ಶ್ರೀರಾಮನ ಅನುಗ್ರಹಕ್ಕೆ ಪ್ರಾರ್ಥಿಸಿ…

ಗುರುಬೋಧೆ
Advertisement

ಅರುಣೋದಯ ಕಾಲದಲ್ಲಿ ಎದ್ದ ಕೂಡಲೇ ಹಾಸಿಗೆಯಲ್ಲಿ ಕುಳಿತು ಕಣ್ಮುಚ್ಚಿ ಹೃದಯದಲ್ಲಿ ರಾಮಚಂದ್ರನನ್ನು ಆಪಾದಮೌಳಿ ಪರ್ಯಂತ ಚಿಂತಿಸಿ ಕಾಣಬೇಕು. ಶ್ರೀರಾಮಚಂದ್ರನು ಸೀತಾ ಲಕ್ಷ್ಮಣ ಸಹಿತನಾಗಿ ಹನುಮಂತ ದೇವರಿಂದ ವಂದಿತನಾಗಿ ನಮ್ಮ ಹೃದಯ ಸಿಂಹಾಸನದಲ್ಲಿ ಕುಳಿತಿದ್ದಾನೆಂದು ಧ್ಯಾನ ಮಾಡಬೇಕು.
ಶ್ರೀರಾಮಚಂದ್ರನ ಕಾಲುಗಳನ್ನು ಮುಟ್ಟಿ ಸಾಷ್ಟಾಂಗ ನಮಿಸಿ, ಕಣ್ಣೀರಿಡುತ್ತ ಅವನ ಅನುಗ್ರಹವನ್ನು ಪ್ರಾರ್ಥಿಸಬೇಕು. ಶ್ರೀರಾಮನಿಗೆ ಜಯಕಾರ ಹೇಳಬೇಕು. ಮಂಗಳವನ್ನು ಹಾಡಬೇಕು. ಅಜ್ಞಾನದ ಹೊದಿಕೆಯಲ್ಲಿ ಕುರುಡನಾದ ನನ್ನನ್ನು ಉದ್ಧರಿಸು ಎಂದು ಪ್ರಾರ್ಥಿಸಿ ಇಂದಿನ ರಾಮನವಮಿಯ ಆಚರಣೆಯನ್ನು ಯಥಾಶಕ್ತಿ ನೀನೇ ನನ್ನಲ್ಲಿ ನಿಂತು ಮಾಡಿಸಿಕೋ ಎಂದು ಪ್ರಾರ್ಥಿಸಿ ಎದ್ದೇಳಬೇಕು.
ಎದ್ದ ಕೂಡಲೇ ದೇವರ ಮನೆಯಲ್ಲಿರುವ ಭಗವಂತನ ದರ್ಶನವನ್ನು ಮಾಡಿ, ಸಜ್ಜನರನ್ನು ದರ್ಶನ ಮಾಡಿ, ಹಸು, ತುಳಸಿ ಮೊದಲಾದವುಗಳ ದರ್ಶನವನ್ನು ಮಾಡಿ ಕನ್ನಡಿಯಲ್ಲಿ ಮುಖವನ್ನು ನೋಡಿ ನಿತ್ಯ ಶೌಚಾಚಾರಗಳನ್ನು ಆಚರಿಸಬೇಕು.
ಪ್ರತಿಯೊಬ್ಬರೂ ಅತ್ಯಂತ ವೈಭವದಿಂದ ರಾಮನವಮಿಯನ್ನು ಆಚರಣೆ ಮಾಡಬೇಕು. ಎಲ್ಲ ಬಗೆಯ ಪಾಪಗಳ ಪರಿಹಾರಕ್ಕೆ ರಾಮನಾಮ ಸ್ಮರಣೆಯನ್ನು ಪುರಾಣಗಳಲ್ಲಿ ಬಹಳವಾಗಿ ಹೇಳುತ್ತಾರೆ. ಆದ್ದರಿಂದ ಶ್ರೀರಾಮಾಯ ನಮಃ ಎಂಬ ಮಂತ್ರವನ್ನು ಪ್ರತಿಯೊಬ್ಬರೂ ಸದಾಕಾಲ ಮನಸ್ಸಿನಲ್ಲಿ ಹೇಳುತ್ತಲೇ ಇರಬೇಕು.
ಶ್ರೇಷ್ಠ ಗುರುಗಳಿಂದ ಬೀಜಾಕ್ಷರ ಸಹಿತವಾದ ರಾಮಮಂತ್ರವನ್ನು ಉಪದೇಶ ಪಡೆದುಕೊಂಡು ಅಕ್ಷರ ಲಕ್ಷ ಜಪ ಮಾಡಿ ರಾಮನವಮಿಯ ದಿವಸ ರಾಮಮಂತ್ರದ ಹೋಮ ಮಾಡುವುದರಿಂದ ರಾಮದೇವರ ಅನುಗ್ರಹವಾಗುತ್ತದೆ. ಮಾಡಿದ್ದೆಲ್ಲ ಪಾಪಗಳು ಪರಿಹಾರವಾಗುತ್ತವೆ.
ಬ್ರಾಹ್ಮಣರನ್ನು ಕರೆದು ಭೋಜನ ಮಾಡಿಸುವುದರಿಂದ ಅತ್ಯಧಿಕವಾದ ಫಲವು ಬರುತ್ತದೆಂದು ಸ್ಕಂದಪುರಾಣವು ತಿಳಿಸುತ್ತದೆ. ಅನ್ನದಾನದಿಂದ ರಾಮದೇವರಿಗೆ ಬಹಳ ಸಂತೋಷವಾಗುತ್ತದೆ.
ದೇವರ ಪೂಜೆಯ ಜೊತೆಯೇ ರಾಮದೇವರ ಪೂಜಾ ಮಂತ್ರಗಳನ್ನು ಹೇಳಿಕೊಂಡು ಪೂಜೆಯನ್ನು ಮಾಡಬೇಕು. ತಳಿರು ತೋರಣಗಳಿಂದ ಮನೆಯ ಬಾಗಿಲನ್ನು ದೇವರ ಮನೆಯನ್ನು ಸಿಂಗರಿಸಬೇಕು. ರಾಮಭಜನೆ, ರಾಮಕಥಾಶ್ರವಣ, ರಾಮಾಯಣ ಪಾರಾಯಣ, ತಾತ್ಪರ್ಯ ನಿರ್ಣಯದಲ್ಲಿ ರಾಮಾಯಣ ಕಥೆಯ ಪಾರಾಯಣ, ರಾಮದೇವರ ಪೂಜಾ ದರ್ಶನ, ರಾಮದೇವಸ್ಥಾನಗಮನ ಇವುಗಳನ್ನು ಯಥಾಶಕ್ತಿ ಆಚರಣೆ ಮಾಡಬೇಕು.
ರಾಮನವಮಿಯಂದು ಉಪವಾಸ ಮಾಡಬೇಕೆಂದು ಸ್ಕಂದ ಪುರಾಣವು ಹೇಳುತ್ತದೆ. ಆದರೆ ಉಪವಾಸ ಮಾಡಲೇಬೇಕೆಂಬ ನಿಯಮವು ಇರುವುದಿಲ್ಲ. ಭಗವಂತನ ದಶಾವತಾರಗಳ ದಿವಸಗಳಲ್ಲಿ ಕೃಷ್ಣಾಷ್ಟಮಿಯಂದು ಮಾತ್ರ ಉಪವಾಸವು ಕಡ್ಡಾಯವೆಂದು ಶ್ರೀಮಧ್ವಾಚಾರ್ಯರು ನಿರ್ಣಯವನ್ನು ನೀಡಿದ್ದಾರೆ.