ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಚರ್ಚೆ ಇಲ್ಲ

Advertisement

ದಾವಣಗೆರೆ: ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ವಿಚಾರದ ಬಗ್ಗೆ ತಮಗೆ ಮಾಹಿತಿ ಇದೆ. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅದರ ಬಗ್ಗೆ ಚರ್ಚೆ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.
ವಿಶ್ವ ಕನ್ನಡ ಸಮ್ಮೇಳನದ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು, ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಇಲಾಖೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಬಗ್ಗೆಯಂತೂ ಚರ್ಚೆ ಇಲ್ಲ. ದಾವಣಗೆರೆಯಲ್ಲಿ ಸಮ್ಮೇಳನ ನಡೆಸಬೇಕೆಂಬ ಬಗ್ಗೆ ಮಾತ್ರ ತಮಗೆ ಮಾಹಿತಿ ಇದೆ ಎಂದು ಅವರು ತಿಳಿಸಿದರು.
ಕರ್ನಾಟಕ ಎಂಬುದಾಗಿ ರಾಜ್ಯಕ್ಕೆ ನಾಮಕರಣವಾಗಿ ೫೦ ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ ೧ರಿಂದ ಒಂದು ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ರಾಜ್ಯವ್ಯಾಪಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಆ. 22ರಂದು ಬೆಳಗಾವಿಯಲ್ಲಿ ವಿಭಾಗ ಮಟ್ಟದ ಸಭೆ ನಡೆಸಲಿದ್ದೇನೆ. ಆ. 28ಕ್ಕೆ ಕಲಬುರಗಿಯಲ್ಲಿ ವಿಭಾಗ ಮಟ್ಟದ ಸಭೆ, ಸೆ. 4ಕ್ಕೆ ಮೈಸೂರಿನಲ್ಲಿ ವಿಭಾಗ ಮಟ್ಟದ ಸಭೆ ಕರೆದು, ಆ ಸಭೆಗಳಲ್ಲಿ ಸಾಹಿತಿಗಳ ಸಲಹೆಗಳನ್ನು ಆಧರಿಸಿ, ವರ್ಷಪೂರ್ತಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮದ ಬಗ್ಗೆ ರೂಪುರೇಷೆ ನಿರ್ಧರಿಸಲಿದ್ದೇವೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಕಾಲದಲ್ಲಿ ಕರ್ನಾಟಕವೆಂದು ರಾಜ್ಯಕ್ಕೆ ನಾಮಕರಣವಾಯಿತು. ಕಾಕತಾಳಿಯವೆಂಬಂತೆ ನಾಮಕರಣವಾಗಿ ೫೦ ವರ್ಷವಾಗುತ್ತಿರುವಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಈ ಇಬ್ಬರೂ ನಾಯಕರು ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಚಿಂತನೆ ಮಾಡುವಂತವರು. ಈ ಹಿನ್ನೆಲೆಯಲ್ಲಿ ನ. 1ರಿಂದ ವರ್ಷಪೂರ್ತಿ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕರ್ನಾಟಕ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.