ವರ್ತಮಾನಕ್ಕೆ ವಿಹಿತ ಯಾವುದೋ ಅದೇ ಧರ್ಮ

Advertisement

ನಮ್ಮದೇಶ ಸಂಸ್ಕಾರ ಸಂಸ್ಕೃತಿ ನಾಗರಿಕತೆ ನೈತಿಕತೆಗೆ ಇಡಿ ಜಗತ್ತಿಗೆ ಮಾದರಿಯಾಗಿದ್ದು ಇತಿಹಾಸವಿದೆ. ಈ ನೆಲದ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ಜಗವೆಲ್ಲಾ ನಗುತಿರಲಿ ಜಗದಳುವು ನನಗಿರಲಿ ಎಂಬ ಭಾವನೆ ಬಂದಾಗ ಮಾತ್ರ ಶಾಂತಿ ಸೌಹಾರ್ದತೆಯಿಂದ ಬದುಕಲು ಸಾಧ್ಯ. ಹಜರತ್ ಪ್ರವಾದಿ ಮೊಹ್ಮದ ಪೈಗಂಬರರು ತನ್ನ ಕಾಲ ಘಟ್ಟದಲ್ಲಿ ಹಿಂದುಸ್ತಾನ ಸೆ ಜನ್ನತಕಿ ಠಂಡಿ ಹವಾ ಆತಿ ಹೈ ಎಂದು ನಮ್ಮ ದೇಶದ ಬಗ್ಗೆ ವರ್ಣಣೆ ಮಾಡಿದ್ದರು. ನನಗೆ ಹಿಂದುಸ್ತಾನದಿಂದ ಸ್ವರ್ಗದ ತಂಪುಗಾಳಿ ಬದುವದನ್ನು ಅನುಭವಿಸುತ್ತೇನೆ ಎಂದು ನುಡಿದಿದ್ದರು. ಆದರೆ ನಾವು ಸ್ವಾರ್ಥ ಅಸೂಯೆ, ದ್ವೇಷ ತುಂಬಿಕೊಂಡ ದೇಶದಲ್ಲಿ ಅಶಾಂತಿಯುಂಟು ಮಾಡುವ ಕೆಲಸ ಮಾಡುತ್ತಿದ್ದೇವಲ್ಲವೇ..?
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ ಕೇವಲ ಭಾಷಣಗಳಲ್ಲಿ ಕೇಳುತ್ತೇವೆ ಆಪ್ ಭಲಾ ತೋ ಜಗ ಭಲಾ ಎಂಬ ಭಾವನೆ ಬರಬೇಕಿದೆ.
ಮನುಷ್ಯನಾದ ಮೇಲೆ ಇನ್ನೊಬ್ಬರ ಕಷ್ಟ ಅರ್ಥ ಮಾಡಿಕೊಂಡು ಅವರ ಸಹಾಯಕ್ಕೆ ನಿಲ್ಲುವದು ಮಾನವ ಧರ್ಮ, ಅದನ್ನು ಬಿಟ್ಟು ಮೈ ಔರ್ ಮೇರೆ ಜೋರು ಬಚ್ಚೆ. ಅಚ್ಛೇ ಬಾಕಿ ಸಬ್ ಲುಚ್ಚೆ ಅನ್ನುವ ಮನೋವೃತ್ತಿ ಬಂದಾಗ ದೇಶ ಹೇಗೆ ಶಾಂತಿಯಿಂದ ಇರಲು ಸಾಧ್ಯ? ಜಾತಿ ಜಾತಿಗಳಲ್ಲಿ ಮತೀಯ ದಳ್ಳುರಿ ತಾಂಡವಾಡುತ್ತಲಿದೆ.
ನಡೆವುದೊಂದೇ ಭೂಮಿ
ಕುಡಿಯುವದೊಂದೇ ನೀರು
ಸುಡುವದೊಂದೇ ಅಗ್ನಿ…..
ಹೀಗಿರಲು ಶ್ರೇಷ್ಠತೆಯ ವ್ಯಸನವನ್ನು ಇಟ್ಟುಕೊಂಡು ಹೊಡೆದಾಡುತ್ತಲಿರುವುದು ಜಗತ್ತಿನ ಶಾಂತಿಗೆ ಅಡ್ಡಿಯಾಗುತ್ತದೆ. ಅಂತಃಕಲಹ ಎಂದಿಗೂ ಒಳ್ಳೆಯದಲ್ಲ. ಹಲವು ಧರ್ಮಗಳು ಸಿದ್ಧಾಂತಗಳು, ಮತಗಳು ದರ್ಶನಗಳು ಇತ್ಯಾದಿಗಳಿದ್ದರೂ ಎಲ್ಲವೂ ಭಿನ್ನವಲ್ಲ. ಬದಲಾಗಿ ಆಯಾ ಕಾಲ ಸಂದರ್ಭಕ್ಕೆ ತಕ್ಕಂತೆ ನಡೆದು ಹೋಗಿವೆ. ವರ್ತಮಾನದ ಸಂದರ್ಭದಲ್ಲಿ ವಿಹಿತವಾಗುವುದು ಯಾವುದೋ ಅದನ್ನು ನಾವು ಪಾಲಿಸಬೇಕು. ವೇಷ, ಭಾಷೆ, ಆಹಾರವನ್ನಿಟ್ಟುಕೊಂಡು ಬಡಿದಾಡುವುದು ಎಂಥ ಹುಚ್ಚತನವೆನಿಸದೇ ಇರದು.
ಅನೇಕ ಮಹಂತರು ಕಾಲ ಕಾಲಕ್ಕೆ ಬುದ್ಧಿ ಹೇಳುತ್ತಲೇ ಬಂದಿದ್ದಾರೆ. ಮತ್ತೊಬ್ಬರ ಕಷ್ಟಕ್ಕೆ ಒದಗುವದು. ಹಸಿದವರಿಗೆ ಅನ್ನ ನೀಡುವುದು ಇವು ನಿಜವಾದ ಧರ್ಮಗಳಾಗಿವೆ. ಜಾತಿ ಜಂಜಾಟದಿಂದ ಹೊರ ಬಂದು ನನ್ನಿಂದ ದೇಶ ಏನು ಬಯಸುತ್ತದೆ ಎಂಬುದನ್ನು ಚಿಂತಿಸಿ ಸಮ್ಯಕ್ ದಾರಿಯಲ್ಲಿ ನಡೆಯಬೇಕಾಗಿದ್ದು ಇಂದಿನ ತುರ್ತು ಕೆಲಸವಾಗಿದೆ.