ಶೇಷನ್ ಮತ್ತೊಮ್ಮೆ ಹುಟ್ಟಿ ಬಾ…

Advertisement

ಈಗ ಟಿ.ಎನ್.ಶೇಷನ್ ಅವರಂಥವರು ಇರಬೇಕಾಗಿತ್ತು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಚುನಾವಣೆಯ ಸಂಭ್ರಮ. ಪ್ರಜಾಪ್ರಭುತ್ವದ ಹಬ್ಬ. ಹೊಸ ಪ್ರತಿನಿಧಿಯ ಆಯ್ಕೆಗೆ ಮತದಾರ ಸಜ್ಜಾಗುತ್ತಿರುವ ಈ ವೇಳೆಯಲ್ಲಿ ಜನ ಮತ್ತು ಪ್ರಜಾಪ್ರಭುತ್ವ ಪ್ರೇಮಿಗಳು ನೆನಪಿಸಿಕೊಳ್ಳುವುದು ಶೇಷನ್‌ರಂಥವರನ್ನು.
೧೯೯೦ರಿಂದ ೧೯೯೬ರವರೆಗೆ ಆರು ವರ್ಷಗಳ ಶೇಷನ್ ಚುನಾವಣಾ ಆಳ್ವಿಕೆ ನಿಜಕ್ಕೂ ಒಂದು ಹೆಮ್ಮೆ.
ಯಾವುದೇ ಭಯ, ಅಂಜಿಕೆ ಇಲ್ಲದೇ ಸಂವಿಧಾನದಲ್ಲಿ ಪ್ರದತ್ತವಾದಂತಹ ಅಧಿಕಾರವನ್ನು ಬಳಸಿ ಒಂದು ಜನ ಸರ್ಕಾರವನ್ನು ನಡೆಸಬಹುದು; ಈ ದೇಶದಲ್ಲಿ ಚುನಾವಣೆಯನ್ನು ಹಬ್ಬವನ್ನಾಗಿ ಕಾಣಬಹುದೆಂದು ತೋರಿಸಿಕೊಟ್ಟವರು ಶೇಷನ್.
ಶೇಷನ್ ಮುಖ್ಯ ಚುನಾವಣಾ ಆಯುಕ್ತ ಸ್ಥಾನದಿಂದ ನಿರ್ಗಮಿಸಿ ಇಪ್ಪತ್ತೆಂಟು ವರ್ಷಗಳಾದರೂ ಮತ್ತೆ ಮತ್ತೆ ಅವರು ನೆನಪಾಗುತ್ತಾರೆ. ಆಶ್ಚರ್ಯ ಎಂದರೆ ಶೇಷನ್ ನಿವೃತ್ತರಾದ ನಂತರ ಹುಟ್ಟಿದ, ಈಗ ಮತದಾನದ ಹಕ್ಕು ಹೊಂದಿರುವ ಸುಮಾರು ೩೦ ಕೋಟಿಗೂ ಅಧಿಕ ಮಂದಿಗೆ ಟಿ.ಎನ್.ಶೇಷನ್‌ರಂತಹ ಮುಖ್ಯ ಚುನಾವಣಾ ಆಯುಕ್ತರಿದ್ದರು, ಅವರು ಡೇರ್ ಡೆವಿಲ್ ಆಗಿ ಚುನಾವಣೆ ನಿರ್ವಹಿಸಿದ್ದರು ಎಂಬುದಾಗಿ ಅವರ ಕಾರ್ಯವೈಖರಿಯ ಬಗ್ಗೆ ಹಿಂದಿನ ಶೂರ ಧೀರ ಮಹಾರಾಜರ ರೀತಿ ಕುತೂಹಲ ಹಾಗೂ ಹೆಮ್ಮೆಯಿಂದ ಅಭಿಮಾನದ ಮಾತನಾಡುತ್ತಾರೆ..!
ಭಾರತದಲ್ಲಿಯ ಚುನಾವಣೆ ಎಂದರೆ ಭಯ, ಅಂಜಿಕೆ, ಪಕ್ಷಪಾತ, ಆಳುವ ಸರ್ಕಾರದ ಅಕ್ರಮ, ಮೇಲಾಟ, ಎಲ್ಲಕ್ಕೂ ಹೆಚ್ಚಾಗಿ ಹಣ- ಹೆಂಡ, ತೋಳ್ಬಲದ ದರ್ಬಾರು. ಪ್ರಾಮಾಣಿಕ, ಸಾಮಾನ್ಯ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವುದು ಬಿಡಿ, ಮತ ಹಾಕಲೂ ಭಯ ಪಡಬೇಕಾದಂತಹ ಪರಿಸ್ಥಿತಿ ಶೇಷನ್ ಅವರಿಗಿಂತ ಮೊದಲಿತ್ತು..! ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿ ಮಾಡಿದ ಮೊದಲ ಕೆಲಸ ಸಂವಿಧಾನದಲ್ಲಿದ್ದ ಅಧಿಕಾರವನ್ನು ಬಳಸಿಕೊಂಡು ಕಡ್ಡಾಯ ಮತ್ತು ಬಿಗಿಯಾದ ನೀತಿ ಸಂಹಿತೆಯನ್ನು ಜಾರಿಗೊಳಿಸಿದ್ದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಏನೆಲ್ಲ ಬೇಕೋ ಅವನ್ನು ನಿರ್ಭಯದಿಂದ ಜಾರಿಗೊಳಿಸುತ್ತಾ, ಖೊಟ್ಟಿ ಮತದಾನ, ಕಪ್ಪು ಹಣ, ಗೂಂಡಾಗರ್ದಿ, ಅಕ್ರಮಗಳಿಗೆ ನಿಯಂತ್ರಣ ಹಾಕಿದ್ದು. ಮೊದಲ ಬಾರಿಗೆ ಮತದಾರರಿಗೆ ಗುರುತಿನ ಚೀಟಿ ನೀಡುವ ಕ್ರಮ ಕೈಗೊಂಡಿದ್ದು. ಬೇರೆ ರಾಜ್ಯಗಳಿಂದ ಹಿರಿಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ಆಮಿಷ, ಮತ ಖರೀದಿಗೆ ನಿಯಂತ್ರಣ ಹೇರಿದ್ದು. ಅಧಿಕಾರ ಯಂತ್ರ ದುರುಪಯೋಗ, ಚುನಾವಣಾ ವೆಚ್ಚಕ್ಕೆ ನಿಯಂತ್ರಣ, ವೆಚ್ಚ ಪರಿಶೀಲನೆಗೆ ಆದಾಯ, ವಾಣಿಜ್ಯ ತೆರಿಗೆ ಅಧಿಕಾರಿಗಳ ನೇಮಕ ಮಾಡಿದ್ದು. ಆದಾಗ್ಯೂ ಹೆಚ್ಚು ವೆಚ್ಚ ಮಾಡಿದ ಅಥವಾ ವೆಚ್ಚ ವಿವರ ನೀಡದ ೧೪೬೮ ಅಭ್ಯರ್ಥಿಗಳನ್ನು ದೇಶಾದ್ಯಂತ ಮತ್ತೆ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಶಿಕ್ಷೆ ನೀಡಿದ್ದು. ಜಾತಿ, ಮತ, ಸಮುದಾಯದ ಆಧಾರದಲ್ಲಿ ಮತ ಕೇಳಿದ ಅಭ್ಯರ್ಥಿಗಳನ್ನು ಶಿಕ್ಷೆಗೆ ಒಳಪಡಿಸಿದ್ದು. ಕೋಮು ಭಾವನೆ ಪ್ರಚೋದಿಸುವ ಭಾಷಣಗಳಿಗೆ ಬ್ರೇಕ್ ಹಾಕಿದ್ದು. ಗೂಂಡಾ ಸಂಸ್ಕೃತಿಯಿಂದಲೇ ಅಧಿಕಾರ ಪಡೆಯುತ್ತಿದ್ದ ಬಿಹಾರ್, ಪಂಜಾಬ್‌ಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವತನಕ ಚುನಾವಣೆ ನಡೆಸುವುದೇ ಇಲ್ಲ ಎಂದು ಹಠ ಸಾಧಿಸಿದ್ದು. ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡಲು ನಿರ್ಬಂಧ, ಧ್ವನಿವರ್ಧಕ ಮಿತಿ, ರಾತ್ರಿ ೧೦ರ ಒಳಗೆ ಮಾತ್ರ ಪ್ರಚಾರಕ್ಕೆ ಕಾಲಾವಕಾಶ, ಯಾವುದೇ ಸಭೆ ಸಮಾರಂಭಗಳಿಗೆ ಕಡ್ಡಾಯ ಅನುಮತಿ ನಿಗದಿಗೊಳಿಸಿದ್ದು.
ಅದಕ್ಕಾಗಿಯೇ ಶೇಷನ್ ಕಾಲ ಚುನಾವಣಾ ಇತಿಹಾಸದ ಸುವರ್ಣ ಯುಗ' ಎಂದು ಕರೆಯಲಾಗುತ್ತದೆ. ನೋಡಿ. ದುಡ್ಡು, ಹೆಂಡ, ರಕ್ತಪಾತ, ಬೂತ್‌ವಶ ಸಂಸ್ಕೃತಿ ಮಾಡಿದ ಶೇಷನ್‌ರ ಕಾಲು ಕೈ ಕಟ್ಟಿ ಹಾಕುವ ಯತ್ನ ನಡೆದಾಗಲೆಲ್ಲ ಜನ ಆಕ್ರೋಶಗೊಂಡಿದ್ದರು. ಆದರೆ ಶೇಷನ್ ಅಧಿಕಾರ ಮುಗಿಯುತ್ತಿದ್ದಂತೇ ಇಬ್ಬರು ಚುನಾವಣಾ ಆಯುಕ್ತರನ್ನು ಹೆಚ್ಚುವರಿಯಾಗಿ ನೇಮಿಸಿ, ಮುಖ್ಯ ಚುನಾವಣಾ ಆಯುಕ್ತರ ಅಧಿಕಾರವನ್ನೆಲ್ಲ ಸಡಿಲಗೊಳಿಸಿ ಮತ್ತೆ ಹಣದ ಮತ್ತು ಅಧಿಕಾರದ ಅಟ್ಟಹಾಸಕ್ಕೆ ಕಾರಣವಾಗುತ್ತಿರುವ ಸ್ಥಿತಿ ಈಗ ಬಂದಿದೆ. ಮುಖ್ಯ ಚುನಾವಣಾ ಅಧಿಕಾರಿ ಸ್ಥಾನದಿಂದ ಶೇಷನ್ ಎಂದು ನಿವೃತ್ತಿಯಾದರೋ ಆ ನಂತರ ಅಂದಿನಿಂದ ಇಂದಿನವರೆಗೆ ನಡೆದದ್ದೆಲ್ಲ ಹಣಬಲ, ತೋಳ್ಬಲ, ಅಧಿಕಾರ ಬಲಗಳ ಅಟ್ಟಹಾಸ.ಕಟ್ಟಿ ಹಾಕಿದ ಗೂಳಿಯನ್ನು ಒಮ್ಮೆಲೇ ಬಿಚ್ಚಿ ಹಾಕಿದ ಸ್ಥಿತಿ’.
ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಲೋಕಸಭಾ ಚುನಾವಣೆಗೆ ಕೆಲವು ಅಭ್ಯರ್ಥಿಗಳು ಎರಡು ನೂರು ಕೋಟಿ ರೂಪಾಯಿಯವರೆಗೆ ಖರ್ಚು ಮಾಡುತ್ತಿರುವುದು ಕಂಡು ಬಂದಿದೆ. ಪ್ರತಿ ಕ್ಷೇತ್ರದಲ್ಲಿ ಒಬ್ಬೊಬ್ಬ ಅಭ್ಯರ್ಥಿಗಳು ೫೦ರಿಂದ ೮೦ ಕೋಟಿ ರೂಪಾಯಿವರೆಗೆ ವಿನಿಯೋಗಿಸಿದ್ದಾರೆ. ಹಾಗಾಗಿಯೇ ಈಗ ಚುನಾವಣೆ ಎನ್ನುವುದು ಕಪ್ಪು ಹಣದ ದೊರೆಗಳ, ಭಾರಿ ಶ್ರೀಮಂತರ ಆಟವಾಗಿದೆ. ಶೇಷನ್ ಇದ್ದಿದ್ದರೆ, ಜಾತಿ, ಕೋಮಿನ ಮಾತು ಆಡುವ ಧೈರ್ಯ ಯಾರಿಗಿತ್ತು? ಚುನಾವಣೆ ಪೂರ್ವವೇ ಕುಕ್ಕರ್, ಇಸ್ತ್ರಿ ಪೆಟ್ಟಿಗೆ, ಸೀರೆ-ಉಂಗುರ ಕೊಡುವ ಧೈರ್ಯ ಎಲ್ಲಿರುತ್ತಿತ್ತು?
ಶೇಷನ್ ಇದ್ದಿದ್ದರೆ, ಸಂವಿಧಾನ ಬದಲಿಸುತ್ತೇವೆ ಎನ್ನುವ ಧೈರ್ಯವನ್ನು ತೋರುತ್ತಿದ್ದರಾ? ಉಚಿತ ಗ್ಯಾರಂಟಿ ಸ್ಕೀಮುಗಳ ಘೋಷಣೆಯಾಗುತ್ತಿತ್ತಾ? ರಾಮ ಮಂದಿರ ಚುನಾವಣಾ ವಿಷಯವಾಗುತ್ತಿತ್ತಾ? ಬೇರೆ ದೇಶಗಳಿಂದ ವಲಸೆ ಬಂದವರು ಚುನಾವಣಾ ಕಾರ್ಡ್ ಹೊಂದುತ್ತಿದ್ದರಾ? ಎಲ್ಲಕ್ಕೂ ಹೆಚ್ಚಾಗಿ ಈಗ ಭುಗಿಲೆದ್ದಿರುವ ಚುನಾವಣಾ ಬಾಂಡ್ ವಿವಾದ, ಅದು ಇಷ್ಟೆಲ್ಲ ಗೋಪ್ಯವಾಗಿರುತ್ತಿತ್ತಾ?
ನಿಜ. ಶೇಷನ್ ಇದ್ದಿದ್ದರೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ದೇಣಿಗೆ ಸಂಗ್ರಹ(ನಿಧಿ) ಕಾರ್ಯಕ್ಕೆ ಖಂಡಿತ ಹಿಂದೇಟು ಹಾಕುತ್ತಿದ್ದರು. ಹಣ ಪಡೆದವರಿಗಿಂತ ಹಣ ಕೊಟ್ಟವರ ಜಾಡು, ನೆರಳು ಎಲ್ಲವನ್ನೂ ಅವರು ಬಿಚ್ಚಿ ಬಿಸಾಡುತ್ತಿದ್ದರು. ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವ ಪ್ರಕ್ರಿಯೆಯೇ ಇರುತ್ತಿರಲಿಲ್ಲ. ಏಕೆಂದರೆ ಶೇಷನ್ ಈ ಹಿಡನ್ ಬಾಂಡ್‌ಗಳನ್ನು ಒಪ್ಪುತ್ತಲೇ ಇರಲಿಲ್ಲ. ಹಾಗಾಗಿಯೇ ಈ ಚುನಾವಣಾ ಬಾಂಡ್‌ಗಳ ವಿಚಾರಣೆ ವೇಳೆ ಎಲ್ಲರ ಬಾಯಲ್ಲಿ ಬಂದಿದ್ದು ಶೇಷನ್ ಇದ್ದಿದ್ದರೇ… ಎಂಬ ಮಾತು!
ದೇಶದ ಮೊದಲ ಚುನಾವಣೆಯ ಒಟ್ಟಾರೆ ಸರ್ಕಾರಿ ವೆಚ್ಚ ೧೦.೫ ಕೋಟಿ ರೂ. ಅಂದು ಕಣದಲ್ಲಿದ್ದ ೧೮೭೪ ಅಭ್ಯರ್ಥಿಗಳ ವೆಚ್ಚ ಸರಿಸುಮಾರು ೨೦ ಕೋಟಿ ರೂ. ಆಸುಪಾಸು ಇದ್ದೀತು.. ಈಗ ೨೦೧೪ರ ಲೋಕಸಭೆ ಚುನಾವಣೆಯ ಸರ್ಕಾರಿ ವೆಚ್ಚ ೩೮೭೦.೩೦ ಕೋಟಿ. ೨೦೧೯ರ ಚುನಾವಣೆಯ ವೆಚ್ಚ ಅಂಕಿಸಂಖ್ಯೆ ಲೆಕ್ಕಾಚಾರ ಇನ್ನೂ ಲಭ್ಯವಾಗಿಲ್ಲ.. ೨೦೨೪ರ ಚುನಾವಣಾ ವೆಚ್ಚ ೨೪೪೨ ಕೋಟಿ ರೂ ಕಾಯ್ದಿರಿಸಿದೆ. ಅಭ್ಯರ್ಥಿಗಳ ವೆಚ್ಚ ಸರಿಸುಮಾರು ೫೫ಸಾವಿರ ಕೋಟಿಯಷ್ಟು ಎಂಬ ಅಂದಾಜು! ಅಷ್ಟು ಹಣ ಒಂದೆರಡು ತಿಂಗಳಲ್ಲಿ ಜನರಲ್ಲಿ ಚಲಾವಣೆ ಆಗಲಿದೆ!.
ಟೀಕೆ ಟಿಪ್ಪಣಿ, ಆರೋಪ- ಪ್ರತ್ಯಾರೋಪಗಳಿಗೆಲ್ಲ ನೀತಿ ಸಂಹಿತೆ ಇದೆ. ಆದರೆ ನೋಡುತ್ತೀದ್ದೀರಲ್ಲ, ಏನೆಲ್ಲ ಬೈಗುಳ, ನಿಂದನೆ, ವಾಗ್ಬಾಣಗಳು, ಟೀಕಾಝರಿಗಳು…!
ಮೊನ್ನೆ ದೇಶದ ಮುಖ್ಯ ಚುನಾವಣಾ ಅಧಿಕಾರಿ ಚುನಾವಣೆ ಘೋಷಣೆಗೆ ಪತ್ರಿಕಾ ಗೋಷ್ಠಿ ಕರೆದಿದ್ದರು. ಆಗ ತೂರಿಬಂದ ಪ್ರಶ್ನೆ, ಚುನಾವಣಾ ನೀತಿ ಸಂಹಿತೆಯನ್ನು ಮತ್ತು ಅನುಚಿತ ಪ್ರಚೋದನಾಕಾರಿ ಮಾತುಗಳ ಸಂಬಂಧ ಪ್ರತಿಪಕ್ಷದ ನಾಯಕರ ಮೇಲೆ ದೂರು ದಾಖಲಿಸುವ ತಾವು, ಮತ್ತೂ ಹೆಚ್ಚು ಪ್ರಚೋದನಾಕಾರಿಯಾಗಿ ಮತ್ತು ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡ ಆಡಳಿತ ಪಕ್ಷದವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ? ಅಮಿತ್ ಶಾ, ಮೋದಿ, ಯೋಗಿ ಮೊದಲಾದವರ ಮೇಲೆ ದೂರಿದ್ದರೂ, ತೆಗೆದುಕೊಂಡ ಕ್ರಮ ಏನು? ಪ್ರಶ್ನೆಗೆ ಮುಖ್ಯ ಚುನಾವಣಾ ಅಧಿಕಾರಿ ಉತ್ತರಿಸದೇ ಮರೆಮಾಚಿಬಿಟ್ಟರು. ಮೊನ್ನೆ ಚುನಾವಣಾ ಆಯುಕ್ತರಾಗಿದ್ದ ಅರುಣ ಗೋಯಲ್ ರಾಜೀನಾಮೆ ನೀಡಿದರು. ಅವರ ನೇಮಕ ಕೂಡ ಒಂದೇ ದಿನದಲ್ಲಿ ಆಗಿತ್ತು. ಇದಕ್ಕೂ ಸರ್ವೋಚ್ಚ ನ್ಯಾಯಾಲಯ ಆಶ್ಚರ್ಯ ಪಟ್ಟಿತ್ತು. ಏಕೆಂದರೆ ಪ್ರಸ್ತುತ ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿದೆ. ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಹಲವರು ಆಗಿದ್ದಾರೆ, ಆದರೆ ಟಿ.ಎನ್.ಶೇಷನ್ ಅವರಂಥ ದಿಟ್ಟ ಅಧಿಕಾರಿ ಅಪರೂಪ. ಯಾರೊಬ್ಬ ಮುಖ್ಯ ಚುನಾವಣಾಧಿಕಾರಿಯ ಹೆಸರೂ ದೇಶದ ಜನತೆಯ ನೆನಪಿನಲ್ಲಿ ಇಲ್ಲ. ಆದರೆ ಇಪ್ಪತ್ತಾರು ವರ್ಷಗಳ ನಂತರವೂ ಟಿ.ಎನ್.ಶೇಷನ್ ನೆನಪು ಸದಾ ಇದೆ’ಎಂದು ತೆರೆದ ನ್ಯಾಯಾಲಯದಲ್ಲಿಯೇ ಶ್ಲಾಘಿಸಿದ್ದರು..ಶೇಷನ್ ಮತದಾರರ ಹೀರೋ, ರಾಜಕಾರಣಿಗಳ ದುಸ್ವಪ್ನವಾಗಿದ್ದರು.
ಮೊನ್ನೆ ನಡೆದ ಹಿರಿಯ ರಾಜಕಾರಣಿಯೊಬ್ಬರ ಸನ್ಮಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ `ಟಿ.ಎನ್.ಶೇಷನ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ನಾವೆಲ್ಲ ನಡುಗುತ್ತಿದ್ದೆವು. ಹೆದರಿಕೆ- ಶಿಸ್ತು ಇತ್ತು. ಈಗ ಚುನಾವಣೆಯಲ್ಲಿ ೨೦೦- ೩೦೦ ಕೋಟಿ ಖರ್ಚು ಮಾಡುವವರೂ ಇದ್ದಾರೆ. ಇದೇ ನಮ್ಮ ಮೌಲ್ಯವೇ?’ ಎಂದು ಬದಲಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಈ ಸಂದರ್ಭದಲ್ಲಿ ಎಷ್ಟು ಪ್ರಸ್ತುತ ಅಲ್ಲವೇ? ಶೇಷನ್‌ರಂಥವರು ದೇಶದ ಮುಖ್ಯ ಚುನಾವಣಾಧಿಕಾರಿಯಾಗಿರಬೇಕು ಎಂಬುದು ಜನತೆಯ, ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರ ಮನದಾಳ… ಆಶಯ… ಆದರೆ ಮುಖ್ಯ ಚುನಾವಣಾಧಿಕಾರಿ ಮತ್ತು ಆಯೋಗ ತಮ್ಮ ಕೈಗೊಂಬೆಯೇ ಆಗಿರಬೇಕು ಎಂಬುದು ಅಧಿಕಾರ ಗದ್ದುಗೆ ಹಿಡಿದವರ ಆಶಯ. ಈಗ ಹಲ್ಲು ಕಿತ್ತು, ಕೈ ಕಾಲು ಕಟ್ಟಿ, ಬಾಯಿ ಮತ್ತು ಕಿವಿ ಮುಚ್ಚಿಕೊಂಡ ಚುನಾವಣಾ ಆಯೋಗ ನಡೆಸುವ ಚುನಾವಣೆಯಲ್ಲಿ ಮತದಾರ ಮೂಕ ಪ್ರೇಕ್ಷಕ. ಅಥವಾ ಸಿಕ್ಕಿದ್ದು ಸೀರುಂಡೆ ಎನ್ನುವ ಅವಕಾಶವಾದಿ, ಅಲ್ಲವೇ !?