ವಿಶ್ವವಿದ್ಯಾಲಯಗಳ ಪ್ರಗತಿಗೆ ಸರ್ಕಾರ ಬದ್ಧ

Advertisement

ಬೆಳಗಾವಿ(ವಿಧಾನ ಪರಿಷತ್): ಕಳೆದ ಸರ್ಕಾರ ವಿಶ್ವವಿದ್ಯಾಲಯ ಸ್ಥಾಪನೆಯ ಮಾನದಂಡಗಳನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊಸ ವಿಶ್ವವಿದ್ಯಾಲಯ ರಚಿಸಿದೆ. ಆದರೂ ಸಹ ನಮ್ಮ ಸರ್ಕಾರ ಈ ವಿಶ್ವವಿದ್ಯಾಲಯಗಳ ಪ್ರಗತಿಗೆ ಬದ್ಧವಾಗಿದ್ದು ಕೂಡಲೇ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈ ವಿಷಯವಾಗಿ ಸಭೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ತಿಳಿಸಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಸ್ಥಾಪನೆಯಾಗಿರುವ ಏಳು ವಿಶ್ವವಿದ್ಯಾಲಯಗಳ ಪ್ರಗತಿಗೆ ಸಂಬಂಧಿಸಿದಂತೆ ಕೆ.ತಿಪ್ಪೇಸ್ವಾಮಿ, ಗೋವಿಂದರಾಜು ಗಮನ ಸೆಳೆದರು.
ಹೊಸದಾಗಿ ಸ್ಥಾಪನೆಯಾಗಿರುವ ವಿಶ್ವವಿದ್ಯಾಲಯಗಳು ಸೊರಗುತ್ತಿವೆ, ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿವೆ ಎಂದು ದೂರಿದರು.
ಉತ್ತರ ನೀಡಿದ ಸಚಿವ ಡಾ.ಸುಧಾಕರ, ಕಳೆದ ಸರ್ಕಾರ ತಜ್ಞರ ಸಮಿತಿ ವರದಿಯ ಅಂಶವನ್ನು ಪಾಲನೆ ಮಾಡಿಲ್ಲ, ಹೀಗಾಗಿ ಈ ಪರಿಸ್ಥಿತಿ ಎದುರಾಗಿದೆ, ಆದರೂ ಸಹ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಏಳು ವಿಶ್ವವಿದ್ಯಾಲಯ ಪ್ರಗತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಲಾಗುವುದು ಎಂದರು.