ಶಿವಮೊಗ್ಗಕ್ಕೆ ಬೇಕಾಗಿರುವುದು ಸಾಮಾಜಿಕ ನೆಮ್ಮದಿ, ಶಾಂತಿ

ಸಂಪಾದಕೀಯ
Advertisement

ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡ.ಇಲ್ಲಿ ಹೊತ್ತಿದ ಬೆಂಕಿ ರಾಜ್ಯದ ಇತರ ಕಡೆ ಹರಡದಂತೆ ಮೊದಲು ಕ್ರಮಕೈಗೊಳ್ಳಬೇಕು.ದುಷ್ಟಶಕ್ತಿಗಳಿಗೆ ಧರ್ಮ, ಜಾತಿ ಇರುವುದಿಲ್ಲ.

ಕೋಮುದಳ್ಳುರಿಯಿಂದ ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡವಾಗಿದೆ. ಅಲ್ಲಿ ಮೊದಲು ನೆಮ್ಮದಿ- ಶಾಂತಿ ನೆಲೆಸಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ. ಆಮೇಲೆ ಸಮಾಜದ ದುಷ್ಟಶಕ್ತಿಗಳು ಯಾವುದೇ ಕೋಮಿಗೆ ಸೇರಿರಲಿ. ನಿರ್ದಾಕ್ಷಿಣ್ಯವಾಗಿ ಹಿಡಿದು ಜೈಲಿಗೆ ತಳ್ಳಿಬೇಕು. ಇದಕ್ಕೆ ಸ್ಥಳೀಯ ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು. ಶಿವಮೊಗ್ಗೆ ಮೊದಲಿನಿಂದಲೂ ಈ ವಿಷಯದಲ್ಲಿ ಅತ್ಯಂತ ಸೂಕ್ಷö್ಮಪ್ರದೇಶ. ಇದು ಸ್ಥಳೀಯ ಪೊಲೀಸರಿಗೆ ಚೆನ್ನಾಗಿ ತಿಳಿದಿರುತ್ತದೆ. ಅವರಿಗೆ ಮುಕ್ತ ಅವಕಾಶ ನೀಡಿದರೆ ಎಲ್ಲವೂ ಸಹಜಸ್ಥಿತಿಗೆ ಮರಳುತ್ತದೆ.
ಇತ್ತೀಚೆಗೆ ನಡೆದ ಕಲ್ಲು ತೂರಾಟದಲ್ಲಿ ಹೊರಗಿನ ಶಕ್ತಿಗಳು ಭಾಗವಹಿಸಿರುವ ಶಂಕೆ ಇದೆ. ಹಿಂದೆ ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ನೆರೆ ರಾಜ್ಯದವರು ಬಂದಿದ್ದರು. ಈ ಘಟನೆಯಲ್ಲೂ ಹೊರಗಿನ ಕೈವಾಡ ಯಾವುದು ಎಂಬುದು ತಿಳಿಯಬೇಕು. ಜನಪ್ರತಿನಿಧಿಗಳು ತಮ್ಮ ರಾಜಕೀಯ ಬೆಳವಣಿಗೆಗೆ ಯಾವುದೇ ತತ್ವ ಮತ್ತು ನೀತಿಯನ್ನು ಪಾಲಿಸಬಹುದು. ಆದರೆ ಅದರ ಹೆಸರಿನಲ್ಲಿ ಸಮಾಜದ ದುಷ್ಟಶಕ್ತಿಗಳನ್ನು ಪ್ರೋತ್ಸಾಹಿಸಬಾರದು. ಗೃಹಸಚಿವರು ಈ ವಿಷಯದಲ್ಲಿ ಮೃದು ಧೋರಣೆ ತೋರಬಾರದು. ದಂಡಿನಲ್ಲಿ ಸೋದರಮಾವನೇ ಎಂದು ಖಡಾಖಂಡಿತ ತೀರ್ಮಾನಗಳನ್ನು ಕೈಗೊಳ್ಳಬೇಕು. ನಮ್ಮ ಪೊಲೀಸ್ ಪಡೆ ಸಮರ್ಥವಾಗಿದೆ. ಜಿಲ್ಲಾಧಿಕಾರಿಗಳಿಗೆ ದುಷ್ಟಶಕ್ತಿಗಳನ್ನು ಹಿಡಿದು ಗಡೀಪಾರು ಮಾಡಲು ಅಧಿಕಾರ ನೀಡಿದ್ದೇವೆ. ಅದನ್ನು ಬಳಸಲು ಸರ್ಕಾರ ಮುಕ್ತ ಅವಕಾಶ ನೀಡಬೇಕು. ಶಿವಮೊಗ್ಗ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಳವೇಗವಾಗಿ ಬೆಳೆದಿದೆ. ಅಲ್ಲಿಯ ಶೈಕ್ಷಣಿಕ ಮತ್ತು ವಾಣಿಜ್ಯ ವಾತಾವರಣಕ್ಕೆ ಧಕ್ಕೆ ತರಲು ಯತ್ನಿಸುವ ಶಕ್ತಿಗಳನ್ನು ದಮನ ಮಾಡಬೇಕು. ಚುನಾವಣೆ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ತೋಟ ಮಾಡುತ್ತೇವೆ ಎಂದು ಹೇಳುವುದು ಮುಖ್ಯವಲ್ಲ. ಈ ಶಾಂತಿಯ ತೋಟಕ್ಕೆ ದುಷ್ಟಶಕ್ತಿಗಳು ಲಗ್ಗೆ ಹಾಕದಂತೆ ಎಚ್ಚರವಹಿಸಬೇಕು.
ರಾಜಕೀಯ ಭಿನ್ನಾಭಿಪ್ರಾಯಗಳು, ಎಡ-ಬಲಪಂಥೀಯ ಧೋರಣೆಗಳು ಕಾನೂನು ಪರಿಪಾಲನೆ ಕಾಲದಲ್ಲಿ ಬರಬಾರದು. ದುಷ್ಟಶಕ್ತಿಗಳಿಗೆ ಯಾವುದೇ ಧರ್ಮ, ಜಾತಿ ಸಂಕೋಲೆಗಳಿರುವುದಿಲ್ಲ. ಆ ಶಕ್ತಿಗಳು ಜಾತಿ, ಧರ್ಮಗಳನ್ನು ತಮ್ಮ ಗುರಾಣಿಗಳಾಗಿ ಬಳಸಿಕೊಳ್ಳುತ್ತವೆ. ಕೆನಡಾದಿಂದ ಹಿಡಿದು ಶಿವಮೊಗ್ಗದವರೆಗೆ ಇದೇ ಶಕ್ತಿಗಳು ಕೆಲಸ ಮಾಡುತ್ತಿವೆ ಎಂಬುದನ್ನು ಮರೆಯಬಾರದು. ಓಟ್ ಬ್ಯಾಂಕ್ ರಾಜಕಾರಣಕ್ಕೆ ಇಂಥ ಶಕ್ತಿಗಳ ಬಗ್ಗೆ ಉದಾರ ನಿಲುವು ತಳೆದಲ್ಲಿ ಅದಕ್ಕೆ ಭಾರಿ ದಂಡ ತೆರಬೇಕಾದೀತು. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಬದಲಾಗುವುದು ಸಹಜ. ಆದರೆ ಕಾನೂನು ಪರಿಪಾಲನೆ ಎಲ್ಲ ಕಾಲಕ್ಕೂ ಒಂದೇ ಇರುತ್ತದೆ. ನಮ್ಮಲ್ಲಿ ಭಾರತ ದಂಡ ಸಂಹಿತೆ, ಅಪರಾಧ ದಂಡ ಸಂಹಿತೆ ಬದಲಾಗುವುದಿಲ್ಲ. ಸರ್ಕಾರಗಳು ಈ ವಿಷಯದಲ್ಲಿ ತನ್ನ ಮಿತಿಯನ್ನು ಅರಿತು ನಡೆದು ಕೊಳ್ಳಬೇಕು. ಇತ್ತೀಚೆಗೆ ಗಲಭೆ, ದೊಂಬಿಗಳ ಪ್ರಕರಣದಲ್ಲಿ ಬಂಧಿತರಾದವರನ್ನು ಬಿಡುಗಡೆ ಮಾಡುವ, ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಪ್ರವೃತ್ತಿ ಸರ್ಕಾರಗಳ ಮಟ್ಟದಲ್ಲಿ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರ ದುಷ್ಟರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು. ನ್ಯಾಯಾಲಯ ಉಳಿದ ತೀರ್ಮಾನ ಕೈಗೊಳ್ಳುತ್ತದೆ. ನ್ಯಾಯಾಲಯದ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಜನಪ್ರತಿನಿಧಿಗಳು ಸ್ವಯಂಭೂ ಅಲ್ಲ. ಅವರ ಅಧಿಕಾರಕ್ಕೂ ಇತಿಮಿತಿ ಇದೆ. ಶಿವಮೊಗ್ಗದಲ್ಲಿ ತಲೆ ಎತ್ತಿರುವ ಶಕ್ತಿ ರಾಜ್ಯದ ಬೇರೆ ಕಡೆ ಕಾಲಿಡದಂತೆ ಎಚ್ಚರವಹಿಸುವುದು ಇಂದಿನ ಅಗತ್ಯ. ಹಿಂದೆ ಇದೇ ಶಕ್ತಿಗಳು ಕರ್ನಾಟಕದಲ್ಲಿ ತಲೆಹಾಕಿದ್ದವು. ನಂತರದ ದಿನಗಳಲ್ಲಿ ಅವುಗಳು ಬೇರೆ ರಾಜ್ಯಗಳಿಗೆ ವಲಸೆ ಹೋದವು. ಈ ಶಕ್ತಿಗಳಿಗೂ ಹೊಸ ಸರ್ಕಾರಕ್ಕೂ ಸಂಬಂಧವಿಲ್ಲದೆ ಇರಬಹುದು. ಆದರೆ ಕಾನೂನು ಪರಿಪಾಲನೆಯಲ್ಲಿ ಉದಾರ ನಿಲುವ ತಳೆದಲ್ಲಿ ಬೇಡವಾದ ಶಕ್ತಿಗಳು ನೆಲೆಯೂರಲು ಯತ್ನಿಸುತ್ತವೆ. ಶಿವಮೊಗ್ಗದಲ್ಲಿ ಇದರ ಸೂಚನೆ ಕಂಡು ಬಂದಿದೆ.ಈಗಲೇ ಕಟ್ಟುನಿಟ್ಟಿನ ಸಂದೇಶ ರವಾನಿಸುವುದು ಅಗತ್ಯ. ಜಾತ್ಯತೀತ ಕಲ್ಪನೆ ಎಂದರೆ ಎಲ್ಲ ಧರ್ಮದವರೂ ನೆಮ್ಮದಿಯಾಗಿ ಬದುಕಬೇಕು. ಎಲ್ಲ ಧರ್ಮದಲ್ಲೂ ಬಡವರು ಇದ್ದಾರೆ.