ಶಿವದೇಗುಲಗಳಲ್ಲಿ ರುದ್ರಾಭಿಷೇಕಕ್ಕೆ ಸುತ್ತೋಲೆ

Advertisement

ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಶಾಂತಿ ಸಂಯಮದೊಂದಿಗೆ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಉಂಟಾಗಲೆಂದು ಲೋಕಕಲ್ಯಾಣಾರ್ಥವಾಗಿ ರಾಜ್ಯದ ಎಲ್ಲ ಶಿವದೇಗುಲಗಳಲ್ಲಿ ವಿಶೇಷ ಪೂಜಾಕೈಂಕರ್ಯ ಹಮ್ಮಿಕೊಳ್ಳುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಶುಕ್ರವಾರದಂದು ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಶಿವ ದೇವಸ್ಥಾನಗಳಲ್ಲಿ ದಿನದ ಸೂಕ್ತ ಸಮಯದಲ್ಲಿ ರುದ್ರಾಭಿಷೇಕ ಮತ್ತು ರುದ್ರ ಹೋಮ ಪೂಜಾಕಾರ್ಯಗಳನ್ನು ಏರ್ಪಡಿಸುವಂತೆ ಸೂಚಿಸಲಾಗಿದೆ. ಮರೆಯಾಗುತ್ತಿರುವ ಸಾಂಸ್ಕೃತಿಕ ಕಲೆಗಳಾದ ಗೊಂಬೆ ಆಟ, ಕೋಲಾಟ ಆಯೋಜಿಸುವುದು, ಯಕ್ಷಗಾನ, ಕಿರುನಾಟಕಗಳನ್ನು ಆಯೋಜಿಸುವಂತೆ ಸುತ್ತೋಲೆಯಲ್ಲಿ ಇಲಾಖೆ ಸೂಚನೆ ನೀಡಿದೆ.
ಆಯಾ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕಲಾವಿದರನ್ನು ಬಳಸಿಕೊಂಡು ಸೂಕ್ತ ಸಿದ್ಧತೆಗಳೊಂದಿಗೆ ಕಾರ್ಯಕ್ರಮ ಆಯೋಜಿಸಬೇಕು ಇದಕ್ಕೆ ತಗಲುವ ವೆಚ್ಚವನ್ನು ಆಯಾ ದೇವಾಲಯ ನಿಧಿಯಿಂದಲೇ ಭರಿಸಿಕೊಳ್ಳುವಂತೆ ತಿಳಿಸಲಾಗಿದೆ.