ವೈಭವದ ಶ್ರೀ ವಿಶ್ವರಾಧ್ಯರ ರಥೋತ್ಸವ : ಅಸಂಖ್ಯಾತ ಭಕ್ತರು ಭಾಗಿ

Advertisement


ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರಿನ ಸಿದ್ಧಿ ಪುರುಷ ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷದ ಮಧ್ಯೆ ಸಂಭ್ರಮದಿಂದ ಶನಿವಾರ ಸಂಜೆ ಜರುಗಿತು
ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಶನಿವಾರ ಸಂಜೆ 6.30 ಗಂಟೆಗೆ ರಥವನ್ನೇರಿ ಚಾಲನೆ ನೀಡಿದರು. ಈ ವೇಳೆ ಭಕ್ತರು ‘ವಿಶ್ವಾರಾಧ್ಯ ಮಹಾರಾಜ ಕೀ ಜೈ’, ‘ಗಂಗಾಧರ ಮಹಾರಾಜ ಕೀ ಜೈ’ ಎಂಬ ಮುಗಿಲು ಮುಟ್ಟವ ಜಯಘೋಷ ಮಾಡುತ್ತಾ ರಥ ಎಳೆದು ಸಂಭ್ರಮಿಸಿದರು.
ಭಕ್ತ ಸಮೂಹ ಉತ್ತತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು. ರಥಕ್ಕೆ ವಿವಿಧ ಬಣ್ಣದ ಬಣ್ಣದ ಹೂಗಳಿಂದ ಶೃಂಗಾರ ಮಾಡಲಾಗಿತ್ತು. ನಂದಿಕೋಲ ಉತ್ಸವ, ಪಲ್ಲಕ್ಕಿ ಮೆರವಣಿಗೆ ನಡೆಯಿತು. ಭಜನೆ, ಡೊಳ್ಳು, ನೃತ್ಯ ತಂಡಗಳ ಕುಣಿತ ಜೋರಾಗಿತ್ತು.
ತೇರಿನ ಉತ್ಸವ ಮುಗಿಯುತ್ತಲೇ ಆಗಮಿಸಿದ ಭಕ್ತರ ದಂಡು ತಮ್ಮ ಉಪವಾಸ ವೃತವನ್ನು ಮುಗಿಸಿ ದಾಸೋಹ ಮಹಾಮನೆಯಲ್ಲಿ ಪ್ರಸಾದ ಸ್ವೀಕರಿಸಿದರು.

ಆಟಿಕೆ ಸಾಮಗ್ರಿಗಳ ಅಂಗಡಿ, ಪೂಜಾ ಸಾಮಾಗ್ರಿಗಳು, ಬಳೆ, ಸಿಹಿ ತಿನಿಸು, ಟೆಂಗಿನ ಕಾಯಿ, ಕಲ್ಲಂಗಡಿ, ಕಬ್ಬು ಮಾರಾಟ ಜೋರಾಗಿತ್ತು. ಹೋಟೆಲ್‌ಗಳಲ್ಲಿ ಜನರು ಉಪಾಹಾರ ಸೇವಿಸುವುದು ಕಂಡುಬಂತು. ಅನೇಕ ಭಕ್ತರು ಜಾತ್ರೆಯಲ್ಲಿನ ಅಂಗಡಿಗಳಿಗೆ ಖರೀದಿಗಾಗಿ ಮುಗಿಬಿದ್ದರು. ಫಳಾರ ಮತ್ತು ಬೆಂಡು ಬತಾಸ್‌ಗಳನ್ನು ಕೊಳ್ಳುವವರ ಭರಾಟೆಯಂತೂ ಜೋರು ಇತ್ತು. ಜಿಲೇಬಿ, ಪೈನಾಪಲ್‌, ಕಲ್ಲಂಗಡಿ, ಐಸ್‌ಕ್ರಿಮ್‌, ಕಬ್ಬಿನ ಹಾಲು, ಸುಸಲಾ, ಭಜ್ಜಿ ಸವಿಯುವುದು ಸಾಮಾನ್ಯವಾಗಿ ಕಂಡು ಬಂತು.