ಶಾಸಕರಿಂದಲೇ ಉಲ್ಲಂಘನೆ ಲೋಕಾಯುಕ್ತ ಮಹಾಮೌನ

Advertisement

ಲೋಕಾಯುಕ್ತಕ್ಕೆ ಪ್ರತಿ ವರ್ಷ ಶಾಸಕರು ತಮ್ಮ ಕುಟುಂಬದ ಆಸ್ತಿ ವಿವರ ಸಲ್ಲಿಸಬೇಕು. ಸಲ್ಲಿಸದೇ ಇದ್ದಲ್ಲಿ ಏನು ಶಿಕ್ಷೆ ಎಂದರೆ ಏನೂ ಇಲ್ಲ. ಇದು ಶಾಸಕರೇ ಮಾಡಿಕೊಂಡಿರುವ ಶಾಸನ. ಜನಪ್ರತಿನಿಧಿಗಳೇ ಕಾನೂನು ಪಾಲಿಸಲಿಲ್ಲ ಎಂದರೆ ಯಾರಿಗೆ ದೂರುವುದು?

ಶಾಸಕರು ಚುನಾಯಿತರಾದ ಮೇಲೆ ಪ್ರತಿ ವರ್ಷ ಜೂನ್ ೩೦ ರೊಳಗೆ ತಮ್ಮ ಕುಟುಂಬದ ಆಸ್ತಿ- ಸಾಲದ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ನಿಯಮ ಹೇಳುತ್ತದೆ. ಇದನ್ನು ಕೆಲವು ಶಾಸಕರು ಪಾಲಿಸುತ್ತಾರೆ. ಮತ್ತೆ ಕೆಲವರು ಅದರತ್ತ ತಿರುಗಿಯೂ ನೋಡುವುದಿಲ್ಲ. ಲೋಕಾಯುಕ್ತ ನೋಟಿಸ್ ನೀಡಿ ವಿವರ ಸಲ್ಲಿಸಲು ಸೂಚಿಸುತ್ತದೆ. ಆದರೆ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ. ಲೋಕಾಯುಕ್ತರು ಆಸ್ತಿ ವಿವರ ನೀಡದವರ ಹೆಸರನ್ನು ಬಹಿರಂಗಪಡಿಸಬಹುದು ಅಷ್ಟೆ. ಈ ರೀತಿ ಹಲ್ಲಿಲ್ಲದ ಕಾಯ್ದೆ ರಚಿಸಿ ಏನು ಪ್ರಯೋಜನ? ಜನಪ್ರತಿನಿಧಿಗಳಾದವರು ಮೊದಲು ತಾವೇ ರಚಿಸಿದ ಶಾಸನಗಳಿಗೆ ಗೌರವ ಕೊಡುವುದನ್ನು ಕಲಿಯಬೇಕು. ಅವರು ಇತರರಿಗೆ ಮಾದರಿಯಾಗಬೇಕು. ನಮ್ಮಲ್ಲಿ ಕಾನೂನು ಎಲ್ಲರಿಗೂ ಒಂದೇ. ಆದರೆ ಅದನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸುವುದರಲ್ಲಿ ಸ್ಪಷ್ಟತೆ ಇಲ್ಲ.
ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವುದು ಶಾಸಕರ ಕೆಲಸ. ಅವರು ಅದರ ಕಡೆ ಗಮನಹರಿಸಿಲ್ಲ. ಜನರೂ ಇದರ ಬಗ್ಗೆ ತಮ್ಮ ಜನಪ್ರತಿನಿಧಿಗಳು ಪ್ರಶ್ನಿಸಲು ಹೋಗಿಲ್ಲ. ಪ್ರತಿಯೊಬ್ಬ ಸರ್ಕಾರಿ ನೌಕರ ತನ್ನ ಆದಾಯ ವಿವರ ಸಲ್ಲಿಸಲೇಬೇಕು. ಇಲ್ಲದಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧ. ಆದರೆ ಇದೇ ನಿಯಮ ಜನಪ್ರತಿನಿಧಿಗಳಿಗೆ ಅನ್ವಯಿಸುತ್ತಿಲ್ಲ. ಈ ತಾರತಮ್ಯ ಏಕೆ ಎಂಬುದು ಸ್ಪಷ್ಟಗೊಂಡಿಲ್ಲ.
ಪ್ರತಿಯೊಬ್ಬ ಶಾಸಕರೂ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರ ಹೋಗಲಾಡಿಸಲು ಪಣ ತೊಡುತ್ತಾರೆ. ಆದರೆ ಲೋಕಾಯುಕ್ತಕ್ಕೆ ವಿವರ ಸಲ್ಲಿಸಲು ಹಿಂಜರಿಯುತ್ತಾರೆ. ಹಿಂದೆ ಶಾಸಕರು ತಮ್ಮ ನಿಯಮಿತ ಆದಾಯದಲ್ಲೇ ಜೀವನ ನಡೆಸುತ್ತಿದ್ದರು. ಹಿಂದೆ ಸಂತೇಮರಳ್ಳಿ ಶಾಸಕ ಸಿದ್ದಯ್ಯ ಅವರು ಹವಾಯ್ ಚಪ್ಪಲಿ ಹಾಕಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಎಂಎಲ್‌ಎ ಸಾಹೇಬರು ಬಂದರು ಎಂದು ಜನ ಸೀಟು ಬಿಟ್ಟುಕೊಡುತ್ತಿದ್ದರು. ಈಗ ಯಾವ ಶಾಸಕರೂ ಸಾರ್ವಜನಿಕ ವಾಹನದಲ್ಲಿ ಹೋಗುವುದಿಲ್ಲ. ಅವರ ದಿನದ ಖರ್ಚುವೆಚ್ಚ ನೋಡಿದರೆ ಗಾಬರಿಯಾಗುತ್ತದೆ. ಹೀಗಿರುವಾಗ ಅವರು ಪ್ರತಿ ವರ್ಷ ತಮ್ಮ ಕುಟುಂಬದ ಆಸ್ತಿ ವಿವರ ಸಲ್ಲಿಸುವುದಿಲ್ಲ ಎಂದರೆ ತಮ್ಮನ್ನು ಗೆಲ್ಲಿಸಿದ ಜನರಿಗೆ ವಂಚನೆ ಮಾಡಿದಂತೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವವರ ಕುಟುಂಬದ ಆದಾಯ ಮೂಲ ಪಾರದರ್ಶಕವಾಗಿರಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು. ಈಗ ಎಲ್ಲವೂ ಗುಪ್ತ. ಪ್ರತಿ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವವರು ಕೋಟ್ಯಾಧಿಪತಿಗಳೇ. ಅವರು ಚುನಾವಣೆ ವೇಳೆ ಮಾಡುವ ವೆಚ್ಚಕ್ಕೆ ಮಿತಿ ಹಾಕಿದ್ದೇವೆ. ಆದರೆ ಅದನ್ನು ಮೀರಿ ಚುನಾವಣೆ ವೆಚ್ಚ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯ ಮತ್ತು ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಇದನ್ನು ಹೋಗಲಾಡಿಸಲು ಯಾವ ಮಂತ್ರದಂಡವೂ ಇಲ್ಲ. ಲೋಕಾಯುಕ್ತ ವ್ಯವಸ್ಥೆ ನಿಜವಾದ ಅರ್ಥದಲ್ಲಿ ಭ್ರಷ್ಟಾಚಾರವನ್ನು ದಮನ ಮಾಡಲು ಸಾಧ್ಯವಾಗುತ್ತಿಲ್ಲ. ಬೇರೆಯವರಿಗೆ ತೋರಿಸಿಕೊಳ್ಳಲು ಈ ವ್ಯವಸ್ಥೆಯನ್ನು ಇಟ್ಟುಕೊಂಡಿದ್ದೇವೆ. ಅಂತರಂಗದಲ್ಲಿ ಶಾಸಕರು ಈ ಲೋಕಾಯುಕ್ತ ವ್ಯವಸ್ಥೆಯನ್ನು ಒಪ್ಪುವುದಿಲ್ಲ. ಅದರೂ ಬಹಿರಂಗವಾಗಿ ವಿರೋಧಿಸುವುದಿಲ್ಲ. ಅಣ್ಣಾ ಹಜಾರೆ ಚಳವಳಿ ನಡೆಸಿದಾಗ ಬದಲಾವಣೆ ಬರುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಏನೂ ಆಗಲಿಲ್ಲ. ಜನ ಬದಲಾದರು. ಪಕ್ಷಗಳು ಬದಲಾದವು. ಭ್ರಷ್ಟಾಚಾರ ನಿರಾತಂಕವಾಗಿ ಮುಂದುವರಿದಿದೆ.
ಚುನಾವಣೆ-ಭ್ರಷ್ಟಾಚಾರ ಒಂದು ವಿಷಚಕ್ರ ವಿದ್ದಂತೆ. ಇದರಲ್ಲಿ ನಿಷ್ಠೆ-ಪ್ರಾಮಾಣಿಕೆಗೆ ಅವಕಾಶವಿಲ್ಲ. ಅಧಿಕಾರಕ್ಕೆ ಬರಲು ಎಲ್ಲ ರೀತಿಯ ಅಕ್ರಮಗಳು ನಡೆಯುತ್ತವೆ. ಅಧಿಕಾರಕ್ಕೆ ಬಂದ ಮೇಲೆ ಅದನ್ನು ಉಳಿಸಿಕೊಳ್ಳಲು ಅಕ್ರಮಗಳು ಮುಂದುವರಿಯುತ್ತದೆ. ಇವೆಲ್ಲವೂ ಜನಸಾಮಾನ್ಯರ ಹೆಸರಿನಲ್ಲೇ ನಡೆಯುತ್ತದೆ. ಭ್ರಷ್ಟಾಚಾರ ಒಂದು ಬ್ರಹ್ಮ ರಾಕ್ಷಸ. ಅದಕ್ಕೆ ಕೊಡಲಿ ಪೆಟ್ಟು ಬಿದ್ದಷ್ಟೂ ತನ್ನ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಸತ್ಯದ ತಲೆ ಮೇಲೆ ಹೊಡೆದಂತೆ ಭ್ರಷ್ಟಾಚಾರ ಇದೆ ಎಂಬುದಂತೂ ಸತ್ಯ. ಇದರಲ್ಲಿ ಲೋಕಾಯುಕ್ತ ಒಂದು ಬಿಂದು ಮಾತ್ರ. ಮಾಹಿತಿ ಹಕ್ಕು ಕಾಯ್ದೆ, ಪಾರದರ್ಶಕ ಕಾಯ್ದೆಗಳಿದ್ದರೂ ಅಕ್ರಮವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.