ಶ್ರದ್ಧೆ ಮತ್ತು ನಿಷ್ಠೆ

Advertisement

ಭಗವದ್ ಭಕ್ತಿಯ ಸಂಬಂಧವು ಒಂದೇ ವಿಧವಾಗಿ ಇರದೇ ಹಲವು ಬಗೆಯಾಗಿರುತ್ತದೆ. ಮಹಾದೇವಿಯಕ್ಕ ಪತಿಯೆಂದು ಭಾವಿಸಿದಳು. ಮಗನೆಂದು ಭಾವಿಸಿದಳು ಯಶೋಧೆ, ತಂದೆಯೆಂದು ಭಾವಿಸಿದ ಧ್ರುವ. ಸಖನೆಂದು ಭಾವಿಸಿದ ಅರ್ಜುನ. ಇನ್ನೂ ಅನೇಕರು ಅನೇಕ ವಿಧವಾದ ಸಂಬಂಧವನ್ನು ಭಗವಂತನೊಂದಿಗೆ ಕಲ್ಪಿಸಿಕೊಂಡರು. ದೇವರೊಂದಿಗೆ ಯಾವ ವಿಧವಾದ ಸಂಬಂಧವನ್ನು ಭಾವಿಸಿಕೊಂಡರು ಎನ್ನುವುದು ಇಲ್ಲಿ ಅಷ್ಟು ಮುಖ್ಯವಲ್ಲ, ಆದರೆ ಅವರು ಆ ಸಂಬಂಧದ ಆಧಾರವಾದ ದೇವರಲ್ಲಿ ಎಷ್ಟು ಪ್ರಗಾಢವಾದ ನಿಷ್ಠೆಯನ್ನು ಹೊಂದಿರುವರು ಎನ್ನುವುದು ತುಂಬ ಮುಖ್ಯವಾದ ಸಂಗತಿ.
ಅಕ್ಕಮಹಾದೇವಿಯಲ್ಲಿ ತಾನು ಪತಿಯೆಂದು ಭಾವಿಸಿದ ಚನ್ನಮಲ್ಲಿಕಾರ್ಜುನನ ಕಾಣುವ ತವಕ ಅದೆಷ್ಟು ಬಲಿಷ್ಟವಾದುದು ! ಆ ತವಕವನ್ನು ತಡೆದು ನಿಲ್ಲಿಸುವುದು ತಂದೆ ತಾಯಿಗಳಿಗಾಗಲಿಲ್ಲ, ಬಂಧು ಬಳಗದವರಿಗಾಗಲಿಲ್ಲ, ಧನ-ಕನಕಗಳಿಂದ ತುಂಬಿದ ಸಾಮ್ರಾಜ್ಯಕ್ಕಾಗಲಿಲ್ಲ ಕಾಮಾಸಕ್ತನಾದ ಕೌಶಿಕನಿಗೂ ಆಗಲಿಲ್ಲ. ಅದು ನಿಷ್ಠೆಯ ಸೆಳೆತ. ನೀರಿನ ಪ್ರವಾಹ ತಡೆದು ನಿಲ್ಲಿಸಬಹುದು. ವಾಯುವಿನ ವೇಗವನ್ನು ತಡೆಯಬಹುದು. ಆದರೆ ನಿಷ್ಠೆಯ ಪ್ರವಾಹವನ್ನು, ವೇಗವನ್ನು ತಡೆಯುವುದು ಅಸಾಧ್ಯ.
ಸಾಧಕನಲ್ಲಿರುವ ಶ್ರದ್ಧಾಭಕ್ತಿಯು ನಿಷ್ಠಾಭಕ್ತಿಯ ರೂಪವನ್ನು ತಾಳಿದಾಗ ಭಕ್ತನೇ ನಿಜ ಭಕ್ತನಾಗುತ್ತಾನೆ.
ಸ್ವಾತ್ಯಾಂ ಸಾಗರ ಶುಕ್ತಿ ಮಧ್ಯಪತಿತಂ ತನ್ಮೌಕ್ತಿಕಂ ಜಾಯತೆ
ಎಂಬ ಉಕ್ತಿಯಂತೆ ಸ್ವಾತಿ ಮಳೆಯ ಮೂಲಕ ಇಳಿದು ಬಂದ ನೀರಿನ ಹನಿಯು ಸಾಗರದ ಮೇಲೆ ತೇಲುವ ಕಪ್ಪೆಚಿಪ್ಪಿನಲ್ಲಿ ಸೇರಿ ಕೆಲವೇ ದಿನಗಳಲ್ಲಿ ಗಟ್ಟಿಯಾಗಿ ಬೆಲೆಬಾಳುವ ಮುತ್ತಿನ ಮಣಿಯಾಗುವಂತೆ ಭಗವತ್ ಪ್ರೇಮ ರೂಪದ ಶ್ರದ್ಧಾಭಕ್ತಿಯು ಭಕ್ತನ ಹೃದಯವನ್ನು ಪ್ರವೇಶಿಸಿ ಕೆಲದಿನಗಳ ನಂತರ ಗಟ್ಟಿಯಾಗಿ ನಿಷ್ಠಾರೂಪವನ್ನು ತಾಳುತ್ತದೆ.
ಶ್ರದ್ಧೆಯಲ್ಲಿ ಚಂಚಲತೆ ಎನ್ನುವ ದೋಷವಿರುವ ಸಂಭವವಿರುತ್ತದೆ. ಆದರೆ ನಿಷ್ಠೆಯಲ್ಲಿ ನಿಶ್ಚಲತೆ ಇರುತ್ತದೆ.
ಗಾಳಿಯಲ್ಲಿರಿಸಿದ ದೀಪದ ಜ್ಯೋತಿ ಹೊಯ್ದಾಡುವದರಿಂದ ಅದರ ಪ್ರಭೆ ವ್ಯಾಪಕವಾಗಿ ಬೀಳಲಾರದು. ಆದರೆ ನಿರ್ವಾತ ಸ್ಥಾನದಲ್ಲಿರಿಸಿದ ದೀಪದ ಜ್ಯೋತಿ ನಿಶ್ಚಲವಾಗಿರುವುದರಿಂದ ಅದರ ಪ್ರಭೆ ವ್ಯಾಪಕವಾಗಿ ಮತ್ತು ವ್ಯವಸ್ಥಿತವಾಗಿ ಸುತ್ತೆಲ್ಲ ಹರಡುತ್ತದೆ. ಇದರಂತೆ ಚಂಚಲವಾದ ಭಗವದ್ಭಕ್ತಿಯು ಪರಿಣಾಮಕಾರಿಯಾಗಲಾರದು. ನಿಶ್ಚಲತೆಯಿಂದ ಕೂಡಿದ ಭಕ್ತಿಯೇ ಪರಿಣಾಮಕಾರಿ ಮತ್ತು ಫಲಕಾರಿಯಾಗಿರುತ್ತದೆ. ಭಕ್ತಿಯಲ್ಲಿ ಮಿಶ್ರಣಗೊಂಡ ಚಂಚಲತೆ ಅಳಿದು ನಿಶ್ಚಲಗೊಂಡಾಗ ಅದೇ ನಿಷ್ಠೆಯೆನಿಸುತ್ತದೆ. ಸಂಸ್ಕೃತದಲ್ಲಿ “ನಿಶ್ಚಯೇನ ತಿಷ್ಠತೀತಿ ನಿಷ್ಠಾ’ ನಿಶ್ಚಲವಾಗಿ ನಿಲ್ಲುವುದೇ ನಿಷ್ಠೆ ಎಂದು ನಿಷ್ಠಾಶಬ್ದದ ವ್ಯುತ್ಪತ್ತಿಯನ್ನು ಪ್ರತಿಪಾದಿಸಲಾಗಿದೆ. ಇನ್ನೊಂದೆಡೆ ಹರಿಯದೆ, ಒಂದೇ ಕಡೆ ನಿಲ್ಲುವ ಅಚಲ ಭಗವತ್ಪ್ರೇಮವೇ ನಿಷ್ಠೆ. ನಿಜಗುಣ ಶಿವಯೋಗಿಗಳು “ಅಚಲ ಭಕ್ತಿಭಾವಾನುಕೂಲವೇ ಶಂಭುಲಿಂಗ” ಎಂದು ಹಾಡುವ ಮೂಲಕ ಭಗವಂತನು ಅಚಲವಾದ ಭಕ್ತಿಯಿಂದಲೇ ಸಂಪ್ರೀತನಾಗುವನೆಂದು ನಿರೂಪಿಸಿದ್ದಾರೆ.