ಸಂತ್ರಸ್ತರ ರಕ್ಷಣೆ-ಭಾರತಕ್ಕೆ ರಾಜತಾಂತ್ರಿಕ ಗೆಲುವು

Advertisement

ಸುಡಾನ್ ಅಂತಃಕಲಹದ ಮಧ್ಯೆ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ತರುವ `ಆಪರೇಷನ್ ಕಾವೇರಿ’ ಯಶ ಕಂಡಿದೆ. ೩ ಸಾವಿರ ಭಾರತೀಯರಲ್ಲಿ ಒಂದು ತಂಡವನ್ನು ಸುಡಾನ್‌ನಿಂದ ಹೊರಗೆ ಕರೆತರುವುದರಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಸಫಲವಾಗಿದೆ. ಅಲ್ಲಿ ಸಿಲುಕಿರುವ ಭಾರತೀಯರಲ್ಲಿ ಕನ್ನಡಿಗರೂ ಸೇರಿದ್ದಾರೆ. ಸುಡಾನ್‌ನಲ್ಲಿ ಯುದ್ಧ ಮಾಡುತ್ತಿರುವ ಎರಡು ಬಣಗಳು ೭೨ ಗಂಟೆಗಳ ಕದನ ವಿರಾಮ ಘೋಷಿಸಿರುವುದು ಅನುಕೂಲವಾಗಿದೆ. ಬೇರೆ ದೇಶಗಳಲ್ಲಿ ಯುದ್ಧ ನಡೆದಾಗ ನಮ್ಮ ದೇಶದ ನಾಗರಿಕರು ಕಷ್ಟಕ್ಕೆ ಸಿಲಕುವುದು ಸಹಜ. ಅವರನ್ನು ಕಾಪಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ಬೇರೆ ದೇಶಗಳ ಸಹಕಾರ ಬೇಕೇ ಬೇಕು. ಕೆಲವು ಬಾರಿ ಅಮಾಯಕರು ಗುಂಡಿನ ದಾಳಿಗೆ ಬಲಿಯಾಗಬೇಕಾಗುತ್ತದೆ. ಈ ರೀತಿ ತುರ್ತು ಪರಿಸ್ಥಿತಿ ತಲೆದೋರಿದಾಗ ಯುದ್ಧದಲ್ಲಿ ನಿರತರಾದ ದೇಶದವರಿಗೆ ಮಿತ್ರರಾಗಿರುವ ದೇಶಗಳನ್ನು ಸಂಪರ್ಕಿಸಿ ಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ರಕ್ಷಿಸಬೇಕು. ಇದು ಸುಲಭದ ಕೆಲಸವಲ್ಲ. ಯಾವಾಗ ಮದ್ದು ಗುಂಡುಗಳು ಸಿಡಿಯುತ್ತದೊ ತಿಳಿಯುವುದಿಲ್ಲ. ಅಪಾಯ ಕಟ್ಟಿಟ್ಟ ಬುತ್ತಿ. ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡುವುದು ಮುಖ್ಯ. ಅದರಲ್ಲೂ ಭೌಗೋಳಿಕ ಪರಿಚಯ ಇರುವವರು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದು. ಇಲ್ಲದಿದ್ದಲ್ಲಿ ರಕ್ಷಿಸಲು ಹೋದವರೇ ಬಲಿಯಾಗುವ ಅಪಾಯವಿದೆ. ಮನೆಯಲ್ಲೇ ಇದ್ದ ಒಬ್ಬ ಭಾರತೀಯ ಗುಂಡೇಟಿಗೆ ಬಲಿಯಾಗಿರುವುದು ಆತಂಕ ಮೂಡಿಸಿದೆ. ಕರ್ನಾಟಕದಿಂದ ಹಕ್ಕಿಪಿಕ್ಕಿ ಜನಾಂಗದವರು ನಾಟಿ ಔಷಧ ಮಾರಾಟ ಪ್ರತಿ ವರ್ಷ ಹೋಗುವಂತೆ ಈ ವರ್ಷವೂ ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕೆಲಸ ಈಗ ನಡೆಯುತ್ತಿದೆ.
ಹಿಂದೆ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಕೈಗೊಂಡಿತು. ಆಗ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ಸಹಕಾರ ಪಡೆಯಲಾಯಿತು. ಈಗಲೂ ಫ್ರಾನ್ಸ್, ಯುಎಇ ನೆರವು ನೀಡಿದೆ. ಇದು ನಮ್ಮ ದೇಶದ ಪ್ರಗತಿಗಾಮಿ ಧೋರಣೆಗೆ ಸಂದ ಜಯ ಎಂದು ಹೇಳಬಹುದು. ನಮ್ಮ ವಿದೇಶಾಂಗ ನೀತಿ ಸ್ಪಷ್ಟವಾಗಿದೆ. ನಾವು ಮೊದಲಿನಿಂದಲೂ ಯಾವುದೇ ಯುದ್ಧಕ್ಕೆ ಬೆಂಬಲ ನೀಡುತ್ತಿಲ್ಲ. ರಷ್ಯಾ-ಉಕ್ರೇನ್ ಯುದ್ಧ ನಡೆದಾಗಲೂ ಭಾರತ ತನ್ನ ನಿಲುವನ್ನು ಎರಡೂ ದೇಶಗಳಿಗೆ ತಿಳಿಸಿತು. ಇದರಿಂದ ಯಾರಿಗೂ ಭಾರತದ ವೈಷಮ್ಯ ಮೂಡಲಿಲ್ಲ. ಅಲ್ಲದೆ ಆಹಾರ ಧಾನ್ಯ ಮತ್ತು ಕಚ್ಚಾ ತೈಲವನ್ನು ರಷ್ಯಾದಿಂದ ಪಡೆಯುವುದಕ್ಕೆ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಮೊದಲು ವಿರೋಧಿಸಿದ್ದವು. ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಯುದ್ಧಕ್ಕೆ ಮಾಡಿಕೊಂಡ ಒಪ್ಪಂದಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬುದನ್ನು ಭಾರತ ಮನವರಿಕೆ ಮಾಡಿಕೊಟ್ಟ ಮೇಲೆ ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲೇ ಯುದ್ಧ ನಡೆಯಲಿ ಅಲ್ಲಿಯ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಅಚ್ಚುಕಟ್ಟಾಗಿ ಕೈಗೊಳ್ಳುತ್ತ ಬಂದಿದೆ. ಈ ವಿಷಯದಲ್ಲಿ ದೇಶದೊಳಗೆ ರಾಜಕೀಯ ಚರ್ಚೆ ಸರಿಯಲ್ಲ ಎಂಬುದು ಕೇಂದ್ರ ನಿಲುವು. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಳ್ಳುವುದು ಒಳಿತು. ವಿದೇಶಗಳಲ್ಲಿ ಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ಕಾಪಾಡುವಾಗ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವು ಪಡೆಯುವುದು ಅನಿವಾರ್ಯ. ಕೆಲವು ವಿಷಯಗಳನ್ನು ಬಹಿರಂಗಪಡಿಸಲು ಬರುವುದಿಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಿ ದೇಶ ಎಂಬುದು ಇರುವುದಿಲ್ಲ. ಕೆಲವು ವಿಷಯಗಳಲ್ಲಿ ಭಾರತ- ಚೀನಾ- ಪಾಕ್ ಒಟ್ಟಿಗೆ ಕೆಲಸ ಮಾಡಿರಬಹುದು. ಅದು ಆ ಕೆಲಸಕ್ಕೆ ಮಾತ್ರ ಸೀಮಿತಗೊಂಡಿರುತ್ತದೆ. ಹೀಗಾಗಿ ಕೆಲವು ವಿಷಯಗಳು ಬೇರೆ ದೇಶಗಳ ಮೂಲಕ ರವಾನೆಯಾಗುತ್ತವೆ. ಯುದ್ಧ ಭೂಮಿಯಲ್ಲಿ ಏನು ಬೇಕಾದರೂ ನಡೆಯಬಹುದು. ಯಾರೂ ಯಾರಿಗೆ ಹೊಣೆಗಾರರಲ್ಲ. ಯುದ್ಧ ವಿರಾಮ ಘೋಷಿಸಿದ್ದರೂ ಕೆಲವು ಕಡೆ ಗುಂಡಿನ ಚಕಮಕಿ ನಡೆಯಬಹುದು. ಅದರಿಂದ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನಿಡುವುದು ಅಗತ್ಯ. ಭಾರತ ಈ ವಿಷಯದಲ್ಲಿ ಅತ್ಯಂತ ಜಾಣಕ್ಷ ಹೆಜ್ಜೆಗಳನ್ನಿಡುತ್ತ ಬಂದಿದ್ದು ಅಂತಾರಾಷ್ಟೀಯ ಮಟ್ಟದಲ್ಲಿ ಗೌರವ ಸಂಪಾದಿಸಿರುವುದು ಸಂತಸದ ಸಂಗತಿ. ಇದಕ್ಕೂ ದೇಶದೊಳಗಿನ ರಾಜಕೀಯ ಸನ್ನಿವೇಶಗಳಿಗೂ ಸಂಬಂಧ ಇರುವುದಿಲ್ಲ. ಇದೇರೀತಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಭಾರತ ತನ್ನ ನೆರವಿನ ಹಸ್ತವನ್ನು ಮೊದಲು ಚಾಚಿ ಜನರ ಮನ್ನಣೆಗಳಿಸಿದೆ. ಆಫ್ಘಾನಿಸ್ತಾನದಲ್ಲಿ ಆಹಾರದ ಕೊರತೆ ತಲೆದೋರಿದಾಗ ಭಾರತ ಗೋಧಿ ಕಳುಹಿಸಿಕೊಟ್ಟಿತು. ಈಗ ಶ್ರೀಲಂಕಾ ದೇಶ ತನ್ನ ನಿವಾಸಿಗಳನ್ನು ಸುಡಾನ್‌ನಿಂದ ರಕ್ಷಿಸುವಂತೆ ಕೋರಿದೆ. ಹಿಂದೆ ಪಾಕ್ ನಿವಾಸಿಗಳು ಕೂಡ ಇದೇರೀತಿ ಉಕ್ರೇನ್ ನಿಂದ ನಮ್ಮ ಸಂಜಾತರೊಂದಿಗೆ ಬಂದಿದ್ದರು. ಇವೆಲ್ಲ ಮಾನವೀಯತೆ ದ್ಯೋತಕ ಕೆಲಸವಾಗಿರುವುದರಿಂದ ಇದರಲ್ಲಿ ದೋಷ ಹುಡುಕುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ.

ಸುಡಾನ್‌ನಿಂದ ಭಾರತೀಯರು ಸುರಕ್ಷಿತವಾಗಿ ತಾಯಿನಾಡಿಗೆ ಹಿಂತಿರುಗುತ್ತಿರುವುದು ಸಂತಸದ ಸಂಗತಿ. ಇದರಲ್ಲಿ ಕನ್ನಡಿಗರೂ ಸೇರಿದ್ದಾರೆ. ಸುಡಾನ್ ಈಗ ಅಂತಃ ಕಲಹದಲ್ಲಿ ನೊಂದು ಬೆಂದಿದೆ. ೭೨ ಗಂಟೆಗಳ ಕದನವಿರಾಮ ಘೋಷ ಣೆಯಾಗಿರುವುದರಿಂದ ಎಲ್ಲ ದೇಶಗಳು ತಮ್ಮ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆಸಿಕೊಳ್ಳುವುದರಲ್ಲಿ ನಿರತವಾಗಿವೆ.