ವಕೀಲರ ಹೋರಾಟಕ್ಕೆ ಬಿಜೆಪಿ ಬೆಂಬಲ

Advertisement

ಬೆಂಗಳೂರು: ನ್ಯಾಯೋಜಿತ ಬೇಡಿಕೆ ಇಟ್ಟು ಧರಣಿ ನಡೆಸುತ್ತಿರುವ ವಕೀಲರ ಹೋರಾಟವನ್ನು ಕರ್ನಾಟಕ ಬಿಜೆಪಿ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ‘ದೇಶ ಭಕ್ತರ ಸೆರೆ – ವಿದ್ರೋಹಿಗಳ ಪೊರೆ’ ಎಂಬುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೀತಿಯಾಗಿದೆ.
ಜ್ಞಾನವ್ಯಾಪಿ ಮಸೀದಿ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರ ಕುರಿತು ಅವಹೇಳನ ಮಾಡಿ ನ್ಯಾಯಾಂಗ ಹಾಗೂ ಸವಿಂಧಾನವನ್ನು ಧಿಕ್ಕರಿಸಿದ ರಾಷ್ಟ್ರ ವಿಧ್ವಂಸಕ ಮನಸ್ಥಿತಿಯ ಮತೀಯವಾದಿ ವಿದ್ರೋಹಿಯನ್ನು ಸ್ವಯಂ ದೂರು ದಾಖಲಿಸಿಕೊಂಡು ರಾಮನಗರ ಪೋಲಿಸರು ಬಂಧಿಸಿ ಕ್ರಮ ಕೈಗೊಳ್ಳಬೇಕಾಗಿತ್ತು.

ಆದರೆ ಈ ಸಂಬಂಧ ವಕೀಲರ ಸಂಘ ದೂರು ನೀಡಿದರೂ ಆರೋಪಿಯನ್ನು ಬಂಧಿಸದೇ ಸ್ವಧರ್ಮೀಯ ಎಂಬ ಕಾರಣಕ್ಕೆ ಆರೋಪಿಯಿಂದಲೇ ದೂರು ಬರೆಸಿಕೊಂಡು ವಕೀಲರ ಮೇಲೇ ದೂರು ದಾಖಲಿಸಿಕೊಂಡು ಉದ್ಧಟತನ ಹಾಗೂ ಸ್ವಜನ ಪಕ್ಷಪಾತ ಮೆರೆದಿರುವ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ, ಈ ಕೂಡಲೇ ಈ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಬಂಧಿಸಿ ವಿಚಾರಣೆ ಆರಂಭಿಸಬೇಕಿದೆ.

ದೇಶ ವಿರೋಧಿ ಆರೋಪಿತನ ರಕ್ಷಣೆಗೆ ನಿಂತ ಸಬ್ ಇನ್ಸಪೆಕ್ಟರ್ ತನ್ವೀರ್ ಹುಸೇನ್ ಬೆನ್ನ ಹಿಂದೆ ಯಾವುದಾದರೂ ಬಲಾಢ್ಯ ಶಕ್ತಿ ಇದ್ದು ಕುಮ್ಮಕ್ಕು ನೀಡಿರಲೇಬೇಕು, ಇಲ್ಲವಾದರೆ ನ್ಯಾಯಾಧೀಶರನ್ನೇ ಅವಹೇಳನ ಮಾಡುವ ದುಷ್ಟನ ರಕ್ಷಣೆಗೆ ನಿಲ್ಲಲು ಸಬ್ ಇನ್ಸಪೆಕ್ಟರ್‌ಗೆ ಇಷ್ಟೊಂದು ಧೈರ್ಯ ಬರಲು ಹೇಗೆ ಸಾಧ್ಯ?

ಈ ಘಟನೆಯ ಹಿಂದೆ ಕಾಂಗ್ರೆಸ್ ಇಲ್ಲವೆನ್ನುವುದನ್ನು ರುಜುವಾತು ಪಡಿಸಲು ಈ ಕೂಡಲೇ ಈ ಘಟನೆಯ ಹಿಂದಿರುವ ಸತ್ಯ ಹೊರತೆಗೆಯಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲಿ. ಈ ಸಂಬಂಧ ನ್ಯಾಯೋಜಿತ ಬೇಡಿಕೆ ಇಟ್ಟು ಧರಣಿ ನಡೆಸುತ್ತಿರುವ ವಕೀಲರ ಹೋರಾಟವನ್ನು ಕರ್ನಾಟಕ ಬಿಜೆಪಿ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದಿದ್ದಾರೆ.