ವೇಗಕ್ಕಿಂತ ಸುರಕ್ಷಿತ ರೈಲು ಪ್ರಯಾಣಕ್ಕೆ ಮೊದಲ ಆದ್ಯತೆ

Advertisement

ರೈಲ್ವೆ ಮಂಡಳಿ ಇಸ್ರೋ ಸಂಸ್ಥೆಯ ನೆರವನ್ನು ಸಂಪೂರ್ಣವಾಗಿ ಬಳಸಿಕೊಂಡಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಅತಿ ವೇಗದ ರೈಲಿಗಿಂತ ಸುರಕ್ಷಿತ ರೈಲ್ವೆ ಪ್ರಯಾಣ ಅಗತ್ಯ.

ರೈಲು ಪ್ರಯಾಣ ಎಷ್ಟು ಆನಂದದಾಯಕವಾಗಿ ಕಾಣುತ್ತದೋ ಅಪಘಾತ ನಡೆದಾಗ ನರಕವಾಗಿ ಬಿಡುತ್ತದೆ. ಇತ್ತೀಚೆಗೆ ಒಡಿಶಾದಲ್ಲಿ ಮೂರು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ೨೯೬ ಜನ ಪ್ರಾಣ ಕಳೆದುಕೊಂಡಿದ್ದು ಇನ್ನೂ ಜನರ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ. ಈ ನೋವನ್ನು ಮರೆಯುವುದಕ್ಕೆ ಮೊದಲೇ ಆಂಧ್ರದಲ್ಲಿ ಮತ್ತೊಂದು ಅಪಘಾತ ಸಂಭವಿಸಿ ೧೪ ಜನ ಪ್ರಾಣ ಕಳೆದುಕೊಂಡಿದ್ದು ಎಲ್ಲರನ್ನೂ ಚಿಂತೆಗೀಡು ಮಾಡಿದೆ. ರೈಲ್ವೆ ಮಂಡಳಿ ಅತಿ ವೇಗದ ರೈಲುಗಳನ್ನು ಪರಿಚಯಿಸುವುದರಲ್ಲಿ ತೋರುವ ಆಸಕ್ತಿಯನ್ನು ರೈಲ್ವೆ ಅಪಘಾತ ತಡೆಯುವುದಕ್ಕೆ ನೀಡುತ್ತಿಲ್ಲ. ರೈಲ್ವೆ ಮಂಡಳಿ ಮತ್ತು ಇಸ್ರೋ ಸಂಸ್ಥೆ ಒಪ್ಪಂದವನ್ನು ಮಾಡಿಕೊಂಡಿದೆ. ಪ್ರತಿ ರೈಲ್ವೆ ಎಂಜಿನ್‌ಗೆ ಚಿಪ್ ಅಳವಡಿಸಿ ಪ್ರತಿ ಕ್ಷಣವೂ ಅದು ಎಲ್ಲಿದೆ ಎಂಬುದನ್ನು ಉಪಗ್ರಹ ಸಂಪರ್ಕದ ಮೂಲಕ ಕಂಡು ಹಿಡಿಯಲು ಸಾಧ್ಯವಾಗಿದೆ. ಆದರೆ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ.
ನಮ್ಮದು ಜಗತ್ತಿನಲ್ಲೇ ಅತಿ ದೊಡ್ಡ ರೈಲ್ವೆ ಮಾರ್ಗ. ಒಟ್ಟು ೬೭೯೫೬ ಕಿಮೀ ಮಾರ್ಗವಿದೆ. ೨೧೬೪೮ ರೈಲುಗಳನ್ನು ಸಂಚರಿಸುತ್ತಿವೆ. ೨.೫೦ ಕೋಟಿ ಜನ ಸಂಚಾರ ಮಾಡುತ್ತಾರೆ. ಇದರಲ್ಲಿ ೩೦ ಲಕ್ಷ ಜನ ಮಾತ್ರ ಸೀಟು ಕಾಯ್ದಿರಿಸಿಕೊಂಡು ಪ್ರಯಾಣ ಮಾಡುತ್ತಾರೆ. ೩೩.೨ ಲಕ್ಷ ಟನ್ ಸರಕು ಸಾಗಣೆಯಾಗುತ್ತಿದೆ. ಇಂಥ ಬೃಹತ್ ಸಾರಿಗೆ ವ್ಯವಸ್ಥೆಯಲ್ಲಿ ಅಪಘಾತ ನಡೆದರೆ ಅದರ ಪರಿಣಾಮವೂ ಭೀಕರ. ನಾವು ಅತಿ ವೇಗದ ರೈಲುಗಳಿಗೆ ಆದ್ಯತೆ ನೀಡುವ ಮುನ್ನ ಜನರ ಸುರಕ್ಷತೆ ಬಗ್ಗೆ ಚಿಂತಿಸುವುದು ಅಗತ್ಯ. ರೈಲು ನಿಧಾನವಾಗಿ ಸಂಚರಿಸಿದರೂ ಪರವಾಗಿಲ್ಲ. ಸುರಕ್ಷಿತ ಪ್ರಯಾಣವನ್ನು ಜನ ಬಯಸುತ್ತಾರೆ. ನಮ್ಮಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುವುದು ರೈಲು ಹಳಿ ತಪ್ಪುವುದು. ಇದರಿಂದ ಸಾವು ನೋವು ಅಧಿಕಗೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ರೈಲ್ವೆ ಹಳಿಗಳ ನಿರ್ವಹಣೆ. ಇದನ್ನು ಮಾನವರು ನಿರ್ವಹಿಸುವುದೇ ಹೆಚ್ಚು. ಅವರು ಕಾಲಕಾಲಕ್ಕೆ ಹಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಳೆ, ಪ್ರವಾಹ, ಭೂಕಂಪ ಸೇರಿದಂತೆ ಹಲವು ನೈಸರ್ಗಿಕ ವಿಕೋಪಗಳಿಂದ ರೈಲುಹಳಿಗೆ ಧಕ್ಕೆ ಒದಗುವುದು ಸಾಮಾನ್ಯ ಸಂಗತಿ. ಈಗ ರೈಲು ಹಳಿಗಳ ಪರಿಶೀಲನೆಗೆ ಯಂತ್ರಗಳನ್ನೂ ಬಳಸಲಾಗುತ್ತಿದೆ. ಆದರೂ ಮನುಷ್ಯರ ಸೇವೆ ಅನಿವಾರ್ಯ. ಇಡೀ ದೇಶದಲ್ಲಿ ೧೭ ರೈಲ್ವೆ ವಲಯಗಳಿವೆ. ಪ್ರತಿ ವಲಯವನ್ನು ಹಿರಿಯ ಅಧಿಕಾರಿಗಳು ನಿರ್ವಹಿಸುತ್ತಾರೆ. ಪ್ರತಿ ರೈಲು ಸಂಚರಿಸುವಾಗ ಅದರ ಸುರಕ್ಷತೆಗೆ ಬಗ್ಗೆ ಎಚ್ಚರವಹಿಸಲು ಈಗ ಉಪಗ್ರಹ ಸಂಪರ್ಕವನ್ನು ಬಳಸಲಾಗುತ್ತಿದೆ. ಇದನ್ನು ವ್ಯಾಪಕವಾಗಿ ಬಳಸುವ ಅಗತ್ಯವಿದೆ. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ `ಕವಚ್’ ಉಪಕರಣದ ಮೂಲಕ ಎರಡು ರೈಲುಗಳ ನಡುವೆ ಡಿಕ್ಕಿ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಯಿತು. ಎರಡು ರೈಲುಗಳು ೫೦೦ ಮೀಟರ್ ದೂರದಲ್ಲೇ ನಿಲ್ಲಲಿದೆ ಎಂದು ಹೇಳಲಾಗಿತ್ತು. ಈ ಉಪಕರಣವನ್ನು ಎಲ್ಲ ರೈಲುಗಳಿಗೆ ಅಳವಡಿಸಲು ಹೆಚ್ಚಿನ ಹಣ ಬೇಕು. ವಿದೇಶಗಳಲ್ಲಿ ಬುಲೆಟ್ ಸೇರಿದಂತೆ ಹಲವು ಅತಿ ವೇಗದ ರೈಲುಗಳು ಇವೆ. ಅದಕ್ಕೆ ಬೇಕಾದ ರೈಲು ಮಾರ್ಗ ನಿರ್ಮಿಸಲಾಗಿದೆ. ಅಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ನಮ್ಮಲ್ಲಿರುವ ಸುರಕ್ಷತಾ ವ್ಯವಸ್ಥೆ ಅತಿ ವೇಗದ ರೈಲಿಗೆ ಹೇಳಿ ಮಾಡಿಸಿದ್ದಲ್ಲ. ಮೊದಲು ಹಳಿಗಳನ್ನು ಉತ್ತಮಪಡಿಸಿ ಆಮೇಲೆ ವಂದೇ ಭಾರತ್ ಸೇರಿದಂತೆ ಅತಿ ವೇಗದ ರೈಲುಗಳನ್ನು ಬಳಸಬೇಕು.ರೈಲು ನಿರ್ವಹಣೆ ಹೊರತುಪಡಿಸಿ ಉಳಿದ ಕೆಲಸಗಳನ್ನು ಖಾಸಗಿಗೆ ಒಪ್ಪಿಸುವುದು ಸೂಕ್ತ. ಸ್ವಿಸ್ ದೇಶ ಹೊಸ ಪ್ರಯೋಗವನ್ನು ನಡೆಸಿ ಅಪಘಾತಗಳನ್ನು ಕಡಿಮೆ ಮಾಡುವ ಕೆಲಸ ಕೈಗೊಂಡಿದೆ. ಕೃತಕ ಬುದ್ಧಿಮತ್ತೆ ಬಳಸಿ ಸುಧಾರಣೆ ತರುವ ಕೆಲಸ ನಮ್ಮಲ್ಲೂ ಆರಂಭವಾಗಿದೆ. ರೈಲ್ವೆ ಇಲಾಖೆ ತನ್ನ ಕಾರ್ಮಿಕ ಬಲ ಮತ್ತು ಹಣವನ್ನು ರೈಲುಗಳ ಸುರಕ್ಷಣೆಗೆ ಹೆಚ್ಚು ವಿನಿಯೋಗಿಸುವುದು ಸೂಕ್ತ. ಈಗ ಎಲ್ಲ ರೈಲುಗಳಿಗೆ ವಿದ್ಯುತ್ ಇಂಧನ ಬಳಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಮತ್ತು ರೈಲಿನ ವೇಗವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಸೋಲಾರ್ ವಿದ್ಯುತ್ ಬಳಸಿದರೆ ರೈಲ್ವೆ ಇಲಾಖೆ ಇಡೀ ರೈಲುಮಾರ್ಗವನ್ನು ಸುರಕ್ಷಿತಗೊಳಿಸಬಹುದು. ಜನಸಾಮಾನ್ಯರ ಪ್ಯಾಸೆಂಜರ್ ರೈಲುಗಳನ್ನು ಕಡೆಗಣಿಸುವುದು ಸರಿಯಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಜನರನ್ನು ಒಂದುಗೂಡಿಸುವುದು ರೈಲು ಎಂಬುದನ್ನು ಮರೆಯುವ ಹಾಗಿಲ್ಲ.