್ಟ್ ವತಿಯಿಂದ ನೀಡಲಾಯಿತು.
ನಗರದ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಮಂಗಳವಾರ ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಕೇಶವ ದೇಸಾಯಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರಿಗೆ ಚೆಕ್ ನೀಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಡಾ. ಪಾಟೀಲ ಪುಟ್ಟಪ್ಪ ಪ್ರಪಂಚ ಪ್ರಶಸ್ತಿಯನ್ನು ಪ್ರದಾನ ಮಾಡಿ 50,000ರೂ. ನೀಡಲಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ, ಪ್ರಶಸ್ತಿ ಮೊತ್ತಕ್ಕೆ ಇನ್ನೂ 50,000 ರೂ. ಸೇರಿಸಿ ಸಯುಕ್ತ ಕರ್ನಾಟಕ ಹೆಸರಿನಲ್ಲಿ ದತ್ತಿ ಕಾರ್ಯಕ್ರಮ ಆಯೋಜಿಸಲು 1 ಲಕ್ಷ ರೂ. ವಿದ್ಯಾವರ್ಧಕ ಸಂಘಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದರು. ಅಧ್ಯಕ್ಷರು ನೀಡಿದ ಭರವಸೆಯಂತೆ ಧರ್ಮದರ್ಶಿ ಕೇಶವ ದೇಸಾಯಿ ಅವರು ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಕೇಶವ ದೇಸಾಯಿ ಅವರು ಮಾತನಾಡಿ, ಲೋಕ ಶಿಕ್ಷಣ ಟ್ರಸ್ಟ್ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ ಎರಡೂ ಭವ್ಯ ಇತಿಹಾಸ ಹೊಂದಿದ ಸಂಸ್ಥೆಗಳು. ಪ್ರತಿ ವರ್ಷ ಸಂಯುಕ್ತ ಕರ್ನಾಟಕ ಪತ್ರಿಕೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂಬುದು ನಮ್ಮ ಕೋರಿಕೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ಕೊಡಮಾಡುವ ಚೊಚ್ಚಲ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕಕ್ಕೆ ನೀಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಸಂಯುಕ್ತ ಕರ್ನಾಟಕ ಪತ್ರಿಕೆ ನಮ್ಮ ಗೌರವವನ್ನು ಪ್ರೀತಿಯಿಂದ ಸ್ವೀಕರಿಸಿದೆ. ಇದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ. 50,000 ರೂ. ಪ್ರಶಸ್ತಿ ಮೊತ್ತವನ್ನು ಮತ್ತೆ 50,000 ರೂ. ಸೇರಿಸಿ ಸಂಘಕ್ಕೆ ಮರಳಿ ನೀಡಿರುವುದು ಸಂಯುಕ್ತ ಕರ್ನಾಟಕ ಪತ್ರಿಕೆಯ ಮೇಲಿನ ಗೌರವ ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.
ಬಸವಪ್ರಭು ಹೊಸಕೇರಿ ಮಾತನಾಡಿ, ಸಂಯುಕ್ತ ಕರ್ನಾಟಕ ಪತ್ರಿಕೆ ನಮಗೆ ಕೇವಲ ಪತ್ರಿಕೆಯಷ್ಟೇ ಅಲ್ಲ, ಅದು ಜೀವನ ಕ್ರಮ. ಅದು ನಮ್ಮ ನಾಡಿನ ಸಾಕ್ಷಿಪ್ರಜ್ಞೆ. ಪತ್ರಿಕೆ ಎಂದರೆ ನಮಗೆ ಸಂಯುಕ್ತ ಕರ್ನಾಟಕ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಸಿಇಒ ಮೋಹನ ಹೆಗಡೆ, ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ವೀರಣ್ಣ ವಡ್ಡೀನ್, ಗುರು ಹಿರೇಮಠ, ಶಿವಾನಂದ ಬಾವಿಕಟ್ಟಿ, ಶಿವಾನಂದ ಬೆಲ್ಲದ ಮುಂತಾದವರು ಇದ್ದರು.