ಶಿಕ್ಷಣ-ನ್ಯಾಯ ವಿತರಣೆ ಧರ್ಮದಿಂದ ದೂರವಿರಬೇಕು

ಸಂಪಾದಕೀಯ
Advertisement

ಉಡುಪಿಯ ಹೆಣ್ಣುಮಕ್ಕಳ ವಿಡಿಯೋ ಹಗರಣ ಮತ್ತು ಬೆಂಗಳೂರಿನ ಡಿಜೆ- ಕೆಜಿಹಳ್ಳಿಯ ಗಲಭೆ ಆರೋಪಿಗಳನ್ನು ಅಮಾಯಕರು ಎಂದು ಬಿಡುಗಡೆ ಮಾಡಲು ಹೊರಟಿರುವುದು ಸರಿಯಲ್ಲ.

ಶಿಕ್ಷಣ ಮತ್ತು ನ್ಯಾಯ ವಿತರಣಾ ವ್ಯವಸ್ಥೆ ಧರ್ಮದಿಂದ ದೂರ ಉಳಿಯಬೇಕು. ಸಂವಿಧಾನ ರಚನೆಕಾರರು ಇದನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದರು. ನ್ಯಾಯ ವಿತರಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ನಾಗರಿಕ ಅಪರಾಧ ಸಂಹಿತೆಯಲ್ಲಿ ಪೊಲೀಸರು ಮತ್ತು ನ್ಯಾಯಮೂರ್ತಿಗಳಿಗೆ ಕೆಲಸವಿದೆಯೇ ಹೊರತು ರಾಜಕಾರಣಿಗಳಿಗಿಲ್ಲ. ಅದೇರೀತಿ ಶಿಕ್ಷಣ ರಂಗದಲ್ಲೂ ರಾಜ್ಯಪಾಲರಿಗೆ ಅಧಿಕಾರ ನೀಡಿದ್ದೇವೆಯೇ ಹೊರತು ಜನಪ್ರತಿನಿಧಿಗಳಿಗಲ್ಲ. ಇದರ ಮೂಲ ಉದ್ದೇಶ ರಾಜಕಾರಣದಿಂದ ಇವುಗಳು ಮುಕ್ತವಾಗಿರಬೇಕು. ಶಿಕ್ಷಣ ಮತ್ತು ನ್ಯಾಯ ವಿತರಣೆಯಲ್ಲಿ ರಾಜಕಾರಣ ಪ್ರವೇಶ ಮಾಡಿದೆ. ಇದರಿಂದ ಸಾಮಾಜಿಕ ನೆಮ್ಮದಿಗೆ ಭಂಗ ಬರುವುದು ನಿಶ್ಚಿತ. ಉಡುಪಿಯಲ್ಲಿ ಈಗ ಶೌಚಾಲಯ ವಿಡಿಯೋ ಹಗರಣ ಅತ್ಯಂತ ಕೆಟ್ಟ ರೀತಿಯಲ್ಲಿ ತಿರುವು ಪಡೆಯುತ್ತಿದೆ. ಉಡುಪಿಯಲ್ಲೇ ಹಿಜಾಬ್ ತಲೆ ಎತ್ತಿತ್ತು. ಅದು ದೇಶವ್ಯಾಪಿ ಚರ್ಚೆಗೆ ಕಾರಣವಾಯಿತು. ಮಕ್ಕಳ ಮನಸ್ಸನ್ನು ಒಡೆಯಿತು. ಈಗ ಅದೇ ಶಕ್ತಿಗಳು ಹೊಸ ರೂಪದಲ್ಲಿ ಮತ್ತೆ ತಲೆ ಎತ್ತಿದೆ.
ಎಲ್ಲ ರಾಜಕೀಯ ಪಕ್ಷಗಳ ನಾಯಕರು ಶಾಲೆ- ಕಾಲೇಜುಗಳಿಂದ ದೂರ ಉಳಿಯಬೇಕು. ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುವ ಕೆಲಸ ಯಾರಿಂದಲೂ ನಡೆಯಬಾರದು. ಸ್ನಾತಕೋತ್ತರ ಕೇಂದ್ರಗಳಲ್ಲಿ ಪೊಲೀಸರು ಪ್ರವೇಶಿಸಬೇಕಾದರೆ ಉಪಕುಲಪತಿಗಳ ಅನುಮತಿ ಪಡೆಯಬೇಕಿತ್ತು. ಈಗ ಕ್ಯಾಂಪಸ್‌ನಲ್ಲೇ ಪೊಲೀಸ್ ಠಾಣೆ ತೆರೆಯಲಾಗಿದೆ. ವಿದ್ಯಾರ್ಥಿಗಳ ಮೇಲೆ ಎಫ್‌ಐಅರ್ ದಾಖಲಿಸಲು ಹಿಂಜರಿಯುತ್ತಿದ್ದರು. ಅದೇ ಪ್ರಮುಖವಿಷಯವಾಗಿದೆ. ನಮ್ಮ ಮಕ್ಕಳ ಮನಸ್ಸು ಜಾತಿ-ಕೋಮು ಭಾವನೆಗಳಿಂದ ದೂರವಿದ್ದು ಬೆಳೆಯಬೇಕು ಎಂದು ಆಗಿನ ಹಿರಿಯರು ಬಯಸುತ್ತಿದ್ದರು. ಈಗ ಎಲ್ಲ ಕಡೆ ಜಾತಿ- ಕೋಮು ವೈಷಮ್ಯ ಬೆಳೆಯುತ್ತಿದೆ.
ಮಕ್ಕಳಲ್ಲಿ ಜಾತ್ಯತೀತ ಮನೋಭಾವ ಬೆಳೆಸುವ ಮನೋಸಂಕಲ್ಪವೇ ಕಂಡು ಬರುತ್ತಿಲ್ಲ. ಉಡುಪಿಯಲ್ಲಿ ಕಾಲೇಜು ಹೆಣ್ಣುಮಕ್ಕಳ ನಡುವೆ ನಡೆದಿರುವ ಘಟನೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅವಕಾಶ ನೀಡಬಾರದಿತ್ತು. ಅಲ್ಲಿಯ ಜನಪ್ರತಿನಿಧಿಗಳು ಎಚ್ಚರವಹಿಸಿದ್ದರೆ ಕೋಮು ಭಾವನೆ ತಲೆ ಎತ್ತುವುದನ್ನು ತಪ್ಪಿಸಬಹುದಿತ್ತು. ಈಗ ಇದು ರಾಷ್ಟ್ರೀಯ ಮಹಿಳಾ ಆಯೋಗದ ಗಮನಸೆಳೆಯುವಷ್ಟು ಬೆಳೆದುಬಿಟ್ಟಿದೆ. ಇದಕ್ಕೆ ಈಗಲೇ ಅಲ್ಲಿಯ ಜನರು ಅಂತ್ಯ ಹಾಡಬೇಕು. ಹೊರಗಿನವರು ಹಸ್ತಕ್ಷೇಪ ಮಾಡುವುದು ಬೇಡ ಎಂದು ಅಲ್ಲಿಯ ಜನ ಒಕ್ಕೊರಲಿನಿಂದ ಹೇಳಬೇಕು. ಎಲ್ಲ ವರ್ಗಗಳ ನಡುವೆ ಮಧುರ ಬಾಂಧಂವ್ಯ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಕರ್ನಾಟಕದ ಯಾವುದೇ ಭಾಗದಲ್ಲಿ ಈ ರೀತಿ ಕೋಮು ಭಾವನೆ ತೀವ್ರಸ್ವರೂಪ ಪಡೆದುಕೊಂಡಿಲ್ಲ.
ಅದೇ ರೀತಿ ಡಿಜೆ ಮತ್ತು ಕೆಜಿ ಹಳ್ಳಿ ಪ್ರಕರಣದಲ್ಲಿ ಬಂಧನಕ್ಕೊಳಗಾದವರನ್ನು ಅಮಾಯಕರು ಎಂದು ಹೇಳಿ ಬಿಡುಗಡೆಗೆ ಸರ್ಕಾರ ಕೈಹಾಕುವುದು ಸರಿಯಾದ ಕ್ರಮವಲ್ಲ. ಯಾವುದೇ ಕ್ರಿಮಿನಲ್ ಪ್ರಕರಣ ನಡೆದರೆ ಅದರ ಬಗ್ಗೆ ಪೊಲೀಸ್ ಮತ್ತು ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ. ಕ್ರಿಮಿನಲ್ ವಿಚಾರಣೆಯಲ್ಲಿ ತಲೆಹಾಕುವುದಕ್ಕೆ ಜನಪ್ರತಿನಿಧಿಗಳಿಗೆ ಕಾನೂನು ರೀತ್ಯ ಅವಕಾಶವಿಲ್ಲ.
ಯಾರು ಅಮಾಯಕರು, ಯಾರು ತಪ್ಪಿತಸ್ಥರು ಎಂಬುದನ್ನು ನ್ಯಾಯಾಲಯ ತೀರ್ಮಾನಿಸಬೇಕು. ಅದರಲ್ಲೂ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳು ಯಾರೇ ಆದರೂ ಕಾನೂನು ಕ್ರಮ ಎಲ್ಲರಿಗೂ ಒಂದೇ. ರಾಜೀವಗಾಂಧಿ ಹಂತಕರನ್ನೇ ಬಿಡುಗಡೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಹೀಗಿರುವಾಗ ಒಬ್ಬ ಶಾಸಕರ ಪತ್ರವನ್ನೇ ಆಧರಿಸಿ ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ.
ಶಿಕ್ಷಣರಂದಲ್ಲಿ ಸಿದ್ದಗಂಗೆ ಸ್ವಾಮೀಜಿ ಈಗಲೂ ನಮಗೆ ಆದರ್ಶ. ಅವರ ಉಚಿತ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲ ಧರ್ಮ ಮತ್ತು ಜಾತಿಯವರು ಉತ್ತಮ ವಿದ್ಯಾಭ್ಯಾಸ ಪಡೆದು ದೊಡ್ಡ ಹುದ್ದೆಗಳಿದ್ದಾರೆ. ಅದೇರೀತಿ ರಾಷ್ಟçಪತಿಯಾಗಿದ್ದ ಅಬ್ದುಲ್ ಕಲಾಂ ಆದರ್ಶ ವ್ಯಕ್ತಿ ಮತ್ತೊಬ್ಬರಿಲ್ಲ. ಅವರು ಅಪ್ಪಟ ಭಾರತೀಯ. ಇಂಥವರು ನಮ್ಮ ಮಕ್ಕಳಿಗೆ ಆದರ್ಶರಾಗಬೇಕು.