ಶಿವರಾತ್ರಿಯಂದೇ ಶಿವೈಕ್ಯಳಾದ ‘ಲತಾ’

Advertisement

ಮಂಗಳೂರು: ಶಿವರಾತ್ರಿಯಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಆನೆ ಲತಾ ಶಿವೈಕ್ಯವಾಗಿದೆ.
ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ ೫೦ ವರ್ಷಗಳಿಂದ ಮಂಜುನಾಥನ ಸೇವೆ ಸಲ್ಲಿಸುತ್ತಿದ್ದ ಲತಾ ಶುಕ್ರವಾರ ಮಧ್ಯಾಹ್ನ ಹೃದಾಯಾಘಾತದಿಂದ ಇಹಲೋಕ ತ್ಯಜಿಸಿದ್ದಾಳೆ. ೬೦ ವರ್ಷ ಪ್ರಾಯವಾಗಿರುವ ಲತಾ ಧರ್ಮಸ್ಥಳ ಕ್ಷೇತ್ರದ ಜಾತ್ರೋತ್ಸವ, ಲಕ್ಷಾದೀಪೋತ್ಸವ, ಶಿವರಾತ್ರಿ ಉತ್ಸವ ಹೀಗೆ ಎಲ್ಲಾ ಉತ್ಸವದಲ್ಲೂ ಮುಂಚೂಣಿಯಲ್ಲಿದ್ದಳು. ಉತ್ಸವಗಳು ನಡೆಯುವಾಗ ಸೊಂಡಿಲು ಎತ್ತಿ ನಮಸ್ಕರಿಸುತ್ತಾ ಸಾಗುವುದನ್ನು ನೋಡುವುದೇ ಒಂದು ಖುಷಿಯಾಗಿತ್ತು. ಭಕ್ತಾದಿಗಳಿಗೂ ಯಾವುದೇ ತೊಂದರೆ ನೀಡದೆ ಏನನ್ನೂ ಅಪೇಕ್ಷಿಸದೆ ಇದ್ದ ಲತಾ ಧರ್ಮಸ್ಥಳ ಧರ್ಮಾಧಿಕಾರಿಗಳಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಶಿವಾನಿ ಹಾಗೂ ಲಕ್ಷ್ಮೀ ಕ್ಷೇತ್ರದಲ್ಲಿ ಇದ್ದರೂ ಕೂಡಾ ಲತಾ ನಡೆದುಕೊಂಡಂತೆ ಆಕೆಯನ್ನು ಅನುಸರಿಸುತ್ತಿದ್ದವು. ಲತಾಳಿಗೆ ಜನಿಸಿದವಳು ಲಕ್ಷ್ಮೀಯಾಗಿದ್ದರೆ, ಲಕ್ಷ್ಮೀಯಲ್ಲಿ ಜನಿಸಿದ ಆನೆ ಶಿವಾನಿ. ಶಿವಾನಿ ಜನನವಾದ ಬಳಿಕ ಲಕ್ಷ್ಮೀ ಉತ್ಸವದಲ್ಲಿ ಭಾಗವಹಿಸುತ್ತಿರಲಿಲ್ಲವಾಗಿದ್ದರೂ ಲತಾ ಮಾತ್ರ ನಿರಂತರವಾಗಿ ದೇವರ ಸೇವೆಯಲ್ಲಿ ಭಾಗಿಯಾಗಿದ್ದಳು.
ವಯಸ್ಸಾಗಿರುವ ಲತಾ ಶಿವರಾತ್ರಿಯಂದೇ ಶಿವನ ಪಾದ ಸೇರಿದ್ದು, ಧರ್ಮಸ್ಥಳ ಕ್ಷೇತ್ರದ ಜನರು ಕಂಬನಿ ಮಿಡಿದಿದ್ದಾರೆ.