`ವೋಟ್ ಜಿಹಾದ್’ಗೆ ಪಾಕಿಸ್ತಾನದಲ್ಲಿ ಪ್ರಾರ್ಥನೆ

Advertisement

ಬಾಂಸಗಾಂವ್/ದೇವರಿಯ/ಮವೂ/ಮಿರ್ಜಾಪುರ: ನೆರೆಯ ಪಾಕಿಸ್ತಾನದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಗೆಲುವಿಗಾಗಿ ಪ್ರಾರ್ಥನೆ ನಡೆಯುತ್ತಿದ್ದು, ಜಿಹಾದಿಗಳು ಈ ಪಕ್ಷಗಳಿಗೆ ಮತ ನೀಡಿ ವೋಟ್-ಜಿಹಾದ್ ನಡೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯ ಬಾಂಸಗಾಂವ್‌ನಲ್ಲಿ ನಡೆದ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಮವೂ ಮತ್ತು ದೇವರಿಯಗಳಲ್ಲೂ ಮೋದಿ ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸೌಲಭ್ಯ ನೀಡಿದ್ದ ಸಂವಿಧಾನದ ೩೭೦ನೇ ವಿಧಿ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಕುರಿತು ಪ್ರತಿಪಕ್ಷಗಳ ನಿಲುವನ್ನು ಪ್ರಸ್ತಾವಿಸಿದ ಮೋದಿ, ಮತ್ತೆ ಆರ್ಟಿಕಲ್ ೩೭೦ಯನ್ನು ಮರುಸ್ಥಾಪಿಸುವುದಾಗಿ ಮತ್ತು ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಸಿಎಎ ಅನ್ನು ರದ್ದುಗೊಳಿಸುವುದಾಗಿ ಭಾರತ ಮೈತ್ರಿಕೂಟ ಹೇಳುತ್ತಿದೆ. ಇದು ದೇಶವಿರೋಧಿಯಾಗಿದೆ' ಎಂದು ದೂರಿದರು. ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದನ್ನು ಕಾಂಗ್ರೆಸ್ ಸರ್ಕಾರ ತಡೆದಿತ್ತು. ಇಲ್ಲಿಂದ ರಕ್ಷಣಾ ಸಾಮಗ್ರಿಗಳ ರಫ್ತು ನಡೆಯದಂತೆ ನೋಡಿಕೊಂಡಿತು. ಅವರದು ಕಮಿಷನ್‌ಗಳನ್ನು ತರುವ ವಿದೇಶಿ ಶಸ್ತ್ರಾಸ್ತ್ರ ಆಮದಿಗೆ ಆದ್ಯತೆ' ಎಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ಆಡಳಿತದ ವೈಖರಿಯನ್ನು ವಿವರಿಸಿ,ಪೂರ್ವಾಂಚಲ ಹಿಂದುಳಿದೇ ಇರುವಂತೆ ಮಾಡಲು ಕಾಂಗ್ರೆಸ್ ಸತತವಾಗಿ ಪಿತೂರಿ ನಡೆಸುತ್ತಿದೆ. ಈ ಪ್ರದೇಶಕ್ಕೆ ದ್ರೋಹ ಬಗೆದವರಿಗೆ, ಮನೆಗಳಿಗೆ ಬೆಂಕಿ ಹಚ್ಚಿದ, ಭೂಮಿಯನ್ನು ವಶಪಡಿಸಿಕೊಂಡ ಮತ್ತು ಗಲಭೆಕೋರರು ಮತ್ತು ಮಾಫಿಯಾಗಳಿಗೆ ಅಧಿಕಾರ ನೀಡಿದವರನ್ನು ಪೂರ್ವಾಂಚಲದ ಜನರು ಶಿಕ್ಷಿಸುತ್ತಾರೆ’ ಎಂದು ಘೋಷಿಸಿದರು.
ಮವೂನಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ದಲಿತರಿಗೆ ನೀಡಿರುವ ಮೀಸಲಾತಿಯನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿದರು.