ವಿಶ್ವಾಸಾರ್ಹ ಪ್ರಸಾರ ಮಾಧ್ಯಮ

Advertisement

‘ಒಂದು ಹನಿ ಮಸಿ ಕೋಟಿ ಜನರಿಗೆ ಬಿಸಿ’ ಲಾರ್ಡ ಬೈರನ್ ಪತ್ರಿಕಾ ಬರವಣಿಗೆಗೆ ಇರುವ ಸಾಮರ್ಥ್ಯ ಕುರಿತು ಹೇಳಿರುವುದು ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮತ್ತು ಸುದ್ದಿಗಳ ಪ್ರಭಾವಕ್ಕೆ ನಿದರ್ಶನ. ಕನ್ನಡ ಪತ್ರಿಕೋದ್ಯಮದ ಆರಂಭವಾದುದು ಮಂಗಳೂರಿನಲ್ಲಿ. ೧೮೪೩ ಜುಲೈ ೧ ರಂದು ಕ್ರಿಶ್ಚಿಯನ್ ಧರ್ಮ ಪಾದ್ರಿ ಹೆರ್ಮನ್ ಮೋಗ್ಲಿಂಗ್ ‘ಮಂಗಳೂರು ಸಮಾಚಾರ’ ಪತ್ರಿಕೆ ಪ್ರಾರಂಭಿಸಿದ. ಮುಂದೆ ಇದು ಬಳ್ಳಾರಿಗೆ ಸ್ಥಳಾಂತರಗೊಂಡು ‘ಕನ್ನಡ ಸಮಾಚಾರ’ವಾಗಿ ಕೆಲ ಕಾಲ ಪ್ರಕಟವಾಯಿತು. ೧೮೦ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ಹಲವು ಕಾಲಘಟ್ಟಗಳಲ್ಲಿ ವಿಸ್ತಾರಗೊಳ್ಳುತ್ತ ಬಂದಿರುವ ಕನ್ನಡ ಪತ್ರಿಕೋದ್ಯಮ ಸ್ವಾತಂತ್ರ್ಯ ಹೋರಾಟ ಕಾಲಘಟ್ಟದಲ್ಲಿ ವಹಿಸಿದ ಪಾತ್ರ ಬಹಳ ಮಹತ್ವದ್ದು. ಸ್ವಾತಂತ್ರ್ಯ ನಂತರ ಭಾಷಾವಾರು ಪ್ರಾಂತ ರಚನೆ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಕನ್ನಡ ಪತ್ರಿಕೆಗಳು ಕಾರಣವಾಗಿವೆ. ಟಿ.ವಿ ಹಾಗೂ ರೇಡಿಯೋ ಅಷ್ಟಾಗಿ ಚಲಾವಣೆಯಿಲ್ಲದ ಕಾಲಘಟ್ಟದಲ್ಲಿ ಮಾಹಿತಿ ತಿಳಿಯಲು ಜನರು ಪತ್ರಿಕೆಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದರು.
ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿ ಚಲಾವಣೆಗೆ ಬಂದ ರೇಡಿಯೋ, ಇಪ್ಪತ್ತನೇ ಶತಮಾನದ ಆರಂಭದಲ್ಲಿ ಟೆಲಿವಿಷನ್ ಮಾಧ್ಯಮಗಳು ಪತ್ರಿಕೆಗಳಿಗೆ ಸ್ಪರ್ಧೆ ನೀಡಿದವು. ಹೀಗೆ ವಿದ್ಯುನ್ಮಾನ ಮಾಧ್ಯಮದ ಪೈಪೋಟಿಯನ್ನು ಮುದ್ರಣ ಮಾಧ್ಯಮ ಎದುರಿಸಿತು.
ರೇಡಿಯೊ, ಟೆಲಿವಿಷನ್ ಕಾಲದ ಸ್ಪರ್ಧೆಯಲ್ಲೂ ತನ್ನದೇ ಅಸ್ತಿತ್ವ ಕಂಡುಕೊಳ್ಳುತ್ತ ಗಟ್ಟಿಯಾಗೇ ನೆಲೆನಿಂತ ಪತ್ರಿಕೆಗಳಿಗೆ ಸ್ಪರ್ಧೆ ಇಂದಿಗೂ ಹೊಸ ಹೊಸ ರೂಪದಲ್ಲಿ ಎದುರಾಗುತ್ತಲೇ ಇದೆ. ಪ್ರತಿ ಬಾರಿ ಹೊಸ ಮಾಧ್ಯಮವೊಂದು ಮುನ್ನೆಲೆಗೆ ಬಂದಾಗ ಪತ್ರಿಕೋದ್ಯಮದ ಉಳಿವಿನ ಬಗ್ಗೆ ಆತಂಕ, ವಿಚಾರ ವಿನಿಮಯ, ಚರ್ಚೆಗಳು ನಡೆಯುತ್ತಲೇ ಇವೆ. ಪತ್ರಿಕೆಗಳಿಗೆ ಇದು ಹೊಸದೇನೂ ಅಲ್ಲ. ೧೯೯೦ರ ದಶಕದಿಂದೀಚೆಗೆ ಇಂಟರ್ನೆಟ್ ಯುಗದಲ್ಲೂ ನವಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲೂ ಪತ್ರಿಕೆಗಳು ಅಳುಕದೆ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹೊಸ ಹೊಸ ದಾರಿಗಳ ಹುಡುಕಾಟ, ನೂತನ ಪ್ರಯೋಗಗಳಲ್ಲಿ ಕ್ರಿಯಾಶೀಲವಾಗಿವೆ. ನೂತನ ತಂತ್ರಜ್ಞಾನ, ಆವಿಷ್ಕಾರಗಳ ಆಸರೆ ದೊರೆತರೆ ಸಾಕು ಮತ್ತೆ ಮತ್ತೆ ಚೇತರಿಕೆ ಕಾಣುತ್ತಿವೆ.
ವಾರದ ಏಳೂ ದಿನ ೨೪ ಗಂಟೆಗಳೂ ಸುದ್ದಿ ಬಿತ್ತರಿಸುವ ಟಿ.ವಿ. ಚಾನಲ್‌ಗಳ ನಡುವೆಯೂ ದಿನಪತ್ರಿಕೆಗಳ ಬೇಡಿಕೆ ಕಡಿಮೆಯಾಗಿಲ್ಲ. ಪತ್ರಿಕೆಗೆ ಈಗ ಕೇವಲ ಬೇರೆ ಮಾಧ್ಯಮವಾಗಲೀ ಬೇರೆ ಪತ್ರಿಕೆಯಾಗಲೀ ಸ್ಪರ್ಧೆ ಒಡ್ಡುತ್ತಿಲ್ಲ. ಪತ್ರಿಕೆಯ ಒಂದು ಪ್ರಕಟಣೆ ಇನ್ನೊಂದು ಪ್ರಕಟಣೆಗೆ, ಒಂದು ವಿಭಾಗ ಇನ್ನೊಂದು ವಿಭಾಗಕ್ಕೆ ಸ್ಪರ್ಧೆ ಒಡ್ಡುವ ಸನ್ನಿವೇಶ ಇದೆ. ತನ್ನದೇ ಆನ್‌ಲೈನ್ ಆವೃತ್ತಿಯೊ, ಫೇಸ್‌ಬುಕ್ ಲೈವ್ ಕಾರ್ಯಕ್ರಮವೊ, ಯುಟ್ಯೂಬ್ ಚಾನಲ್ಲೊ ಅದರ ಮರುದಿನದ ಸುದ್ದಿ ಪ್ರಕಟಣೆಯ ವೈಖರಿಯನ್ನು ಬದಲಿಸುವ ಸಂದರ್ಭ ತಂದಿಟ್ಟು ಸವಾಲು ನೀಡಿದೆ. ಮೋಜೋ(ಮೊಬೈಲ್) ಜರ್ನಲಿಸಂ ಟಿ.ವಿ ಪತ್ರಿಕೋದ್ಯಮ ಸವಾಲಾದಂತಿದೆ. ಘಟನೆಗಳ ಲೈವ್ ದೃಶ್ಯಗಳು ಸುದ್ದಿಯೆಂದರೆ ನಡೆದ ಘಟನೆಗಳಲ್ಲಾ ನಡೆಯುತ್ತಿರುವ ಘಟನೆ ಅನ್ನುವಂತಾಗಿದೆ. ಅನಿವಾರ್ಯವಾಗಿ ಟ್ವಿಟರ್ ಮತ್ತು ಇತರ ಭೂಮಿಕೆಗಳಲ್ಲಿ ಸುದ್ದಿಯಾದುದು, ಟಿ.ವಿ ಚಾನೆಲ್‌ಗಳ ಪ್ರೈಮ್ ಟೈಮ್ ಆವರಿಸಿದ ಸುದ್ದಿಗಳಿಗೆ ಪತ್ರಿಕೆಗಳೂ ಪ್ರಮುಖ ಆಯಕಟ್ಟಿನ ಸ್ಥಳವನ್ನೇ ಒದಗಿಸುವ ಆನಿವಾರ್ಯತೆ ಈಗ ಇದೆ. ಸುದ್ದಿ ಈಗ ಪತ್ರಿಕೆಗಳ ಆಯ್ಕೆಯಿಂದ ಉಂಟಾಗುತ್ತಿಲ್ಲ. ಸುದ್ದಿ ಜರುಗುತ್ತದೆ, ಇನ್ನೆಲ್ಲೋ ಮತ್ತೆಲ್ಲೋ ಸದ್ದು ಮಾಡಿರುತ್ತದೆ, ಬೇಕಾಗಲೀ ಬೇಡವಾಗಿರಲಿ ಅದನ್ನು ಮುಖಪುಟದಲ್ಲಿ ಆ ದಿನದ ಪ್ರಮುಖ ಬೆಳವಣಿಗೆಯಾಗೇ ಪರಿಗಣಿಸಿ ಪ್ರಸ್ತುತಪಡಿಸುವ ಆಯ್ಕೆ ಮಾತ್ರ ಪತ್ರಿಕೆಗಳ ಪಾಲಿಗೆ ಉಳಿದಿದೆ.
ಸಾಮಾಜಿಕ ಮಾಧ್ಯಮಗಳ ಭರಾಟೆಯಲ್ಲಿ ದಿನ ಪತ್ರಿಕೆಗಳೂ ಸುದ್ದಿ ನೀಡುವಲ್ಲಿ ತಮ್ಮ ಮೊದಲಿನ ಸ್ವಂತಿಕೆಗಿಂತ ಕೊಂಚ ಬದಲಾದಂತೆ ಕಾಣುತ್ತಿದೆ. ಟಿ.ವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸುವ ಸುದ್ದಿಗಳನ್ನೇ (ಟ್ರೆಂಡಿಂಗ್ ಸುದ್ದಿಗಳು) ದಿನ ಪತ್ರಿಕೆಗಳು ಪ್ರಕಟಿಸಲೇಬೇಕಾದಂತಹ ಅನಿವಾರ್ಯತೆ ಈಗ ಇದೆ. ಒಂದು ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳು ಸುದ್ದಿಗಳ ಮುನ್ನೋಟ ನೀಡುತ್ತಿವೆ. ಮುದ್ರಿತ ಪತ್ರಿಕೆಗಳ ಜೊತೆಗೆ ಪ್ರತಿಯೊಂದು ಮಾಧ್ಯಮ ಸಂಸ್ಥೆ ತನ್ನದೆ ಆದ ಬಹುಮಾಧ್ಯಮ ಮೂಲಕ ಸುದ್ದಿ, ಫೋಟೋ, ವಿಡಿಯೋಗಳ ರೀಲ್ಸ್ ಗಳು, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್,ಪಾಡಕಾಸ್ಟ್, ವೆಬ್‌ಸೈಟ್‌ಗಳ ಮೂಲಕ ದಿನದ ಇಪ್ಪತ್ನಾಲ್ಕೂ ಗಂಟೆ ಓದುಗರಿಗೆ ಕೊಡಲಾರಂಭಿಸಿವೆ. ಈ ಮೂಲಕ ಡಿಜಿಟಲ್ ಆವೃತ್ತಿಗಳು ಹೆಚ್ಚುತ್ತಿವೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಪತ್ರಿಕೆಗಳಿಗೆ ತೀವ್ರ ಪೈಪೂಟಿ ನೀಡುತ್ತಿವೆ. ದೇಶದ ಯಾವುದೇ ಘಟನೆಯನ್ನು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸುವ ಪ್ರಸ್ತುತ ಪಡಿಸುವ ರೀತಿ ಹಾಗೂ ಸುಳ್ಳು ಸುದ್ದಿಗಳ ಹಾವಳಿಗಳ ಮಧ್ಯದಲ್ಲಿಯೂ ಸಾರ್ವಜನಿಕರು ಈಗಲೂ ಸುದ್ದಿಯ ಖಚಿತತೆ ಹಾಗೂ ವಿಶ್ವಾಸಾರ್ಹತೆಗಾಗಿ ಪತ್ರಿಕೆಗಳನ್ನು ಅವಲಂಬಿಸಿದ್ದಾರೆ. ಯಾವುದೇ ಘಟನೆ ಇರಲಿ ಅದನ್ನು ಪತ್ರಿಕೆಗಳಲ್ಲಿ ಓದಿದಾಗಲೇ ಅವರಿಗೆ ಸಮಾಧಾನ. ಇಂತಹ ಶಕ್ತಿ ಇರುವುದು ಪತ್ರಿಕೆಗಳಿಗೆ ಮಾತ್ರ.
ಜಗತ್ತಿನ ಬಹುತೇಕ ಮುಂದುವರಿದು ರಾಷ್ಟ್ರಗಳಲ್ಲಿ ಮುದ್ರಣವಾಗುವ ಪತ್ರಿಕೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿದ್ದು, ಆನ್‌ಲೈನ್ ಪತ್ರಿಕೆ ಓದುಗರ ಸಂಖ್ಯೆ ಅಧಿಕವಾಗಿದೆ. ಈ ಮೂಲಕ ಡಿಜಿಟಲ್ ಪತ್ರಿಕೋದ್ಯಮ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಭಾರತದಲ್ಲಿಯ ಪತ್ರಿಕೆಗಳ ಮೇಲೆ ಕೂಡ ಈ ಪ್ರಭಾವ ಕಂಡು ಬಂದಿದೆ. ಆದರೆ ಭಾರತ ದೇಶದ ಅರ್ಧದಷ್ಟು ಜನ ಸಂಖ್ಯೆಯಲ್ಲಿ ಮಧ್ಯ ವಯಸ್ಕರರು, ಇಳಿವಸ್ಸಿನವರಿಗೆ ಪತ್ರಿಕಾ ಮಾಧ್ಯಮ ಬಹಳ ಆಪ್ತವಾಗಿದೆ. ನಿತ್ಯ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವ ಆನಂದ, ಸುದ್ದಿಯ ವಿಶ್ವಾಸಾರ್ಹತೆ ಪತ್ರಿಕಾ ಮಾಧ್ಯಮದ ಮಹತ್ವವನ್ನು ತೋರಿಸುತ್ತದೆ. ಹೀಗಾಗಿ ಭಾರತದಂತಹ ದೇಶದಲ್ಲಿ ಮುದ್ರಿತ ಪತ್ರಿಕೆಗಳ ಪ್ರಸಾರಕ್ಕೆ ಇನ್ನೂ ಅಷ್ಟಾಗಿ ಧಕ್ಕೆಯಾಗಿಲ್ಲ. ಮುಖ್ಯವಾಗಿ ಸಾಮಾಜಿಕ ಜವಾಬ್ದಾರಿ ಮೆರೆಯುವಲ್ಲಿ ಪತ್ರಿಕೆಗಳು ಮುಂಚೂಣಿಯಲ್ಲಿವೆ. ಕೇವಲ ಸುದ್ದಿ ಈಗ ಓದುಗರಿಗೆ ಬೇಕಿಲ್ಲ; ಆಳವಾದ ಬಹುನೆಲೆಯ ಆಯಾಮಗಳಲ್ಲಿ ಪ್ರಮುಖ ಬೆಳವಣಿಗೆಯೊಂದನ್ನು ಮುಖ್ಯ ಸುದ್ದಿಯೊಂದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ ಪ್ರಸ್ತುತಪಡಿಸಿದರೆ ಮಾತ್ರ ಪತ್ರಿಕೆಯದೇ ವಿಭಿನ್ನ ನಿಲುವು ನೀಡಿದಂತಾಗುತ್ತದೆ. ಬದಲಾದ ತಂತ್ರಜ್ಞಾನ, ಇತರ ಮಾಧ್ಯಮಗಳ ಲಭ್ಯತೆ, ಬದಲಾದ ಸಾಮಾಜಿಕ ಸ್ಥಿತಿಗತಿಯಲ್ಲಿ ಬದಲಾಗುತ್ತಿರುವ ಓದುಗರ ಸ್ಪಂದನೆ ಎಲ್ಲವೂ ಪತ್ರಿಕೋದ್ಯಮದ ಸ್ವರೂಪ ಬದಲಾವಣೆಗೆ ಕಾರಣವಾಗುತ್ತಲಿವೆ.
ಪತ್ರಿಕೆಗಳು ತಮ್ಮ ಸ್ವಂತಿಕೆ ಮೆರೆಯಲು ವಾಟ್ಸ್ಅಫ್ ಗ್ರೂಪ್ ವರದಿಗಾರಿಕೆ ಬಿಡಬೇಕಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚು ಆದ್ಯತೆ, ವರದಿಗಾರಿಕೆಯಲ್ಲಿ ಕ್ಯೂಆರ್ ಬಳಕೆ ಮೂಲಕ ಹೆಚ್ಚು ವಿವರ, ಲಿಂಕ್‌ಗಳ ಬಳಕೆ ಜೊತೆಗೆ ವಿಶೇಷ ಸುದ್ದಿಗಳ ವಿಶ್ಲೇಷಣೆ, ಸಮಸ್ಯೆಗಳ ಕುರಿತು ಸಾರ್ವಜನಿಕ ಅಭಿಪ್ರಾಯ ಆಧಾರಿತ ಸಂದರ್ಶನಗಳು ಜನಸಾಮಾನ್ಯರ ಮುಖವಾಣಿಯಾಗುವ ಮೂಲಕ ಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಿಗಿಂತ ಭಿನ್ನವಾಗಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಹಾಯಕ. ಫೇಕ್ ನ್ಯೂಸ್‌ಗಳ ಹಾವಳಿಯಿಂದಾಗಿ ಅವಸರದ ಪ್ರವೃತ್ತಿಯ ಕ್ಷಣಮಾತ್ರದಲ್ಲಿ ಬಿತ್ತರಗೊಳ್ಳುವ ಅರೆಬರೆ ಬೆಂದ ಮಾಹಿತಿಗಳ ಸಾಗರದಲ್ಲಿ ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎಂಬ ಅನುಮಾನ ಓದುಗರದು. ಇದೆಲ್ಲದರ ನಡುವೆಯೇ ನಾಗರಿಕ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯ ಪ್ರಶ್ನೆಯೂ ನಮ್ಮ ಮುಂದಿದೆ. ಇಂಥ ಸಂಕ್ರಮಣ ಕಾಲದಲ್ಲಿಯೇ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗೆ ಇನ್ನಿಲ್ಲದ ಮಹತ್ವ, ಅಧಿಕೃತತೆ, ವಸ್ತುನಿಷ್ಠತೆ, ಪ್ರತ್ಯಕ್ಷ ಸಾಕ್ಷ್ಯದ ಗಟ್ಟಿತನದ ಆಸರೆ ಪುಷ್ಟಿ ನೀಡಿದೆ.

ಪ್ರೊ. ಜೆ. ಎಂ. ಚಂದುನವರ
ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ, ಕವಿವಿ