ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ

Advertisement

ಪಣಜಿ: ದಾಬೋಲಿ ವಿಮಾನ ನಿಲ್ದಾಣದಲ್ಲಿ `ಬಾಂಬ್’ ಇರಿಸಲಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಇ-ಮೇಲ್ ಬಂದಿದ್ದು, ಕೂಲಂಕಷ ತನಿಖೆಯ ಬಳಿಕ ಇದು ಹುಸಿ ಬೆದರಿಕೆ ಎಂದು ತಿಳಿದು ಬಂದಿದೆ.
ದೇಶದ ೧೩ ವಿಮಾನ ನಿಲ್ದಾಣಗಳಿಗೂ ಇಂತಹ ಇ ಮೇಲ್ ರವಾನೆಯಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ.
ಮಂಗಳವಾರ ಬೆಳಗ್ಗೆ ಬಾಂಬ್ ಕುರಿತು ದಾಬೋಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇ ಮೇಲ್ ಬಂದ ತಕ್ಷಣ ಭದ್ರತಾ ಪಡೆಗಳು ಎಚ್ಚರಗೊಂಡವು. ಶ್ವಾನದಳದೊಂದಿಗೆ ವಾಸ್ಕೋ ಪೊಲೀಸ್ ಇಲಾಖೆ, ಸಿಐಎಸ್‌ಎಫ್, ಎಟಿಎಸ್, ಅಗ್ನಿಶಾಮಕ ದಳ ಮತ್ತು ಇತರ ಏಜೆನ್ಸಿಗಳ ನೂರಕ್ಕೂ ಹೆಚ್ಚು ಸಿಬ್ಬಂದಿ ಆಗಮಿಸಿ ಸಂಪೂರ್ಣ ಶೋಧ ನಡೆಸಿದರು. ನಂತರ ಬಾಂಬ್ ಇಟ್ಟಿರುವುದು ಕೇವಲ ಹುಸಿ ಬೆದರಿಕೆ ಎಂದು ತಿಳಿದುಬಂದಿದೆ.
ಆದರೆ ಬಾಂಬ್‌ಗೆ ಸಂಬಂಧಿಸಿದಂತೆ ಇ-ಮೇಲ್ ಬಂದಿರುವ ಮಾಹಿತಿಯನ್ನು ವಿಮಾನ ನಿಲ್ದಾಣದ ನಿರ್ದೇಶಕ ಧನಂಜಯ್ ರಾವ್ ಖಚಿತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ, ವಿಮಾನಗಳ ಓಡಾಟಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ವಿಮಾನ ನಿಲ್ದಾಣ ನಿರ್ದೇಶಕ ಧನಂಜಯ್ ರಾವ್ ಹೇಳಿದ್ದಾರೆ.