ಶಿವಾಜಿ ಜಯಂತಿ: ಬೈಕ್ ರ‍್ಯಾಲಿ

Advertisement

ಬಾಗಲಕೋಟ: ಜಿಲ್ಲೆಯ ಇಳಕಲ್ ನಗರದ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ ಇಂದು ಮುಂಜಾನೆ ಚಾಲನೆಯನ್ನು ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬೈಕ್ ರ‍್ಯಾಲಿಯಲ್ಲಿ ಸುಮಾರು ೭೦೦ ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು.
ರ‍್ಯಾಲಿ ಅಜಾದ್ ಚಂದ್ರಶೇಖರ ಸರ್ಕಲ್‌ದಿಂದ ಆರಂಭವಾಗಿ ಸುಭಾಷ ರಸ್ತೆ, ನಗರಸಭೆ ಕಾರ್ಯಾಲಯ, ಕಂಠಿ ಸರ್ಕಲ್, ಬಸ್ ನಿಲ್ದಾಣ, ಮಹಾಂತ ಗಂಗೋತ್ರಿ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಹೊರಟು ಅಲ್ಲಿಂದ ಮರಳಿ ಕಂಠಿ ಸರ್ಕಲ್‌ಗೆ ಆಗಮಿಸಿ ಅಲ್ಲಿಂದ ಗೊರಬಾಳ ನಾಕಾ ಮಾರ್ಗವಾಗಿ ಗಾಂಧಿ ಚೌಕ, ವೆಂಕಟೇಶ ದೇವಸ್ಥಾನ ಬಜಾರ ಬಸವನಗುಡಿ, ಶ್ರೀರಾಮ ಮಂದಿರ, ಕೊಪ್ಪರದ ಪೇಟೆ ಬನಶಂಕರಿ ದೇವಸ್ಥಾನ, ಪಶುಚಿಕಿತ್ಸಾಲಯ, ಅಂಬಾಭವಾನಿ ದೇವಸ್ಥಾನ ಮಾರ್ಗವಾಗಿ ಮರಳಿ ಅಜಾದ್ ಸರ್ಕಲ್‌ಗೆ ತಲುಪಿತು.
ಮೆರವಣಿಗೆಯ ನೇತೃತ್ವವನ್ನು ಹಿಂದೂ ಸೇವಾ ಟ್ರಸ್ಟ್ ಸಮಿತಿಯ ಧುರೀಣರಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ರಾಘವೇಂದ್ರ ಸೂರೆ, ಎಂ,ಆರ್,ಪಾಟೀಲ, ವಿಠ್ಠಲ ಜಕ್ಕಾ, ಮತ್ತಿತರರು ವಹಿಸಿದ್ದರು.
ಮಹಿಳೆಯರ ಆಕರ್ಷಣೆ : ರ‍್ಯಾಲಿಯಲ್ಲಿ ಬೈಕ್ ಮೇಲೆ ಹಿಂದೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನು ರ‍್ಯಾಲಿಯ ಮೊದಲಿಗೆ ಸುರಕ್ಷಿತವಾಗಿ ಕಳಿಸಿಕೊಡುವ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದರು. ಹೆಚ್ಚುವರಿ ಎಸ್‌ಪಿ ಪ್ರಸನ್ನದೇಸಾಯಿ ಡಿವಾಯ್‌ಎಸ್‌ಪಿ ಗಿರೀಶ, ಸಿಪಿಐ ಸುರೇಶ ಬಂಡೆಗುಂಬಳ ನಗರ ಪಿಎಸ್‌ಐ ಕೃಷ್ಣವೇಣಿ ನೇತೃತ್ವದಲ್ಲಿ ರ‍್ಯಾಲಿ ನಡೆಯಿತು.