ಸಂತ್ರಸ್ತರ ಬಾಳಿನ ಮೇಲೆ ಸವಾರಿ

Advertisement

ಬೆಳಗಾವಿಯ ನೀರಾವರಿ ಇಲಾಖೆಯಲ್ಲೊಂದು ಸಂತ್ರಸ್ತರ ಸಂಕಷ್ಟದ ಪ್ರಸಂಗ. ನಲವತ್ತೇಳು ವರ್ಷಗಳ ಹಿಂದೆ ಹಿಡಕಲ್ ಅಣೆಕಟ್ಟಿನ ನಿರ್ಮಾಣಕ್ಕಾಗಿ ಜಮೀನು, ಮನೆ ತೊರೆದು ಸಂತ್ರಸ್ತರಾದ ಐವತ್ತೆಂಟಕ್ಕೂ ಹೆಚ್ಚು ಕುಟುಂಬಗಳು ನೀರಾವರಿ ಕಚೇರಿಯ ಒಳಗೆ ತಮ್ಮ ಜಾನುವಾರು, ಪಾತ್ರೆ ಪಡಗದೊಂದಿಗೆ ನುಗ್ಗಿ ಅಲ್ಲಿಯೇ ನೆಲೆಯೂರಿಬಿಟ್ಟರು. ನಮಗೆ ಪರಿಹಾರ ಕೊಡಿ, ಇಲ್ಲಾ, ಗುಂಡು ಹಾಕಿ ಇಲ್ಲಿಯೇ ಕೊಂದು ಬಿಡಿ ಎಂಬುದು ಅವರ ಕಟ್ಟಕಡೆಯ ಹತಾಶೆ, ಆಕ್ರೋಶದ ನಿಲುವಾಗಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಮಂತ್ರಿ ಆಗಮಿಸಿದರೂ, ನೀವೀಗ ಪರಿಹಾರ ಕೊಡುತ್ತೀರಾ, ಕೊಟ್ಟು ಎಬ್ಬಿಸಿ ಎಂಬುದು ಅವರ ಬಿರುನುಡಿ ಹಾಗೂ ಅಂತಿಮ ನಿರ್ಧಾರದಂತಿತ್ತು.
ನಿಜ. ನಲವತ್ತೇಳು ವರ್ಷಗಳ ಹಿಂದೆ ನೀರಾವರಿ, ವಿದ್ಯುತ್‌ಗಾಗಿ ಇವರು ಮುಳುಗಡೆಯಾದವರು. ಅಂದಿನಿಂದ ದಮ್ಮಡಿ ಪರಿಹಾರ ಇಲ್ಲದೇ ಬೀದಿ ಅಂಚಿನಲ್ಲಿ ಜೋಪಡಿ ಕಟ್ಟಿಕೊಂಡು ಕೂಲಿ ನಾಲಿ ಮಾಡಿ, ಇಂದು ಬಂದೀತು ಪರಿಹಾರ, ಇಂದು ಸಿಕ್ಕೀತು ನೆರವು, ಇವರು ನೀಡಿಯಾರು ಆಸರೆ ಎಂಬ ಆಶಯದೊಂದಿಗೆ ನಿತ್ಯ ಸರ್ಕಾರಿ ಕಚೇರಿ, ನೀರಾವರಿ ಇಲಾಖೆ, ಡಿಸಿ ಆಫೀಸ್ ಅಲೆದಾಡುತ್ತಲೇ ಇದ್ದರು.
ಇದು ರಾಷ್ಟ್ರೀಯ, ರಾಜ್ಯ ಯೋಜನೆಗಳಿಂದ ಸಂತ್ರಸ್ತರಾದವರ ಸ್ಥಿತಿ. ಆರವತ್ತೈದು ವರ್ಷಗಳ ಹಿಂದೆ ವಿದ್ಯುತ್ತಿಗಾಗಿ ನೆಲೆ ಕಳೆದುಕೊಂಡ ಶರಾವತಿ ಮಕ್ಕಳ ಕಥೆಯಿಂದ ಈಗೀಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಭೂಮಿ ಕಳೆದುಕೊಂಡ ಎಲ್ಲರ ಗೋಳು, ಪಡಿಪಾಟಲು ಕೂಡ ಇದೇ. ಕಾವೇರಿ, ಕಬಿನಿ, ಶರಾವತಿ, ವಾರಾಹಿ, ಕಾಳಿ, ಸೀಬರ್ಡ್, ಕೈಗಾ, ಆಲಮಟ್ಟಿ, ಭದ್ರಾ ಯೋಜನೆಗಳಿಂದ ಸಂತ್ರಸ್ತರಾದ ಎಲ್ಲರೂ ಈ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ, ಅಧಿಕಾರಶಾಹಿಯ ಕೆಂಪುಪಟ್ಟಿಯ ಉರುಳಿಗೆ ಸಿಲುಕಿದ್ದಾರೆ. ಅತ್ತ ಸಾಯದ, ಇತ್ತ ಬದುಕಲಾಗದ ಈ ಎಲ್ಲರನ್ನು ಸರ್ಕಾರಿ ಸಂತ್ರಸ್ತರನ್ನಾಗಿಸಿರುವ ಪ್ರತಿ ಯೋಜನೆಗಳು, ಕಳೆದುಕೊಂಡ ಕುಟುಂಬಗಳ ಒಂದೊಂದೂ ಕ್ರೂರ, ನಿಸ್ಸಹಾಯಕ ಕಥೆಯನ್ನು ಬಿಚ್ಚಿಡುತ್ತವೆ.
ಸ್ವಾತಂತ್ರ್ಯಾನಂತರದ ಯಾವ ಯೋಜನೆಯೂ ಅಲ್ಲಿಯ ಮೂಲ ನಿವಾಸಿಗಳಿಗೆ ಸಂಪೂರ್ಣ ಪರಿಹಾರ, ಪುನರ್ವಸತಿಯನ್ನು ಸಂತೃಪ್ತಿದಾಯಕವಾಗಿ ನೀಡಿದೆ ಎನ್ನುವ ಒಂದೇ ಒಂದು ಉದಾಹರಣೆಯೂ ಇಲ್ಲ. ಶತಮಾನಗಳ ಹಿಂದಿನ ಭೂಸ್ವಾಧೀನ ಬ್ರಿಟಿಷ್ ಕಾಯ್ದೆ (೧೮೯೪), ಮೊದಲ ಬಾರಿಗೆ ತಿದ್ದುಪಡಿಯಾದದ್ದು ೬೦ ವರ್ಷಗಳ ನಂತರ! ಆ ನಂತರವೂ ಅದು ಸಂತ್ರಸ್ತರ ಪರವಾಗಿ ಇರಲಿಲ್ಲ. ಇನ್ನಷ್ಟು ಜನರನ್ನು ಒದ್ದಾಡುವಂತೆ ಮಾಡಿ ಸಂಕಷ್ಟಕ್ಕೇ ನೂಕಿತ್ತು ಇದು. ಕಾಯ್ದೆ ಎಂದೂ ಜನಪರವೂ ಆಗಲಿಲ್ಲ. ಜನರ ತ್ಯಾಗಕ್ಕೆ ಗೌರವವೂ ದೊರೆಯಲಿಲ್ಲ. ಪುನರ್ವಸತಿಗಳಂತೂ ಅಧ್ವಾನ, ಬ್ರಹ್ಮಾಂಡ ಭ್ರಷ್ಟಾಚಾರದ ಸ್ವರೂಪ ಪಡೆದು ಜನರನ್ನು ಬೆಂದು ಹೋಗುವಂತೆ ಮಾಡಿದವು. ಸರ್ಕಾರಕ್ಕೋ ಮತ್ತು ಅಧಿಕಾರಿಗಳಿಗೋ ಪರಿಹಾರ ಕೊಡುವುದು ಎಂದರೆ ಪುಕ್ಕಟೆ ದಾನ ಎನ್ನುವ ಮನೋಭಾವ ಬಂದು ಬಿಟ್ಟಿತು.
೨೧ನೇ ಶತಮಾನದ ಆರಂಭದಲ್ಲಿ ಯಾವ ಯೋಜನೆಗೂ ತುಂಡು ಭೂಮಿ ನೀಡಲು ಒಪ್ಪದ ಪರಿಸ್ಥಿತಿ ನಿರ್ಮಾಣವಾದಾಗ ಸರ್ಕಾರ ಭೂ ಸ್ವಾಧೀನ ಮತ್ತು ಪರಿಹಾರ-ಪುನರ್ವಸತಿ ಕಾಯ್ದೆಯನ್ನು ೨೦೧೩ರಲ್ಲಿ ತರಬೇಕಾಯಿತು. ಜನ ಒಪ್ಪಿಗೆ ಇಲ್ಲದೇ ಭೂ ಸ್ವಾಧೀನ ಇಲ್ಲ ಎನ್ನುವ ಷರತ್ತಂತೂ ಬಂತು. ಪುನರ್ವಸತಿ ಮತ್ತು ಉದ್ಯೋಗ ಖಾತ್ರಿ ಪ್ರತಿ ಯೋಜನೆಯಲ್ಲೂ ಕಡ್ಡಾಯಗೊಳಿಸಲಾಯಿತು. ಆದರೇನು? ಕಚೇರಿಯಿಂದ ಕಚೇರಿಗೆ ಅಲೆದಾಟ ತಪ್ಪಲಿಲ್ಲ. ಅಸ್ಸಾಂ ಗಡಿಯಿಂದ ಕನ್ಯಾಕುಮಾರಿಯವರೆಗೂ ಈ ಭೂ ಸ್ವಾಧೀನ ಮತ್ತು ಸಂತ್ರಸ್ತರ ಗೋಳು ಒಂದೇ ಬಗೆಯದ್ದು. ದೇಶದಲ್ಲಿ ರೈತರಿಂದ ಸಂಭವಿಸಿದ ಬಹುತೇಕ ಪ್ರತಿಭಟನೆಗಳು, ಹೋರಾಟಗಳು ಈ ಭೂ ಸ್ವಾಧೀನ ಮತ್ತು ಸಂತ್ರಸ್ತರ ಬದುಕಿಗೆ ಸಂಬಂಧಿಸಿದ್ದೇ ಆಗಿವೆ. ಸಣ್ಣ ಜಾಗದಿಂದ ಕೈಗಾರಿಕಾ ಭೂಮಿಗೆ ಸ್ವಾಧೀನ ಮಾಡಿಕೊಳ್ಳುವ ಕಾರಿಡಾರ್‌ವರೆಗೂ, ಈಗಿನ ವಸತಿ ಸಂಕೀರ್ಣಕ್ಕಾಗಿ ಭೂ ಸ್ವಾಧೀನದವರೆಗೂ ಇದೇ ಗೋಳು.
ಅತಿ ಕೆಟ್ಟ ಕಹಿ ಅನುಭವದ ವಾಸ್ತವಗಳು ಜನರನ್ನು ಕಾಡಿವೆ. ಹಿಡಕಲ್ ಆಣೆಕಟ್ಟೆಯ ಸಂತ್ರಸ್ತರು ಈಗ ಕಚೇರಿಗೆ ನುಗ್ಗಿದ್ದಾರೆ. ಶರಾವತಿ ಆಣೆಕಟ್ಟಿನಿಂದ ಸಂತ್ರಸ್ತರಾದ ಜನ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಡಿ ಎಂದು ಈಗಲೂ, (೬೦-೭೦ ವರ್ಷಗಳಿಂದ) ಕೋರುತ್ತಲೇ ಇದ್ದಾರೆ. ಆಲಮಟ್ಟಿ ಜಲಾಶಯದಿಂದ ಸಂತ್ರಸ್ತರಾದ ಸಹಸ್ರಾರು ಕುಟುಂಬಗಳು ಬಿಡಿಗಾಸು ಪರಿಹಾರ, ಪುನರ್ವಸತಿ ದೊರೆಯದೇ ಬೀದಿಯಂಚಿನ ನಿರಾಶ್ರಿತರ ತಾಣದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹತ್ತಾರು ಸರ್ಕಾರಗಳು, ಜನಪ್ರತಿನಿಧಿಗಳು ಬಣ್ಣದ ಮಾತುಗಳಿಂದ ಆಸೆ ತೋರಿಸಿದ್ದಾರೆ. ಆದರೆ ಇವರ ಬದುಕಿನಲ್ಲಿ ಬೆಳಕು ಕಂಡಿಲ್ಲ.
೨೦೧೩ರ ರಾಷ್ಟೀಯ ಭೂ ಸ್ವಾಧೀನ ಮತ್ತು ಸಂತ್ರಸ್ತರ ಪರಿಹಾರ ಕಾಯ್ದೆ, ಮತ್ತು ಆ ನಂತರ ೨೦೧೬ರಲ್ಲಿ ಬಂದ ತಿದ್ದುಪಡಿ, ಹಿಂದಿನ ಯೋಜನೆಗಳ ಮತ್ತು ಈಗಿನ ಪರಿಹಾರಗಳ ತಾರತಮ್ಯಗಳನ್ನು ದೇಶಾದ್ಯಂತ ಹೆಚ್ಚಿಸಿವೆ. ನ್ಯಾಯಾಲಯಗಳೋ ಸಾವಿರಾರು ಪ್ರಕರಣಗಳಿಗೆ ಪರಿಹಾರವನ್ನು ಘೋಷಿಸಿ ಇತ್ಯರ್ಥ ಪಡಿಸಿದರೆ ಸರ್ಕಾರ, ಯೋಜನಾ ಪ್ರಾಧಿಕಾರಗಳು ದುಡ್ಡೇ ಇಲ್ಲದೇ ಕೈ ಮೇಲೆತ್ತಿವೆ. ಹಾಗಾಗಿಯೇ ಸರ್ಕಾರಿ ಕಚೇರಿಗಳ ಕುರ್ಚಿ- ಟೇಬಲ್ ಜಪ್ತಿ ಪ್ರಕರಣಗಳೇ ವರದಿಯಾಗುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸಂತ್ರಸ್ತೆಯೊಬ್ಬಳು ತನ್ನ ಕೇವಲ ಸಾವಿರ ಸೆಂಟ್ ಜಾಗದ ಪರಿಹಾರಕ್ಕಾಗಿ ೨೩ ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದಾಡಿ ಕಳೆದ ೩ ತಿಂಗಳ ಹಿಂದೆ ಪರಿಹಾರ ಘೋಷಣೆಯಾಯಿತು. ದುರಂತ ಎಂದರೆ ಜಮೀನು ಸ್ವಾಧೀನ ಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಇಲಾಖೆ ಬಳಿ ಪರಿಹಾರ ವಿತರಣೆಗೆ ಹಣ ಇಲ್ಲ!
ಕೊಂಕಣ ರೈಲ್ವೆ ಯೋಜನೆ ಅನುಷ್ಠಾನಗೊಳಿಸುವಾಗ ಕೇಂದ್ರ ಸಂಪುಟದಲ್ಲಿದ್ದ ಮಧು ದಂಡವತೆ, ಆಗಿನ ರೈಲ್ವೆ ಮಂತ್ರಿ ಜಾರ್ಜ್ ಫರ್ನಾಂಡೀಸ್ ಮತ್ತು ಅಂದಿನ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಪ್ರಥಮ ಬಾರಿಗೆ ಪರಸ್ಪರ ಒಪ್ಪಂದ-ಒಡಂಬಡಿಕೆ-ಪರಿಹಾರ ನೀತಿ ತಂದರು. ಬಹುಶಃ ನ್ಯಾಯಾಲಯದಲ್ಲಿ ಒಂದೂ ಮೊಕದ್ದಮೆ ದಾಖಲಿಸದ, ಜನರೇ ತಮ್ಮ ಭೂಮಿ ಬಿಟ್ಟುಕೊಟ್ಟ ಮೊದಲ ಯೋಜನೆ ಅದಾಗಿತ್ತು. ಸಂತ್ರಸ್ತರಿಗೆ ಉದ್ಯೋಗ ಕೊಡಲಿಲ್ಲ. ರೈಲು ಹಳಿ ನಿರ್ಮಾಣದಿಂದ ಮಳೆಗಾಲದಲ್ಲಿ ಭೂಮಿ ಮುಳುಗಿದೆ ಅದಕ್ಕೂ ಪರಿಹಾರ ಕೊಡಿ ಎಂಬಿತ್ಯಾದಿ ಪ್ರಕರಣಗಳು ನಂತರ ನ್ಯಾಯಾಲಯದ ಕಟ್ಟೆ ಏರಿದರೂ ಭೂ ಸ್ವಾಧೀನದ ಪ್ರಕರಣಗಳು ಇರಲಿಲ್ಲ. ೨೦೧೩ಕ್ಕೆ ಕೇಂದ್ರ ಸರ್ಕಾರ ಭೂಸ್ವಾಧೀನ ಕಾಯ್ದೆ ರಚಿಸಲು ಇದು ಮಾದರಿಯೂ ಆಯಿತು.
ಇಂತಹ ದೊಡ್ಡ ದೇಶದಲ್ಲಿ ಭೂ ಸ್ವಾಧೀನ ಸಂತ್ರಸ್ತರ ಪುನರ್ವಸತಿಗಾಗಿ ಪ್ರತ್ಯೇಕ ಸಚಿವಾಲಯವೂ ಇಲ್ಲ. ರಾಜ್ಯಗಳಲ್ಲಿ ನಿರ್ದೇಶನಾಲಯಗಳೂ ಇಲ್ಲ. ಇದನ್ನು ರೂಪಿಸಿ ಎಂದು ಬಹುತೇಕ ಯೋಜಕರು ಸಲಹೆ ನೀಡಿದರೂ ಉಹುಂ, ಒಪ್ಪುತ್ತಿಲ್ಲ. ಕಾರಣ ಭೂ ಸ್ವಾಧೀನ ಮತ್ತು ಪರಿಹಾರ ಯಾವ ಯಾವ ಇಲಾಖೆಗೆ ಸಂಬಂಧಿಸಿದ್ದೋ ಆ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಪುಢಾರಿಗಳಿಗೆ ಇದೊಂದು ಪುಷ್ಕಳ ಆದಾಯದ ದಂಧೆಯಾಗಿದೆ, ಹಾಗಾಗಿ!!
ಸೀಬರ್ಡ್ ನೌಕಾನೆಲೆಗೆ ಶಂಕುಸ್ಥಾಪನೆ ವೇಳೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸಂತ್ರಸ್ತರ ಕಣ್ಣಲ್ಲಿ ಒಂದಿನಿತೂ ನೀರು ಹರಿಯದಂತೆ ಪುನರ್ವಸತಿ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಸೀಬರ್ಡ್ ಭೂ ಸ್ವಾಧೀನಕ್ಕಾಗಿ ಆಲಮಟ್ಟಿಯಲ್ಲಿ ತುಂಬ ಒಳ್ಳೆಯ ಹೆಸರು ಮಾಡಿದ್ದ ಅಧಿಕಾರಿ ಎಸ್.ಎಂ.ಜಾಮದಾರ್ ನಿಯುಕ್ತಿಗೊಂಡಾಗ ತುಂಬ ನಿರೀಕ್ಷೆಗಳಿದ್ದವು. ಆಲಮಟ್ಟಿಯಂತೆಯೇ ಕಾರವಾರದಲ್ಲೂ ಅವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂ ಸ್ವಾಧೀನ ಮಾಡಿಸಿಕೊಟ್ಟರು. ಎರಡೂ ಕಡೆ ಆಕರ್ಷಕ ಪರಿಹಾರದ ಪ್ಯಾಕೇಜ್‌ಗಳನ್ನು ಘೋಷಿಸಿದ್ದರು ಈ ಅಧಿಕಾರಿ. ಆದರೆ ಇವರು ವರ್ಗವಾದ ನಂತರ, ಈ ಎರಡೂ ಕಡೆಗಳಲ್ಲಿ ಪುನರ್ವಸತಿ ಮತ್ತು ಪರಿಹಾರ(ಆರ್ ಆ್ಯಂಡ್ ಆರ್) ಮತ್ತೆ ಕಗ್ಗಂಟಾಗಿಯೇ ಮುಂದುವರಿಯಿತು.
ದುರಂತ ಎಂದರೆ ಅಂದಿನಿಂದ ಇಂದಿನವರೆಗೂ ಸೀಬರ್ಡ್ ಸಂತ್ರಸ್ತರು ಹಾಕಿದ ಕಣ್ಣೀರ ಪ್ರಮಾಣ ಲೆಕ್ಕಕ್ಕೆ ಸಿಗದು. ರಾಷ್ಟ್ರಕಾಗಿ ತ್ಯಾಗ ಮಾಡಿದ ಜನ ಪರಿಹಾರ-ಪುನರ್ವಸತಿಗಾಗಿ ಕಚೇರಿಯಿಂದ ಕಚೇರಿಗೆ, ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಸಾವಿರಾರು ಪ್ರಕರಣಗಳಲ್ಲಿ ಪರಿಹಾರ ಘೋಣೆಯಾದರೂ ರಕ್ಷಣಾ ಇಲಾಖೆಯಿಂದ ಪರಿಹಾರದ ಹಣ ಬಿಡುಗಡೆಯಾಗುತ್ತಿಲ್ಲ.
ಕಾರಂಜಾ ಯೋಜನೆ ಸಂತ್ರಸ್ತರು ಪರಿಹಾರಕ್ಕಾಗಿ ನಡೆಸಿದ ಪ್ರತಿಭಟನೆ ರಾಷ್ಟ್ರ ಮಟ್ಟದ ಗಮನವನ್ನೇ ಸೆಳೆದಿತ್ತು. ಹಾಗಂತ ಇಂದಿಗೂ ಆ ಮಂದಿಗೆ ಪರಿಹಾರ- ಪುನರ್ವಸತಿ ಸಿಕ್ಕಿಲ್ಲ.
ದುರಂತ ಎಂದರೆ, ಸಂತ್ರಸ್ತರಾದವರು ಜನ, ಭೂಮಿ ಕಳೆದುಕೊಂಡು ಬದುಕು ಅತಂತ್ರವಾಗಿರುವುದು ಅವರದ್ದು. ಪರಿಹಾರ ನೀಡಬೇಕಾದದ್ದು ಸರ್ಕಾರ, ಯೋಜಕರು. ಆದರೆ ಸತಾಯಿಸುವುದು ಅಧಿಕಾರಶಾಹಿ. ಕರ್ನಾಟಕದ್ದೇ ತೆಗೆದುಕೊಂಡರೆ ಕಳೆದ ಮೂವತ್ತು ವರ್ಷಗಳಲ್ಲಿ, ಸಂತ್ರಸ್ತರನ್ನು ಸತಾಯಿಸಿದ ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ಭೂ ಸ್ವಾಧೀನ ವಿಭಾಗದ ಅತೀ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ, ಲೋಕಾಯುಕ್ತ, ಸಿಸಿಬಿ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಲುಕಿದ್ದಾರೆ. ಹಾಗೆಯೇ ಲಕ್ಷಾಂತರ ತೆತ್ತಾದರೂ ಸರಿ ಭೂ ಸ್ವಾಧೀನ ಇಲಾಖೆಗೆ ವರ್ಗಾಯಿಸಿಕೊಂಡು ಸಿಬ್ಬಂದಿ ಬರುತ್ತಾರೆ. ಸಂತ್ರಸ್ತರ ಬದುಕಿನ ಮೇಲೆ ಇಲ್ಲಿ ಅಧಿಕಾರಿಗಳ ಜೂಜಾಟ ನಡೆಯುತ್ತದೆ.
ಹತ್ತು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಇಂತಹ ಭೂ ಸ್ವಾಧೀನ ಪ್ರಕರಣದಲ್ಲಿ ಸಂತ್ರಸ್ತರ ಗೋಳು ಆಲಿಸಿ ಪರಿಹಾರ ನೀಡುವುದು ಸರ್ಕಾರ ಮಾಡುವ ದಾನವಲ್ಲ; ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ದಯಾಪರತೆಯಿಂದ ಭೂ ಮಾಲೀಕರಿಗೆ ಪರಿಹಾರ ನೀಡಿದ್ದೇವೆಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ಕಟುವಾಗಿ ಕಿವಿ ತಿರುಚಿದ್ದರು. ಇಪ್ಪತ್ತು ವರ್ಷಗಳ ಕಾಲ ಜಮೀನು ಕಸಿದುಕೊಂಡು ಪರಿಹಾರ ನೀಡದೇ ಅಥವಾ ಅಲ್ಪ ಪರಿಹಾರ ನೀಡಿ ದಯೆ ತೋರಿದ ರೀತಿ ಸರ್ಕಾರ, ಅಧಿಕಾರಿಗಳು ಮಾಡುವ ವರ್ತನೆ ಸಂವಿಧಾನ ಬಾಹಿರ. ಇದು ಆ ಜನರ ಸಾಂವಿಧಾನಿಕ ಆಸ್ತಿ ಹಕ್ಕನ್ನು ಕಸಿದುಕೊಳ್ಳುತ್ತದೆ. ತಾವು ನೀಡಿರುವ ಪರಿಹಾರವನ್ನು ದಾನ ದತ್ತಿ ಎಂದು ಬಿಂಬಿಸಿಕೊಳ್ಳುವ ಕೆಟ್ಟ ಮನೋಸ್ಥಿತಿ. ಇದನ್ನು ಸಹಿಸಲು ಅಸಾಧ್ಯ ಎಂದು ನ್ಯಾಯಮೂರ್ತಿಗಳು ಚಾಟಿ ಬೀಸಿದ್ದರು.
ಬಹುಶಃ ಸರ್ಕಾರ ಮುಕ್ತ ಮನಸ್ಸು ಹೊಂದಿದ್ದರೆ ದೇಶದಲ್ಲಿರುವ ಲಕ್ಷಾಂತರ ಸಂತ್ರಸ್ತ ಕುಟುಂಬಗಳ ಸಂಕಷ್ಟ ಪರಿಹರಿಸುವ ಕಾರ್ಯವನ್ನು ಪ್ರಥಮ ಆದ್ಯತೆಯಿಂದ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದೆ ಯಾವ ಯೋಜನೆಗಳಿಗೂ ಜನ ಮುಕ್ತವಾಗಿ ಭೂಮಿ ನೀಡಲಾರರು. ಭೂ ಸ್ವಾಧೀನ ಎಂದರೆ ಭಯ ಪಡುವ ವಾತಾವರಣದಿಂದ ಹೊರಬರಲಾರರು. ರಾಷ್ಟ್ರೀಯ ಯೋಜನೆಗಳನ್ನು ಮಾಡುವಾಗ, ದೇಶಕ್ಕಾಗಿ ತ್ಯಾಗದ ಮಾತುಗಳು ಹೇರಳವಾಗಿ ಪ್ರಯೋಗವಾಗಿ, ಭಾವನಾತ್ಮಕ ಅಂಶವನ್ನು ಪ್ರಧಾನವಾಗಿಸಲಾಗುತ್ತದೆ. ದೇಶದ ಕಾರಣಕ್ಕಾಗಿ ಜನ ಸ್ಪಂದಿಸುತ್ತಾರೆ. ಭೂಮಿ ಪಡೆದುಕೊಂಡು ಯೋಜನೆಗಳನ್ನು ಮುಗಿಸಿದ ನಂತರ ವ್ಯವಸ್ಥೆ ಇದೇ ಜನರನ್ನು ಮರೆತು ಭಂಡತನ ಮೆರೆಯುತ್ತದೆ… ಇದು ದುರಂತಕ್ಕಿಂತ ಮಿಗಿಲಾದ ನೋವು….!!