ವಾಯುಭಾರ ಕುಸಿತ: ಗೋವಾಕ್ಕೆ ಆರೇಂಜ್ ಅಲರ್ಟ್

Advertisement

ಪಣಜಿ: ಗಣೇಶ ಚತುರ್ಥಿಯಿಂದ ಗೋವಾದಲ್ಲಿ ಭಾರೀ ಮಳೆಯಾಗುತ್ತಿದೆ ಮತ್ತು ಕಳೆದ ಎರಡು ದಿನಗಳಿಂದ ಮಳೆಯಿಂದ ಸ್ವಲ್ಪ ವಿರಾಮ ಕಂಡುಬಂದಿದೆ. ಮತ್ತೆ ಶುಕ್ರವಾರ ಬೆಳಗ್ಗೆಯಿಂದಲೇ ರಾಜ್ಯದಲ್ಲಿ ಧಾರಾಕಾರ ಮಳೆ ಆರಂಭಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ದಕ್ಷಿಣ ಕೊಂಕಣ ಮತ್ತು ಗೋವಾದ ಕರಾವಳಿ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಸ್ಥಿತಿ ರೂಪುಗೊಂಡಿದೆ. ಹೀಗಾಗಿ ಭಾನುವಾರದವರೆಗೆ ಗೋವಾ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಲಯ ನಿರ್ಮಾಣವಾಗಿರುವ ಕಾರಣ ಕೊಂಕಣ-ಗೋವಾ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಭಾನುವಾರ ಕೂಡ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಾಗರಿಕರು ಎಚ್ಚರದಿಂದ ಇರುವಂತೆ ಮನವಿ ಮಾಡಲಾಗಿದೆ. ಗೋವಾ ರಾಜ್ಯದಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨.೩೭ ಇಂಚು ಮಳೆಯಾಗಿದ್ದು, ಇದುವರೆಗೆ ಒಟ್ಟು ೧೨೮.೯ ಇಂಚು ಮಳೆ ದಾಖಲಾಗಿದೆ.
ರಾಜಧಾನಿ ಪಣಜಿಯಲ್ಲಿ ರಸ್ತೆಗಳು ಜಲಾವೃತವಾಗಿದ್ದು, ನಗರದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಚಾಲಕರು ರಸ್ತೆಯಲ್ಲಿ ನೀರು ತುಂಬಿರುವ ಕಾರಣ ನಿಧಾನವಾಗಿ ಚಾಲನೆ ಮಾಡುವಂತಾಗಿದೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ಮಳೆ ಚುರುಕಾಗಿದ್ದು, ಚಂಡಮಾರುತದ ಸಾಧ್ಯತೆಯೂ ಇದೆ.
ಮಹಾರಾಷ್ಟ್ರ, ಗೋವಾ ಕರಾವಳಿ ಬಂದರುಗಳಲ್ಲಿ ಭಾರಿ ಮಳೆಯಾಗಲಿದ್ದು, ೪೫ರಿಂದ ೫೫ ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ರಾಜ್ಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.