ಶಿವಮೊಗ್ಗ: ಡಿಸಿ ಕಚೇರಿ ಆವರಣದಲ್ಲಿ ಆಜಾನ್ ಕೂಗಿದ ಯುವಕ: ಇದಕ್ಕೆ ಬಿಜೆಪಿ ಕಾರಣ ಎಂದ ಕುಮಾರಸ್ವಾಮಿ

ಅಜಾನ್‌
Advertisement

ಶಿವಮೊಗ್ಗ: ಜಿಲ್ಲೆಯ ಡಿಸಿ ಕಚೇರಿ ಆವರಣದಲ್ಲಿ ನಿಂತು ಯುವಕನೋರ್ವ ಆಜಾನ್ ಕೂಗಿದ ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್​ನಲ್ಲಿ ದೃಶ್ಯ ಸೆರೆಯಾಗಿದೆ. ಕೆಎಸ್​ ಈಶ್ವರಪ್ಪ ಆಜಾನ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯುವಕ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ್ದ ವಿಡಿಯೋ ಮೂರು ದಿನಗಳ ಬಳಿಕ ಈಗ ವೈರಲ್ ಆಗಿದೆ.
ಯುವಕ ಆಜಾನ್ ಕೂಗುತ್ತಿದ್ದಂತೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು ಈ ವೇಳೆ ಪೊಲೀಸರು ಹಾಗು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗದಂತೆ ಪೊಲೀಸರು ತಾಕೀತು ಮಾಡಿದ್ದರು. ಆಜಾನ್ ಬಗ್ಗೆ ಮಾತನಾಡುವುದಕ್ಕೆ ಈಶ್ವರಪ್ಪ ಯಾರು? ಇವತ್ತು ಇಲ್ಲಿ ಕೂಗಿದ್ದೇವೆ ನಾಳೆ ವಿಧಾನಸೌಧದಲ್ಲಿ ಕೂಗುತ್ತೇವೆ. ಇದು ತಾಯಿ ಬಗ್ಗೆ ಮಾತನಾಡಿದ್ದಲ್ಲ, ಅಲ್ಲ ಬಗ್ಗೆ ಮಾತನಾಡಿದ್ದು ಎಂದು ಮತ್ತೋರ್ವ ಯುವಕ ಆಕ್ರೋಶ ಹೊರ ಹಾಕಿದ್ದ. ಬಳಿಕ ಮುಸ್ಲಿಂ ಮುಖಂಡರೆ ಮುಂದೆ ಬಂದು ಜನರಿಗೆ ಬುದ್ದಿ ಹೇಳಿ ಯುವಕನಿಗೆ ಬೈದು ಪರಿಸ್ಥಿತಿ ನಿಯಂತ್ರಿಸಿದ್ದರು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ವಾಪಸ್ ಕಳುಹಿಸಿದ್ದರು.
ಈ ರೀತಿಯ ವಿಚಾರಗಳು ಪ್ರಾರಂಭ ಆಗುವುದಕ್ಕೆ ಬಿಜೆಪಿಯ ಕಾರಣ: ಕುಮಾರಸ್ವಾಮಿ
ಅಜಾನ್ ಕೂಗಿರುವ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ತಾಲೂಕಿನ ಮಾಚಹಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ್ಯ ಸೂಕ್ಷ್ಮವಾದ ವಿಚಾರವಾಗಿದೆ. ರಾಜ್ಯದಲ್ಲಿ ಈ ರೀತಿಯ ವಿಚಾರಗಳು ಪ್ರಾರಂಭ ಆಗುವುದಕ್ಕೆ ಬಿಜೆಪಿಯವರು ಕಾರಣರಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಇಂತಹ ಘಟನೆ ಪ್ರಾರಂಭ ಆಗುವುದಕ್ಕೆ ಬಿಜೆಪಿ ಕಾರಣ. ಜೊತೆಗೆ ಇನ್ನೊಂದು ಧರ್ಮದ ಕೆಲ ಕಿಡಿಗೇಡಿಗಳ ಪಾತ್ರವೂ ಇದೆ. ಇವತ್ತು ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಚಿತಾವಣೆ ಮಾಡುವವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದರು.