ಶಿಕ್ಷಣ ನೀತಿ; ಎತ್ತು ಏರಿಗೆ ಕೋಣ ನೀರಿಗೆ ಎಳೆದಂತಾಗಬಾರದು

Advertisement

ಪ್ರತಿ ರಾಷ್ಟ್ರ ತನ್ನ ವಿಶಿಷ್ಟ ಸಾಮಾಜಿಕ, ಸಾಂಸ್ಕೃತಿಕ ಗುರುತುಗಳನ್ನು ವ್ಯಕ್ತಪಡಿಸಲು ತನ್ನದೇ ಆದ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತದೆ. ಗತಕಾಲದ ಪ್ರಕ್ರಿಯೆಗಳಿಗೆ ನೂತನವಾದ ನಿರ್ದೇಶನಗಳನ್ನು ಆಗಾಗ ನೀಡಲಾಗುತ್ತದೆ.
ರಾಷ್ಟ್ರದ ಶಿಕ್ಷಣಕ್ಕೆ ಚಲನಶೀಲತೆ ಇರಬೇಕು. ಇದು ಪ್ರಗತಿಪರ ಲಕ್ಷಣ. ಒಂದು ದೇಶದ ಪ್ರಗತಿ ಶಿಕ್ಷಣದ ಜೊತೆಗೆ ತಳಕು ಹಾಕಿಕೊಂಡಿರುತ್ತದೆ. ದೇಶದ ಮಾನವ ಸಂಪನ್ಮೂಲದ ಬಳಕೆ ಸಂಪೂರ್ಣವಾಗಬೇಕಾದರೆ ಶಿಕ್ಷಣ ಕ್ರಾಂತಿಕಾರಕ ಹೆಜ್ಜೆ ಇಡಬೇಕಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಜ್ಯದಾದ್ಯಂತ ಶಿಕ್ಷಣ ಏಕರೂಪತೆ ತರಲು ಸಾಧ್ಯವಾಗುತ್ತದೆ. ತನ್ಮೂಲಕ ಜನತೆಯ ಕಲ್ಯಾಣ ಹಾಗೂ ರಕ್ಷಣೆಯನ್ನು ಶಿಕ್ಷಣ ನಿರ್ಧರಿಸುತ್ತದೆ. ಭಾವೈಕ್ಯತೆ ಸಾಧಿಸಬಹುದು. ಹೊಸತನ, ಪ್ರಸ್ತುತ ಶಿಕ್ಷಣದ ಬಗ್ಗೆ ಅಭಿಪ್ರಾಯ, ವಿಚಾರ, ಭಾವನೆಗಳನ್ನು ಮಾರ್ಪಡಿಸಲು ಸಾಧ್ಯ. ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ, ರಾಷ್ಟ್ರಾದ್ಯಂತ ಏಕರೂಪ ಶಿಕ್ಷಣ ನೀತಿಯನ್ನು ತರಲು ಪ್ರಯತ್ನಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ. ರಾಷ್ಟ್ರದ ಶಿಕ್ಷಣ, ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಪಾಲುಗಾರಿಕೆ/ಸಹಭಾಗಿತ್ವ ಅರ್ಥಪೂರ್ಣ ಸವಾಲುಗಳಿಂದ ಕೂಡಿದೆ. ಈ ಅಂಶವನ್ನು ಅಕ್ಷರಶಃ ಪಾಲಿಸುವ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತದೆ. ಇದನ್ನು ೧೯೬೮ರ ಜುಲೈನಲ್ಲಿ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟವು ದೇಶಕ್ಕೆ ಒಂದು ಶಿಕ್ಷಣ ನೀತಿ ಇರಬೇಕು ಎಂದು ನಿರ್ಧರಿಸಿತು. ಅದರ ಪ್ರತಿಫಲ ಆಗಾಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗಳು ಬರಲು ಶುರುವಾದವು.
ಶಿಕ್ಷಣವು ರಾಜ್ಯಕ್ಕೆ ಬಿಟ್ಟ ವಿಷಯವಾಗಿಯೇ ಮುಂದುವರಿಯಬೇಕೋ ಅಥವಾ ಕೇಂದ್ರ ಸರಕಾರದ ಸುಪರ್ದಿಯಲ್ಲೇ ಶಿಕ್ಷಣ ವ್ಯವಸ್ಥೆ ಮುಂದುವರಿಯಬೇಕೋ ಎಂದು ವಾದ-ವಿವಾದ ಸಾಕಷ್ಟು ಬಾರಿ ಎದ್ದದ್ದಿದೆ. ೧೯೬೪ರಲ್ಲಿ ಅಂದಿನ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಎಂ.ಸಿ.ಛಗಲಾರವರು ಶಿಕ್ಷಣ ಸಮಾನಾಧಿಕಾರ ಪಟ್ಟಿಯಲ್ಲಿರಬೇಕೆಂದು ವಾದಿಸಿದ್ದರು. ಹೀಗಾದಾಗ ಶಿಕ್ಷಣ ವಿಷಯದಲ್ಲಿ ಪರಸ್ಪರ ಹೊಂದಾಣಿಕೆ ಜವಾಬ್ದಾರಿಗೆ ಅವಕಾಶವಿರುತ್ತದೆ. ಇಲ್ಲದಿದ್ದರೆ ಶಿಕ್ಷಣ ನೀತಿ ಎತ್ತು ಏರಿಗೆ ಕೋಣ ನೀರಿಗೆ ಅಂದ ಹಾಗೆ ಆಗುತ್ತದೆ. ಅಂತೆಯೇ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಸ್ಥಿತಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯ ಎಳೆದಾಟ ಶುರುವಾಗಿದೆ. ಸರಕಾರಗಳು ಬದಲಾದಂತೆ ಶಿಕ್ಷಣ ನೀತಿಯನ್ನು ತಮಗೆ ಬೇಕಾದಂತೆ ಎಳೆಯಲಾಗುತ್ತದೆ. ಇವುಗಳಲ್ಲಿ ಪರಸ್ಪರ ಸಹಕಾರ ಇಲ್ಲದಿದ್ದರೆ ಜಾರಿಗೆ ತರುವುದು ಅಸಾಧ್ಯ. ಅದು ಈಗ ಆಗಿದೆ. ಡಾ.ಎಸ್. ರಾಧಾಕೃಷ್ಣನ್ ಹೇಳಿದಂತೆ “ಅಜ್ಞಾನ, ದುರಭಿಪ್ರಾಯ ಮತ್ತು ಬುಡವಿಲ್ಲದ ನಂಬಿಕೆಗಳ ಸರಪಳಿಗಳನ್ನು ಜನರಿಂದ ಕಳಚಿ ಶಾಲೆಗಳು ಉದಾರ ಶಿಕ್ಷಣವನ್ನೀಯಬೇಕು” ಎಂಬ ಈ ಮಾತು ನನಸಾಗಬೇಕು. ಇಲ್ಲದಿದ್ದರೆ ಸಂವಿಧಾನದ ಉದ್ದೇಶಗಳು ದೇಶದ ಪ್ರಗತಿಗೆ ಮಾರಕವಾಗುತ್ತದೆ. ಅಂತೆಯೇ ಈಗಾಗಲೇ ೨೦೧೭ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ತಜ್ಙರ ಸಮಿತಿ ನೇಮಿಸಿ ಸಾಕಷ್ಟು ಚರ್ಚೆ, ಸಲಹೆ ನಡೆದು ಒಂದು ಶಿಕ್ಷಣ ನೀತಿಯನ್ನು ೨೦೧೯ರಲ್ಲಿ ರಾಷ್ಟ್ರೈಕ್ಯ ಹಾಗೂ ಹೊರ ಪ್ರಪಂಚಕ್ಕೆ ಒಂದು ಕಿಟಕಿಯಾಗುವಂತೆ ತಯಾರಿಸಿದ್ದಾರೆ. ೨೦೨೦ ಜುಲೈ ೨೯ರಂದು ಕೇಂದ್ರ ಸರಕಾರ ತನ್ನ ಕ್ಯಾಬಿನೆಟ್‌ನಲ್ಲಿ ಅಂಗೀಕರಿಸಿತು. ಇದು ಮುಂದೆ ಆಗಿನ ಸರಕಾರ ಕರ್ನಾಟಕದಲ್ಲಿ ಜಾರಿಗೆ ತಂದಿತು. ನಾಡಿನ ಸರಕಾರ ಬದಲಾದಂತೆ ರಾಜಕೀಯ ತಳಕು ಹಾಕಿಕೊಂಡು ಮಕ್ಕಳ ಪದವಿಗಳು ಈಗ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ೪ ವರ್ಷ, ೩ ವರ್ಷ ಎಂಬ ಗೊಂದಲಕ್ಕೆ ಬಿದ್ದಿದೆ.
ಒಟ್ಟು ನಾಡಿನ ಮಕ್ಕಳ ಶಿಕ್ಷಣ ಇಡೀ ದೇಶದ ಸನ್ನಿವೇಶದಲ್ಲಿ ನೋಡಬೇಕಾಗುತ್ತದೆ. ಇದರಲ್ಲಿ ಮಕ್ಕಳ ಏಳಿಗೆ ಇದೆ. ರಾಷ್ಟ್ರದ ಹಿತವೂ ಅಡಗಿದೆ. ಸರಕಾರಗಳು ಪ್ರತಿಷ್ಠೆಗೆ ಬೀಳಬಾರದು. ಒಳಿತು ಕೆಡುಕುಗಳನ್ನು ಪರಸ್ಪರ ಚರ್ಚಿಸಿ ಪರಿಹರಿಸಿಕೊಳ್ಳಬೇಕು.
ಒಂದು ಶಿಕ್ಷಣ ನೀತಿ ಪ್ರಜಾಸತ್ತೆ, ನ್ಯಾಯ ಸ್ವಾತಂತ್ರ್ಯ, ಸಮತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಕಾಪಾಡಬೇಕು. ಇದನ್ನು ಅಕ್ಷರಶಃ ಜಾರಿಗೆ ತರುವ ಶಿಕ್ಷಣ ಸಂಸ್ಥೆಗಳು ದೇಶದ ಆಂತರಿಕ ಜೀವನದ ದೇಗುಲಗಳಾಗಬೇಕು, ಬೌದ್ಧಿಕ ಸಾಹಸದ ಆಗರಗಳಾಗಬೇಕು. ದೀಕ್ಷಾಬದ್ಧವಾಗಿ ನಿಂತಾಗ ವಿಶ್ವದ ತುಂಬೆಲ್ಲಾ ಭ್ರಾತೃತ್ವದ ತಂಗಾಳಿ ಸೂಸಲು ಸಾಧ್ಯ. ಆ ನಿಟ್ಟಿನಲ್ಲಿ ಸರಕಾರಗಳು, ತಜ್ಞರು ನಡೆದುಕೊಳ್ಳಬೇಕು.