ವಾಕರಸಾಸಂ ಅಧ್ಯಕ್ಷ ಸ್ಥಾನದಿಂದ ಪಾಟೀಲ್ ಔಟ್!

ವಿ.ಎಸ್.ಪಾಟೀಲ್
Advertisement

ಮುಂಡಗೋಡ/ಹುಬ್ಬಳ್ಳಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಅವರ ನಾಮನಿರ್ದೇಶನ ರದ್ದು ಮಾಡಿ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪಾ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರು ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
ವಿ.ಎಸ್. ಪಾಟೀಲ ಅವರು ೨೦೧೯ರಲ್ಲಿ ಅಂದರೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಂಸ್ಥೆಯ ನಾಮನಿರ್ದೇಶಿತ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ವಿ.ಎಸ್. ಪಾಟೀಲ ಅವರು ಕಳೆದ ಮೂರು ಚುನಾವಣೆಗಳಲ್ಲಿ ಶಿವರಾಮ ಹೆಬ್ಬಾರ ಅವರ ಎದುರಾಳಿಯಾಗಿ ಕಣಕ್ಕಿಳಿದಿದ್ದರು. ೨೦೦೮ರಲ್ಲಿ ಹೆಬ್ಬಾರ ಅವರು ಪಾಟೀಲ ಅವರ ವಿರುದ್ಧ ಪರಾಭವಗೊಂಡಿದ್ದರು. ಬಳಿಕ ೨೦೧೩, ೨೦೧೮ರಲ್ಲಿ ಹೆಬ್ಬಾರ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಪಾಟೀಲರು ಪರಾಭವಗೊಂಡಿದ್ದರು.
ಪ್ರತಿಕ್ರಿಯೆ ನೀಡಿರುವ ವಿ.ಎಸ್.ಪಾಟೀಲರು, ಹಲವಾರು ವರ್ಷಗಳಿಂದ ಪಕ್ಷದಲ್ಲಿ ದುಡಿದಂತಹ ಹಿರಿಯ ಕಾರ್ಯಕರ್ತರು ಇದ್ದು ಅವರಿಗೂ ಅವಕಾಶ ನೀಡಲು ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಸಚಿವರು ನನ್ನ ಹಾಗೂ ನನ್ನ ಬೆಂಬಲಿಗರನ್ನು ಕಡೆಗಣಿಸುತ್ತಿದ್ದಾರೆ. ಬೆಂಬಲಿಗರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡುತ್ತಿಲ್ಲ. ಆದ್ದರಿಂದ ಬೇಸತ್ತು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸುವುದಾಗಿ ತಿಳಿಸಿದರು.