ಶ್ರೀರಂಗ ಕ್ರಿಕೆಟ್ ಕಪ್” ನಂಜನಗೂಡು ಮಡಿಲಿಗೆ

Advertisement

ಶ್ರೀರಂಗಪಟ್ಟಣ : ಪಟ್ಟಣದ ಶ್ರೀರಂಗನಾಥ‌ ಕ್ರೀಡಾಂಗಣದಲ್ಲಿ ಮಾ.07 ರಿಂದ 10 ರ ವರೆಗೆ ನಢೆದ ಮಂಡ್ಯ ಹಾಗೂ ಮೈಸೂರು ವಿಭಾಗ ಮಟ್ಟದ ‘ ಶ್ರೀರಂಗ ಕಪ್ ‘ ನಂಜನಗೂಡು(ಎನ್.ಎಫ್.ಸಿ.ಸಿ) ತಂಡದ ಮಡಿಲಿಗೆ ಸೇರಿತು.

ಶ್ರೀರಂಗ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಲೀಗ್ ಕಮ್ ನಾಕೌಟ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ನಂಜನಗೂಡು ತಂಡ ಪ್ರಥಮ ಬಹುಮಾನ ಪಡೆದರೆ, ಕಾಲ ಭೈರವೇಶ್ವರ ಮಂಡ್ಯ ತಂಡ ದ್ವಿತೀಯ ಬಹುಮಾನ , ಸ್ಟಾರ್ ಮದ್ದೂರು ತಂಡ ತೃತೀಯ ಬಹುಮಾನ ಪಡೆದುಕೊಂಡವು. ನಂಜನಗೂಡು ತಂಡದ ನವೀನ್ ಅಲಿಯಾಸ್ ನಾಗ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವಿಜೇತ ತಂಡಗಳಿಗೆ ಕ್ರಮವಾಗಿ ಒಂದು ಲಕ್ಷ ನಗದು ಅತ್ಯಾಕರ್ಶಕ ಟ್ರೋಫಿ, 50 ಸಾವಿರ ನಗದು ಆಕರ್ಷಕ ಟ್ರೋಫಿ, 25 ಸಾವಿರ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.

ಟೂರ್ನಿಯಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ, ಹುಣಸೂರು, ಮೈಸೂರು ಗ್ರಾಮಾಂತರ, ಗುಂಡ್ಲುಪೇಟೆ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿ ಗಮನ ಸೆಳೆದವು.

ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಕೃಷ್ಣಪ್ಪ, ಗಂಜಾಂ‌ ಶಿವು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕ್ರೀಡೆಯನ್ನು ಕ್ರೀಡಾ ಸ್ಪೂರ್ತಿಯೊಂದಿಗೆ ಸ್ವೀಕರಿಸಿ ಸೋಲು- ಗೆಲುವುಗಳನ್ನು ಸಮಾನವಾಗಿ ಕಾಣುವಂತೆ ಆಟಗಾರರಿಗೆ ಕಿವಿ ಮಾತು ಹೇಳಿದರು.

ಆಯೋಜಕರುಗಳಾದ ಕ್ಯಾಂಟೀನ್ ಮಹದೇವು, ಸುಬ್ರಹ್ಮಣ್ಯ, ಬಾಲಣ್ಣ ಸೇರಿದಂತೆ ಇತರ ಆಟಗಾರರು ಉಪಸ್ಥಿತರಿದ್ದು‌,‌‌ ಟೂರ್ನಿಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.