ವೀಳ್ಯದೆಲೆಗೆ ಬಂಗಾರದ ಬೆಲೆ

Advertisement

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮವೆಲ್ಲ ವೀಳ್ಯದೆಲೆಯಿಂದಲೇ ಕೂಡಿದೆ. ನೂರಾರು ವರ್ಷಗಳಿಂದ ವೀಳ್ಯದೆಲೆಯೇ ಜೀವಾಳವೆಂದು ಬದುಕುತ್ತ ಇದೀಗ ಬಂಗಾರದ ಬೆಲೆ ಕಾಣುವಲ್ಲಿ ಯಶಸ್ವಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಲ್ಲಿ ಕಾರಣವಾಗಿದೆ.
ವೀಳ್ಯದೆಲೆ ಒಂದು ಡಬ್ಬಿಗೆ ಬರೋಬ್ಬರಿ 6 ಸಾವಿರ ರೂ.ಗಳಾಗಿದ್ದು, ದಾಖಲೆಯ ಬೆಲೆಗೆ ಮಾರಾಟವಾಗಿ ಹಿಂದಿನ ಇತಿಹಾಸ ಮರೆಸುವಲ್ಲಿ ಯಶಸ್ವಿಯಾಗಿದೆ.
ಇದುವರೆಗೆ ಈ ಬೆಲೆ ತಲುಪಿರಲಿಲ್ಲ. ಹಲವು ದಶಕಗಳಿಂದ ವೀಳ್ಯದೆಲೆ ಮಾರಾಟ ಮಾಡುತ್ತಾ ಬಂದಿದ್ದರೂ 4 ಸಾವಿರ ರೂ.ಗಳಷ್ಟು ಒಂದು ಡಬ್ಬಿ(12 ಸಾವಿರ ವೀಳ್ಯದೆಲೆ)ಗೆ ಮಾರಾಟವಾಗಿರುವದು ದಾಖಲೆಯಾಗಿತ್ತು.
ಇದೀಗ ದಾಖಲೆ ಬೆಲೆ ತಲುಪಿರುವದು ಸಂತಸವೆನಿಸುತ್ತದೆ ಎನ್ನುತ್ತಾರೆ ವೀಳ್ಯದೆಲೆ ಬೆಳೆಗಾರ ಗಂಗಪ್ಪ ಉಳ್ಳಾಗಡ್ಡಿ.
ಒಂದೇ ಗ್ರಾಮದಲ್ಲಿ ಸುಮಾರು 400 ಕ್ಕೂ ಅಧಿಕ ಎಕರೆಯಷ್ಟು ವೀಳ್ಯದೆಲೆ ಬೆಳೆಯುತ್ತಾರೆ. ಅಂಬಾಡಿ ತಳಿಯ ವೀಳ್ಯದೆಲೆ ಈ ಮೊದಲು ಮುಂಬಯಿ, ಪುಣೆ, ಕಲ್ಕತ್ತಾ ಹಾಗೂ ಬನಾರಸ್ ಮಾರುಕಟ್ಟೆಗೆ ಸೀಮಿತವಾಗಿತ್ತು.
ಕಳೆದೆರಡು ವರ್ಷಗಳಿಂದ ರಾಜ್ಯದ ರಾಜಧಾನಿ ಬೆಂಗಳೂರು ಕೈ ಹಿಡಿದಿರುವ ಕಾರಣ ದಿನಂಪ್ರತಿ ನೂರಾರು ಡಬ್ಬಿಗಳಲ್ಲಿ ವೀಳ್ಯದೆಲೆ ರಫ್ತಾಗುತ್ತಿರುವದರಿಂದ ಉತ್ತಮ ಬೆಲೆ ದೊರಕುವಲ್ಲಿ ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.

ಈ ಭಾರಿ ಕಡಿಮೆ:
ಮಳೆ ಅಭಾವ ಹಾಗೂ ನೀರಿನ ಕೊರತೆ ಕಾರಣ ಸುಮಾರು 250 ಎಕರೆಯಷ್ಟು ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯುವಲ್ಲಿ ಕಾರಣವಾಗಿದೆ. ಈ ಬಾರಿ ಹೆಚ್ಚಿನ ರೈತರು ಬೆಳೆಗೆ ಅವಕಾಶ ನೀಡಿದ್ದು, ಗ್ರಾಮದ ಸುಮಾರು 400 ಎಕರೆಯಷ್ಟು ಪ್ರದೇಶದಲ್ಲಿ ವೀಳ್ಯದೆಲೆ ನಾಟಿ ಮಾಡಲಾಗುತ್ತಿದೆ.

ಗ್ರಾಮಸ್ಥರ ಸಹಕಾರ:
ಇತರೆ ಯಾವದೇ ಬೆಳೆಗಳಿರಲಿ ಬೆಳೆಯುತ್ತಾರೆ. ವಾಣಿಜ್ಯ ಬೆಳೆಯಾದ ಕಬ್ಬು ಹಾಗು ವೀಳ್ಯದೆಲೆಗೆ ಮೊದಲ ಪ್ರಾಶಸ್ತ್ಯ ನೀಡಿರುವ ಇಲ್ಲಿನ ರೈತರಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಕೇ ಬೇಕು. ವೀಳ್ಯದೆಲೆ ಬೆಳೆದ ರೈತನಿಗೆ ಸಹಕಾರಿಯಾಗುತ್ತಿರುವ ಗ್ರಾಮಸ್ಥರು ಪಕ್ಕದ ಜಮೀನಿನ ಕೊಳವೆ ಬಾವಿಯಿಂದ ವೀಳ್ಯದೆಲೆ ಬೆಳೆಗಾರನಿಗೆ ನೀರು ಪೂರೈಸುವ ಕಾರ್ಯ ಹಿಂದಿನಿಂದಲೂ ಬಂದಿದೆ.
ಹೀಗಾಗಿ ಇಲ್ಲಿ ಬೆಳೆದ ವೀಳ್ಯದೆಲೆ ಎಷ್ಟೇ ನೀರಿನ ಅಭಾವವಿದ್ದರೂ ಸರಿದೂಗಿಸುವಲ್ಲಿ ಗ್ರಾಮಸ್ಥರು ಟೊಂಕ ಕಟ್ಟಿ ನಿಲ್ಲುತ್ತಿರುವದು ವಿಶೇಷ. ಗ್ರಾಮದ ಪ್ರಮುಖ ಬೆಳೆ ಹಾಗೂ ಹಳೆಯ ತಲೆಮಾರುಗಳಿಂದ ಈ ಸಹಕಾರ ಬಂದಿರುವ ಕಾರಣ ಈಗಲೂ ನಿರಂತರವಾಗಿದ್ದು, ವೀಳ್ಯದೆಲೆ ಬೆಳೆದ ರೈತ ಎಂದಿಗೂ ಹಾನಿಗೊಳಗಾಗಬಾರದೆಂಬ ಉದ್ದೇಶವಾಗಿದೆ.