ಶರಣಾಗತಿ ಅವಧಿ ಮುಕ್ತಾಯ: ಆಸ್ತಿ ಮುಟ್ಟುಗೋಲಿಗೆ ಮುಂದಾದ ಎನ್‌ಐಎ

NIA
Advertisement

ಮಂಗಳೂರು: ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಶರಣಾಗುವಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನೀಡಿರುವ ಅವಧಿ ಮುಕ್ತಾಯಗೊಂಡಿದೆ. ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗದೇ ಇರುವ ಕಾರಣಕ್ಕೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಎನ್‌ಐಎ ಮುಂದಾಗಿದೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ನೀಡಲಾದ ಆಸ್ತಿ ಮುಟ್ಟುಗೋಲು ಎಚ್ಚರಿಕೆಗೂ ಆರೋಪಿಗಳು ಮನ್ನಣೆ ನೀಡಿಲ್ಲ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂ. ೩೦ರೊಳಗೆ ನ್ಯಾಯಾಲಯದ ಮುಂದೆ ಶರಣಾಗಬೇಕು, ಇಲ್ಲವೇ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಧ್ವನಿವರ್ಧಕದ ಮೂಲಕ ಸುಳ್ಯ, ಬೆಳ್ಳಾರೆ ಪರಿಸರಗಳಲ್ಲಿ ಘೋಷಣೆ ಮಾಡಲಾಗಿತ್ತು. ಆರೋಪಿಗಳ ಮನೆ ಬಾಗಿಲಿಗೆ ಈ ಬಗ್ಗೆ ಭಿತ್ತಿಪತ್ರ ಅಂಟಿಸುವ ಮೂಲಕವೂ ಗಡುವು ನೀಡಲಾಗಿತ್ತು.
ಆದರೆ ಆರೋಪಿಗಳು ಇದುವರೆಗೂ ಶರಣಾಗಿಲ್ಲ. ಹೀಗಾಗಿ ಆಸ್ತಿಗಳನ್ನು ಜಪ್ತಿ ಮಾಡುವುದಕ್ಕೆ ಎನ್‌ಐಎ ಮುಂದಾಗಿದೆ. ಆರೋಪಿಗಳ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕಂದಾಯ ಇಲಾಖೆ, ಬ್ಯಾಂಕ್ಗಳು ಮತ್ತಿತರ ಮೂಲಗಳಿಂದ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ಆರೋಪಿಗಳ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ನಂತರ ಆರೋಪಿಯದ್ದೇ ಆಸ್ತಿ ಎಂದು ದೃಢೀಕರಣಗೊಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಸರಕಾರದ ವಶಕ್ಕೆ ಪಡೆಯಬಹುದು ಎಂದು ಹೇಳಲಾಗುತ್ತಿದೆ.