ಶ್ರೀರಂಗಪಟ್ಟಣ ‌ದಸರಾ ಸಕಲ ಸಿದ್ದತೆ: ಶಾಸಕ ಎ.ಬಿ.ರಮೇಶ್ ಬಂಡೀಸಿದ್ದೇಗೌಡ

Advertisement

ಶ್ರೀರಂಗಪಟ್ಟಣ: ಅಕ್ಟೋಬರ್‌ 16 ರಿಂದ 18 ರವರೆಗೆ 3 ದಿನಗಳ ಕಾಲ ನಡೆಯಲಿರುವ ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಎ.ಬಿ.ರಮೇಶ್ ಬಂಡೀಸಿದ್ದೇಗೌಡ ತಿಳಿಸಿದರು.

ಶ್ರೀರಂಗಪಟ್ಟಣ ಪುರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಹಾಗೂ ಪುರಸಭೆಯ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರುಗಳು, ಗಣ್ಯ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ದಸರಾ ಜವಾಬ್ದಾರಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅ.17 ರಂದು ಆರೋಗ್ಯ ಮೇಳ: ಶ್ರೀರಂಗ ವೇದಿಕೆಯ ಹತ್ತಿರ ಅಕ್ಟೋಬರ್ 17 ರಂದು ಆರೋಗ್ಯ ಮೇಳ ನಡೆಯಲಿದ್ದು, ಆರೋಗ್ಯ ಮೇಳದಲ್ಲಿ ನುರಿತ ವೈದ್ಯರು ಭಾಗವಹಿಸಿ ತಪಾಸಣೆ ನಡೆಸಲಿದ್ದಾರೆ ಎಂದರು

ಶ್ರೀರಂಗಪಟ್ಟಣ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗವಹಿಸುವ ಕಲಾ ತಂಡಗಳು ಹಾಗೂ 3 ದಿನ ನಡೆಯುವ ಮಹಿಳಾ ದಸರಾ, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಇನ್ನಿತರರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡುವಂತೆಯೂ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಆಹಾರ ಮೇಳದಲ್ಲಿ 20 ಸ್ಟಾಲ್ ಗಳನ್ನು ತೆರೆಯಲಾಗುವುದು. ಇಲ್ಲಿ ಮಾರಾಟಗಾರರು ತಯಾರಿಸುವ ಆಹಾರಗಳಿಗೆ ಆರ್. ಓ ನೀರನ್ನು ಬಳಸಬೇಕು ಜೊತೆಗೆ ಸ್ವಚ್ಛತೆ ಕಪಾಡಬೇಕು‌. ಆಹಾರ ಸಂರಕ್ಷಣಾಧಿಕಾರಿಗಳು 3 ದಿನ ಖುದ್ದು ಹಾಜರಿದ್ದು, ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಹಾಲು ಕರೆಯುವ ಸ್ಪರ್ಧೆ ಅಕ್ಟೋಬರ್ 17 ರಂದು ಬೆಳಿಗ್ಗೆ 6 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಹಾಲು‌ ಕರೆಯುವ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದರು.

ಜನರಿಗೆ ಮಾಹಿತಿ ನೀಡುವ ವಸ್ತುಪ್ರದರ್ಶನ ಆರೋಗ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯಿಂದ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಆಕರ್ಷಣೀಯ ವಸ್ತುಪ್ರದರ್ಶನ ಅನಾವರಣಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಪಾಂಡವಪುರ ‌ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಅಶ್ವಿನಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.