ಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ

Advertisement

ರಾಣೇಬೆನ್ನೂರ: ನಗರದ ಬನಶಂಕರಿ ದೇವಸ್ಥಾನದ ಬಳಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದ ಘಟನೆ ಬುಧವಾರ ನಡೆದಿದೆ. ವಾಗೀಶ ಬಸವಾನಂದ ಶೆಟ್ಟರ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ದಾಳಿಯಲ್ಲಿ ನೋಟ್ ಎಣಿಸುವ ಯಂತ್ರ, 8 ಮನೆ, 16 ನಿವೇಶನ ಸೇರಿದಂತೆ ಸುಮಾರು 4.75 ಕೋಟಿ ರು. ಮೌಲ್ಯದ ಆಸ್ತಿಪಾಸ್ತಿಗಳಿಸಿರುವುದು ಪತ್ತೆಯಾಗಿದೆ.
ಬುಧವಾರ ಬೆಳಗ್ಗೆ 6 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅವರ ಆಸ್ತಿಪಾಸ್ತಿ ದಾಖಲೆ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಕೊಟ್ಯಾಂತರ ರುಪಾಯಿ ಮೌಲ್ಯದ ಆಸ್ತಿ ಪಾಸ್ತಿ ಹೊಂದಿರುವುದು ಪತ್ತೆಯಾಗಿದೆ. ಮನೆ ಮೇಲೆ ದಾಳಿ ಮಾಡಿದ ವೇಳೆ ಅರ್ಧ ಕೆಜಿ ಬಂಗಾರದ ಆಭರಣ, 2 ಕೆಜಿ ಬೆಳ್ಳಿ, 18.30 ಲಕ್ಷ ನಗದು, ನೋಟ್ ಎಣಿಸುವ ಯಂತ್ರ ಸಿಕ್ಕಿದೆ.
3 ಕಾರು, 2 ಟ್ರ್ಯಾಕ್ಟರ್, 2 ಬೈಕ್, 8 ಮನೆ, ರಾಣೇಬೆನ್ನೂನಲ್ಲಿ 14 ಹಾಗೂ ಹಾವೇರಿಯಲ್ಲಿ 2 ಸೈಟ್ ಸೇರಿದಂತೆ 16 ನಿವೇಶನಗಳನ್ನು ಹೊಂದಿದ್ದಾರೆ. ಸವಣೂರು, ರಾಣೇಬೆನ್ನೂರು ಸುತ್ತಮುತ್ತ 50 ಎಕರೆ ಕೃಷಿ ಜಮೀನು ಇರುವುದು ಗೊತ್ತಾಗಿದೆ. 10 ಇಂಚಿನ ಜಿಂಕೆ ಕೊಂಬು ಕೂಡ ಈ ವೇಳೆ ಪತ್ತೆಯಾಗಿದೆ.
ರಾಣೇಬೆನ್ನೂರಿನಲ್ಲಿ 4 ಮಹಡಿಯ ವಾಣಿಜ್ಯ ಸಂಕಿರಣ ಇದ್ದು, ವಿವಿಧ ಬ್ಯಾಂಕ್‌ಗಳಲ್ಲಿ 18 ಖಾತೆ ಹೊಂದಿರುವುದು ಗೊತ್ತಾಗಿದೆ. ಬ್ಯಾಂಕ್‌ಗಳಲ್ಲಿನ ಲಾಕರ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಹಾವೇರಿಯ ನಿರ್ಮಿತಿ ಕೇಂದ್ರದ ಮೇಲೂ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಪಡೆಯಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಹಾವೇರಿ ಮತ್ತು ದಾವಣಗೆರೆಯ ಇನ್ಸ್ಪೆಕ್ಟರ್‌ಗಳಾದ ಮಧುಸೂಧನ, ಮಂಜುನಾಥ ನಡುವಿನಮನಿ, ಮುಸ್ತಾಕ್ ಅಹ್ಮದ್, ಆಂಜನೇಯ, ರಾಜು ರಾಷ್ಟçಪತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.