ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮರುಪರಿಶೀಲನೆ

Advertisement

ಬೆಳಗಾವಿ(ವಿಧಾನಸಭೆ): ರಾಜ್ಯದಲ್ಲಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಬೈಸಿಕಲ್ ವಿತರಣೆ ಯೋಜನೆಯನ್ನು ಮರುಜಾರಿಗೊಳಿಸುವ ಬಗ್ಗೆ ಸರ್ಕಾರ ಪರಿಶೀಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ನಾನೂ ಕೂಡ ಸಕಾರಿ ಶಾಲೆಯಲ್ಲಿಯೇ ಓದಿದ ವಿದ್ಯಾರ್ಥಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರಿತಪಿಸುವ ಸಂದರ್ಭದಲ್ಲಿ ಸೈಕಲ್ ನೀಡಿದ್ದು ಅನುಕೂಲವಾಗುತ್ತಿತ್ತು, ಹಾಗಾಗಿ ಸರ್ಕಾರ ಮರುಜಾರಿಗೊಳಿಸುವಂತೆ ಮನವಿ ಮಾಡುವುದಾಗಿ ಹೇಳಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್.ಆಶೋಕ್, ಒಂದೆರಡು ಕಿಮೀ ನಡೆದು ಶಾಲೆಗೆ ಬರಬೇಕಾದ ಮಕ್ಕಳಿಗೆ ಸೈಕಲ್ ಅನುಕೂಲ. ಹಾಗಾಗಿಯೇ ಅಂದಿನ ಸಿಎಂ ಯಡಿಯೂರಪ್ಪ ಯೋಜನೆ ಆರಂಭಿಸಿದ್ದರು. ಇಡೀ ರಾಜ್ಯಕ್ಕೆ ಮತ್ತೆ ವಿಸ್ತರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು, ೨೦೧೯-೨೦ನೇ ಸಾಲಿನಲ್ಲಿ ಉಚಿತ ಸೈಕಲ್ ವಿತರಣೆ ಆಗಿತ್ತು. ಬಳಿಕ ಸ್ಥಗಿತಗೊಂಡಿದೆ. ಹಾಗಿದ್ದೂ ನಮ್ಮ ಸರ್ಕಾರ ಮತ್ತೆ ಯೋಜನೆಯನ್ನು ಜಾರಿಗೊಳಿಸುವ ಕುರಿತು ಮರುಪರಿಶೀಲನೆ ಮಾಡಲಿದೆ ಎಂದು ಸದನಕ್ಕೆ ಭರವಸೆ ನೀಡಿದರು. ಏತನ್ಮದ್ಯೆ ಮಕ್ಕಳಿಗೆ ೨ ಜೊತೆ ಶೂ ಮತ್ತು ೪ ಜೊತೆ ಸಾಕ್ಸ್ ನೀಡುವ ಪ್ರಸ್ತಾವನೆ ಬಗ್ಗೆಯೂ ಪರಾಮರ್ಶೆ ನಡೆಸಲಾಗುವುದು ಎಂದು ತಿಳಿಸಿದರು.