ವಿಮೆ ಹೆಸರಿನಲ್ಲಿ ಹೆಚ್ಚಿಗೆ ಹಣ ಪಡೆದ ಶೋರೂಂಗೆ ೬೦ ಸಾವಿರ ದಂಡ

Advertisement

ಕಾರವಾರ: ಗ್ರಾಹಕರೊಬ್ಬರಿಂದ ಕಾರು ಖರೀದಿ ಸಂದರ್ಭದಲ್ಲಿ ವಿಮೆಯ ಹೆಸರಿನಲ್ಲಿ ಹೆಚ್ಚಿಗೆ ಹಣ ಪಡೆದ ಶೋರೂಂಗೆ ೬೦ ಸಾವಿರ ದಂದ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಜಿಲ್ಲೆಯ ಕೈಗಾದ ಎನ್‌ಪಿಸಿಐಎಲ್ ಉದ್ಯೋಗಿ ಎ. ರಾಜಸೇಖರನ್, ಹುಬ್ಬಳಿಯ ನಾಗಶಾಂತಿ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ರೆನಾಲ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರಾಟಗಾರರ ಬಳಿ ಕಾರು ಖರೀದಿಸಿದ್ದರು. ಈ ಸಂದರ್ಭದಲ್ಲಿ ವಿಮೆ ಹಾಗೂ ಕಾರಿಗಾಗಿ ಶೋರೂಂನವರು ಹೆಚ್ಚಿಗೆ ಹಣ ಪಡೆದ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ, ಶೋರೂಂ ನವರು ಕಾರಿನ ಮೊತ್ತದಲ್ಲಿ ಹಾಗೂ ವಿಮೆಯ ಹೆಸರಿನಲ್ಲಿ ಹೆಚ್ಚಿನ ಹಣ ಪಡೆದಿರುವುದನ್ನು ಗಮನಿಸಿ, ಎದುರುದಾರರು ಸೇವಾ ನ್ಯೂನತೆಯೊಂದಿಗೆ ಅನುಚಿತ ವ್ಯಾಪಾರ ನೀತಿ ಅನುಸರಿಸಿರುವುದರಿಂದ ಹುಬ್ಬಳಿಯ ನಾಗಶಾಂತಿ ಶೋರೂಂ ಹೆಚ್ಚಿಗೆ ಪಡೆದಿದ್ದ ರೂ. ೯೫೪೮ ಗಳನ್ನು ವಾರ್ಷಿಕ ಶೇ.೧೨ ರ ಬಡ್ಡಿಯೊಂದಿಗೆ ಪಾವತಿಸುವುದರೊಂದಿಗೆ ೬೦ ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ದಂಡದ ಮೊತ್ತದಲ್ಲಿ ರೂ.೪೫,೦೦೦ ಗಳನ್ನು ದೂರುದಾರರಿಗೆ ಪರಿಹಾರ ನೀಡುವಂತೆ, ಇನ್ನು ಮುಂದೆ ಈ ರೀತಿಯ ತಪ್ಪುಗಳನ್ನು ಎಸಗದಂತೆ ಎಚ್ಚರಿಕೆಗಾಗಿ ರೂ.೫೦೦೦ ಗಳನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸುವಂತೆ ಹಾಗೂ ರೂ.೧೦೦೦೦ ಗಳನ್ನು ದೂರುದಾರರಿಗೆ ಪ್ರಕರಣದ ಖರ್ಚು ವೆಚ್ಚಕ್ಕಾಗಿ ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ. ದೂರುದಾರರ ಪರ ನ್ಯಾಯವಾದಿ ವಿ.ಎ.ತೋಡುರಕರ ಹಾಗೂ ಶೋರೂಂ ಪರವಾಗಿ ಡಿ.ಆರ್.ಭಟ್ ಅವರು ವಕಾಲತ್ತು ನಡೆಸಿದ್ದರು.