ವಂದೇ ಭಾರತ ರೈಲಿನ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ

Advertisement

ಹುಬ್ಬಳ್ಳಿ: ಬೆಂಗಳೂರು-ಧಾರವಾಡ ನಡುವೆ ಹೊಸದಾಗಿ ಆರಂಭವಾಗಿರುವ “ವಂದೇ ಭಾರತ್” ರೈಲಿನ ಸಮಯಕ್ಕೆ ಹೊಂದಾಣಿಕೆ ಆಗುವಂತೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ವೋಲ್ವೋ ಬಸ್ ಹಾಗೂ ಧಾರವಾಡ ರೈಲು ನಿಲ್ದಾಣ – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.
ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಗೆ ಬೆಂಗಳೂರು ಧಾರವಾಡ ನಡುವೆ ಆರಂಭಿಸಲಾಗಿರುವ “ವಂದೇ ಭಾರತ್ ” ರೈಲಿನಲ್ಲಿ ಪ್ರಯಾಣ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮಲ್ಟಿ ಎಕ್ಸೆಲ್ ವೋಲ್ವೊ ಎಸಿ ಬಸ್ ಹಾಗೂ ಧಾರವಾಡ ರೈಲು ನಿಲ್ದಾಣಕ್ಕೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ರೈಲಿನ ಆಗಮನ – ನಿರ್ಗಮನ ಸಮಯಕ್ಕೆ ಅನುಗುಣವಾಗಿ ಈ ಬಸ್ಸುಗಳು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ವೋಲ್ವೊ ಎಸಿ ಬಸ್ಸು ಒಂದು ಬಸ್ಸು ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಳಿಗ್ಗೆ ೧೧-೩೦ಕ್ಕೆ ಹೊರಡುತ್ತದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಮಧ್ಯಾಹ್ನ ೧-೩೦ಕ್ಕೆ ತಲುಪುತ್ತದೆ. ಇನ್ನೊಂದು ಬಸ್ಸು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೧೧-೦೦ ಕ್ಕೆ ಹೊರಡುತ್ತದೆ. ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ೧-೧೦ಕ್ಕೆ ಆಗಮಿಸಲಿದೆ. ಪ್ರಯಾಣ ದರ ರೂ.೧೮೦ ನಿಗದಿಪಡಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಬಸ್ಸುಗಳ ಸದುಪಯೋಗಪಡಿಸಿಕೊಳ್ಳುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಭರತ್ ಕೋರಿದ್ದಾರೆ.


ರಾಜಹಂಸ ಬಸ್ ಸಂಚಾರ ಸಮಯ: ಒಂದು ಬಸ್ಸು ಧಾರವಾಡ ರೈಲು ನಿಲ್ದಾಣದಿಂದ ಮಧ್ಯಾಹ್ನ ೧೨-೨೫ಕ್ಕೆ ಹೊರಡುತ್ತದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ೧-೫೫ಕ್ಕೆ ತಲುಪುತ್ತದೆ. ಇನ್ನೊಂದು ಬಸ್ಸು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೧೧-೨೦ಕ್ಕೆ ಹೊರಡುತ್ತದೆ. ಧಾರವಾಡ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ೧೨-೫೦ಕ್ಕೆ ಆಗಮಿಸಲಿದೆ. ಪ್ರಯಾಣ ದರ ರೂ.೧೩೫ ನಿಗದಿಪಡಿಸಲಾಗಿದೆ