ವನ್ಯಜೀವಿ ರಕ್ಷಣೆಗೆ ತಜ್ಞ ವೈದ್ಯರೇ ಇಲ್ಲ

Advertisement

ರಾಜ್ಯದಲ್ಲಿ ಅಭಯಾರಣ್ಯಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಆದರೆ ವನ್ಯಜೀವಿಗಳನ್ನು ರಕ್ಷಿಸಲು ತಜ್ಞ ವೈದ್ಯರೇ ಇಲ್ಲ. ಪಶು ವೈದ್ಯರೇ ಇಲ್ಲಿಗೂ ನೇಮಕಗೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಇನ್ನೂ ಇದರ ಬಗ್ಗೆ ಚಿಂತನೆ ನಡೆಸಲು ಹೋಗಿಲ್ಲ.

ರಾಜ್ಯದ ಅಭಯಾರಣ್ಯಗಳಲ್ಲಿ ಆನೆ, ಹುಲಿ ಮತ್ತು ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವುಗಳನ್ನು ನೋಡಿಕೊಳ್ಳಲು ವನ್ಯಜೀವಿಗಳ ಆರೋಗ್ಯಕಾಪಾಡಲು ಅರಣ್ಯ ಇಲಾಖೆ ಪ್ರತ್ಯೇಕ ತಜ್ಞ ವೈದ್ಯರನ್ನೇ ನೇಮಿಸಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿರತೆಯೊಂದನ್ನು ಹೊಡೆದು ಕೊಲ್ಲಲಾಯಿತು. ತಜ್ಞ ವೈದ್ಯರಿದ್ದರೆ ಚಿರತೆಯನ್ನು ಉಳಿಸಬಹುದಾಗಿತ್ತು. ಇದಕ್ಕೆ ಅರಣ್ಯ ಇಲಾಖೆ ಹೊಣೆಹೊರಬೇಕು. ಈಗ ಪಶು ಸಂಗೋಪನಾ ಇಲಾಖೆಯಲ್ಲಿ ವನ್ಯಜೀವಿಗಳ ಬಗ್ಗೆ ಆಸಕ್ತಿ ಇರುವ ಪಶು ವೈದ್ಯರನ್ನು ಅರಣ್ಯ ಇಲಾಖೆಗೆ ಎರವಲು ಸೇವೆಯ ಮೇಲೆ ಕಳುಹಿಸಿಕೊಡಲಾಗುತ್ತಿದೆ. ಅವರಲ್ಲಿ ಆಸಕ್ತಿ ಇರುವವರು ಮಾತ್ರ ಉಳಿಯತ್ತಾರೆ. ಉಳಿದವರು ಬಡ್ತಿ ಮತ್ತಿತರ ಸವಲತ್ತು ದೊರಕಿದ ಕೂಡಲೇ ಮಾತೃ ಸಂಸ್ಥೆಗೆ ಹಿಂತಿರುಗುತ್ತಾರೆ. ಅವರು ಗಳಿಸಿದ ಅನುಭವ ವ್ಯರ್ಥವಾಗಿ ಹೋಗುತ್ತಿದೆ. ಇದರ ಬಗ್ಗೆ ಇಲಾಖೆಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸರ್ಕಾರ ತೀರ್ಮಾನ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ. ಆನೆ, ಹುಲಿ ಮತ್ತು ಚಿರತೆ ಸೇರಿದಂತೆ ವನ್ಯಜೀವಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸುವ ವೈದ್ಯರು ಬೇಕು. ಪಶು ಸಂಗೋಪನೆ ಅಧ್ಯಯನ ನಡೆಸಿದವರಲ್ಲಿ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಬೇತಿ ನೀಡಬಹುದು. ಡೆಹ್ರಾಡೂನ್‌ನಲ್ಲಿ ಐಎಫ್‌ಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಕಾಲೇಜು ಇದೆ. ಅಲ್ಲಿ ಪಶು ವೈದ್ಯರಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಮಾಡಬಹುದು. ಇದು ಅಖಿಲ ಭಾರತ ಮಟ್ಟದ ಸೇವೆ ಆಗುವುದು ಅಗತ್ಯ. ಈಗ ರಾಜ್ಯದಲ್ಲಿ ಪ್ರಾಣಿ ಸಂಗ್ರಹಾಲಯಗಳು ಅಧಿಕಗೊಳ್ಳುತ್ತಿವೆ. ವನ್ಯಜೀವಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಅದಕ್ಕೆ ತಕ್ಕಂತೆ ಸರ್ಕಾರ ಸ್ಪಂದಿಸುವುದು ಅಗತ್ಯ. ವನ್ಯಜೀವಿಗಳು ಸತ್ತಾಗ ಅದರ ಅಂಗಗಳನ್ನು ಬಳಸಬಾರದು ಎಂದು ಎಲ್ಲ ಕಡೆ ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಆದರೆ ವನ್ಯಜೀವಿಗಳನ್ನು ರಕ್ಷಿಸಲು ಸರಿಯಾದ ತರಬೇತಿ ಪಡೆದ ವೈದ್ಯರೇ ಇಲ್ಲ. ಇದರ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದರೂ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಕಡತ ಹಾಗೇ ಉಳಿದಿದೆ. ಪ್ರತ್ಯೇಕ ವಿಭಾಗ ತೆರೆದರೆ ಹೆಚ್ಚು ಜನ ತರಬೇತಿ ಪಡೆಯುತ್ತಾರೆ. ಅವರಿಗೆ ಉದ್ಯೋಗ ಕೊಡುವುದಕ್ಕೆ ಅವಕಾಶ ಇಲ್ಲ ಎಂಬುದು ಸರ್ಕಾರದ ಚಿಂತೆ. ರಾಷ್ಟಿçÃಯ ಮಟ್ಟದಲ್ಲಿ ವನ್ಯಜೀವಿ ವೈದ್ಯರ ನೇಮಕವಾದರೆ ಈ ಸಮಸ್ಯೆ ಇರುವುದಿಲ್ಲ.ಮಧ್ಯಪ್ರದೇಶದಲ್ಲಿ ಪ್ರತ್ಯೇಕ ವೈದ್ಯರ ತರಬೇತಿ ಆರಂಭಗೊಂಡಿದೆ. ಕರ್ನಾಟಕ ಆ ರಾಜ್ಯದ ಅನುಭವದ ಮೇಲೆ ಇಲ್ಲೂ ತರಬೇತಿ ಆರಂಭಿಸಬಹುದು. ಉಲ್ಲಾಸ ಕಾರಂತ ಅವರು ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಸಂಶೋಧನೆ ಕೈಗೊಂಡಿದ್ದರು. ಅವರು ವೈದ್ಯರಲ್ಲ. ಹೀಗಾಗಿ ಅಧ್ಯಯನ ಕೇವಲ ರೇಡಿಯೋ ಕಾಲರ್ ಅಳವಡಿಕೆಗೆ ಸೀಮಿತಗೊಂಡಿತು. ಈಗ ಎಲ್ಲ ಕಡೆ ವನ್ಯಜೀವಿಗಳ ಬಗ್ಗೆ ಜನರಲ್ಲಿ ಆಸಕ್ತಿ ಮತ್ತು ಅಭಿಮಾನ ಮೂಡುತ್ತಿದೆ. ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಮಟ್ಟದಲ್ಲಿ ನಶಿಸಿಹೋಗುತ್ತಿರುವ ಪ್ರಾಣಿಗಳ ಪಟ್ಟಿಮಾಡಿ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಅವುಗಳಿಗೆ ರೋಗ ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಲು ತಂತ್ರಜ್ಞಾನ ನಮ್ಮಲ್ಲಿ ಇಲ್ಲ. ಇವುಗಳಿಗೆ ಹಣ ತೊಡಗಿಸುವುದು ವ್ಯರ್ಥ ಎಂಬ ಭಾವನೆಯೂ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವನ್ಯಜೀವಿಗಳ ರಕ್ಷಣೆಗೆ ಮಾನದಂಡಗಳು ರಚನೆಯಾಗಿವೆ. ಅವುಗಳನ್ನು ಪಾಲಿಸುವುದು ಎಲ್ಲ ದೇಶಗಳ ಕರ್ತವ್ಯ. ಪರಿಸರ ರಕ್ಷಣೆ ಎಂದರೆ ಅದರಲ್ಲಿ ವನ್ಯಜೀವಿಗಳೂ ಬರುತ್ತವೆ.
ಆರಣ್ಯ ರಕ್ಷಣೆ ಎಂದರೆ ಅದರಲ್ಲಿರುವ ವನ್ಯಜೀವಿಗಳೂ ಸೇರುತ್ತವೆ ಎಂಬುದನ್ನು ಮರೆಯಬಾರದು.ಐಎಫ್‌ಎಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರನ್ನು ಇತರ ಇಲಾಖೆಗಳಿಗೂ ನೇಮಿಸುವ ಪರಿಪಾಠ ಬೆಳೆದಿದೆ. ಕೆಲವು ಐಎಫ್‌ಎಸ್ ಅಧಿಕಾರಿಗಳು ಕಾಡನ್ನೇ ನೋಡಿರುವುದಿಲ್ಲ.ಪಶ್ಚಿಮ ಘಟ್ಟ ಅತಿಸೂಕ್ಷ್ಮ ವಲಯವಾಗಿರುವುದರಿಂದ ಅದರ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಗತ್ಯ.ವನ್ಯಜೀವಿಗಳಿಗೆ ನಮ್ಮಷ್ಟೇ ಬದುಕುವ ಹಕ್ಕಿದೆ ಎಂಬುದನ್ನು ಮರೆತಿದ್ದೇವೆ. ಮೋಟಾರು ವಾಹನಗಳು ಕಾಡಿನಲ್ಲಿ ರಾತ್ರಿವೇಳೆ ಸಂಚರಿಸುತ್ತವೆ. ಇದರಿಂದ ಅಲ್ಲಿಯ ಜೀವಿಗಳಿಗೆ ಆಗುವ ತೊಂದರೆಯನ್ನು ಪರಿಗಣಿಸುವುದಿಲ್ಲ.ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ರಾತ್ರಿ ಮೋಟಾರು ಸಂಚಾರ ನಿಷೇಧಿಸಿದ್ದರೂ ಅದನ್ನು ರದ್ದುಪಡಿಸಬೇಕೆಂಬ ಬೇಡಿಕೆಗೆ ಹೈಕೋರ್ಟ್ ಒಪ್ಪಿಲ್ಲ.