ಸಂವಿಧಾನ ರಕ್ಷಣೆಯೇ ಗುರಿ

Advertisement

ಚುನಾವಣೆ ಬಂತು ಎಂದರೆ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತವೆ. ಅದರಲ್ಲಿ ನೂರಾರು ಕಾರ್ಯಕ್ರಮಗಳು, ಗ್ಯಾರಂಟಿಗಳು ಇರುತ್ತವೆ. ಮುಖ್ಯವಾಗಿ ಆಗಬೇಕಿರುವುದು ಸಂವಿಧಾನ ರಕ್ಷಿಸುವ ಭರವಸೆ. ಸ್ವಾತಂತ್ರೋತ್ಸವದ ದಿನ ಜವಾಹರಲಾಲ್ ನೆಹರು ಮಾಡಿದ ಭಾಷಣ, ಮನಮೋಹನ್ ಸಿಂಗ್ ಹೊಸ ಆರ್ಥಿಕ ನೀತಿ ಕುರಿತು ಹೇಳಿದ ಮಾತು ಇಂದಿಗೂ ನಮ್ಮ ಕಿವಿಯಲ್ಲಿ ರಿಂಗಣಗೊಳ್ಳುತ್ತಿದೆ. ಈ ರೀತಿ ಪ್ರಧಾನಿ ಮೋದಿಯವರ ಮಾತುಗಳು ಜನಮಾನಸದ ಸ್ಮೃತಿ ಪಟಲದಲ್ಲಿ ಉಳಿಯುತ್ತಿಲ್ಲ. ಅವರು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಪ್ರತಿ ವರ್ಷ ೨ ಕೋಟಿ ಉದ್ಯೋಗ ಸೃಷ್ಟಿ ಮತ್ತು ರೈತರ ಅದಾಯ ದುಪ್ಪಟ್ಟುಗೊಳಿಸುವುದಾಗಿ ಹೇಳಿದ್ದರು. ಇದೆಲ್ಲವೂ ಚುನಾವಣೆ ಕಾಲದಪೊಳ್ಳು ಭರವಸೆಗಳು ಎಂದು ಜನ ಹಾಸ್ಯ ಮಾಡುವಂತಾಯಿತು.
ರಾಷ್ಟ್ರೀಯ ಪಕ್ಷಗಳಲ್ಲಿ ಕಾಂಗ್ರೆಸ್-ಬಿಜೆಪಿ ಪ್ರಮುಖ. ಕಾಂಗ್ರೆಸ್ ಪ್ರಣಾಳಿಕೆ ಜನರ ಮುಂದಿದೆ. ಬಿಜೆಪಿ ಇನ್ನೂ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿಲ್ಲ. ಅದರಿಂದ ಎರಡೂ ಪಕ್ಷಗಳ ನೀತಿ-ಧೋರಣೆಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸಂವಿಧಾನ ರಕ್ಷಣೆಯ ವಿಷಯವನ್ನು ಸ್ಪಷ್ಟವಾಗಿ ತಿಳಿಸಿದೆ. ಬಿಜೆಪಿ ಇದನ್ನು ಸ್ಪಷ್ಟವಾಗಿ ಹೇಳಿಲ್ಲ. ಒಂದು ದೇಶ-ಒಂದೇ ಚುನಾವಣೆ, ಏಕರೂಪ ನಾಗರಿಕ ಸಂಹಿತೆ, ಪೌರತ್ವ ತಿದ್ದುಪಡಿ ಕಾಯ್ದೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಪೌರತ್ವ ಕಾಯ್ದೆ ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ಬಿಜೆಪಿ ಚುನಾವಣೆ ನಂತರ ಸಂಸದೀಯ ವ್ಯವಸ್ಥೆಗೆ ಬದ್ಧವಾಗಿರುತ್ತದೆಯೇ ಇಲ್ಲವೆ ಎಂಬುದು ಸ್ಪಷ್ಟವಾಗಿಲ್ಲ. ಕಾಂಗ್ರೆಸ್ ತನ್ನ ನೀತಿಯನ್ನು ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಆರ್ಥಿಕ-ಸಾಮಾಜಿಕ-ಜಾತಿ ಸಮೀಕ್ಷೆ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಮೀಸಲಾತಿಗೆ ಇರುವ ಶೇ. ೫೦ರ ಲಕ್ಷ್ಮಣರೇಖೆಯನ್ನು ತೆಗೆಯಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಇರುವ ಶೇ.೧೦ ಮೀಸಲಾತಿಯನ್ನು ಎಲ್ಲರಿಗೂ ಮುಕ್ತಗೊಳಿಸಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ವಿವಿಧತೆಯನ್ನು ಕಾಪಾಡುವ ಆಯೋಗ ರಚಿಸಲಾಗುವುದು. ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿವಿಧತೆಯನ್ನು ಕಾಯ್ದುಕೊಂಡು ಹೋಗಲಾಗುವುದು. ಬಿಜೆಪಿ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದರೆ ಜನ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿದೆ.
ಮತೀಯ ಮತ್ತು ಭಾಷಾ ಅಲ್ಪಸಂಖ್ಯಾತರ ಪರಿಸ್ಥಿತಿ ಏನು ಎಂಬುದು ಸ್ಪಷ್ಟಗೊಳ್ಳಬೇಕು. ಕಾಂಗ್ರೆಸ್ ಈ ವಿಷಯದಲ್ಲಿ ಸ್ಪಷ್ಟ ನಿಲುವು ತಳೆದಿದೆ. ಎಲ್ಲರೂ ಅವರವರ ಧಾರ್ಮಿಕ ನಂಬಿಕೆಗಳನ್ನು ಮುಕ್ತವಾಗಿ ಪಾಲಿಸಬಹುದು. ಬಹುಸಂಖ್ಯಾತರ ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರಲು ಬರುವುದಿಲ್ಲ. ಭಾರತದ ವಿಶೇಷತೆ ಎಂದರೆ ವಿವಿಧತೆಯಲ್ಲಿ ಏಕತೆ. ಅದನ್ನು ಕಾಯ್ದುಕೊಂಡು ಹೋಗಲಾಗುವುದು. ಬಿಜೆಪಿ ಕಾಂಗ್ರೆಸ್ ಪಕ್ಷದ ಧೋರಣೆಯನ್ನು `ಓಲೈಕೆ ರಾಜಕಾರಣ’ ಎಂದು ದೂರುತ್ತಿದೆ. ಅಲ್ಪಸಂಖ್ಯಾತರ ವಿರುದ್ಧ ನಿಲುವಿಗೆ ಈ ಪದವನ್ನು ಬಳಸಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಏಕರೂಪ ನಾಗರಿಕಸಂಹಿತೆ ಜಾರಿಗೆ ತಂದೇ ತರುವುದಾಗಿ ಬಿಜೆಪಿ ಸಂಕಲ್ಪ ಮಾಡಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಸ್ಪಷ್ಟಪಡಿಸಬೇಕು.
ಭಾರತದಲ್ಲಿ ಈಗ ಭೌಗೋಳಿಕ ವಿಭಜನೆ ಮಾಯವಾಗುತ್ತಿದೆ. ಹಿಂದೆ ನಗರ-ಗ್ರಾಮೀಣ ಪ್ರದೇಶ ಎಂಬ ಅಂತರ ಇತ್ತು. ಈಗ ಇಲ್ಲ. ಸರಾಸರಿ ಬೆಳವಣಿಗೆ ಶೇ.೫.೯ ಇದೆ. ಉತ್ಪಾದನಾ ವಲಯದ ಬೆಳವಣಿಗೆ ಜಿಡಿಪಿಯಲ್ಲಿ ಶೇ.೧೪ಕ್ಕೆ ಸ್ಥಗಿತಗೊಂಡಿದೆ. ಕಾರ್ಮಿಕ ಬಲ ಮತ್ತು ಉದ್ಯೋಗ ಸೃಷ್ಟಿ ಎರಡೂ ಕುಸಿಯುತ್ತಿದೆ. ವಿದ್ಯಾವಂತರಲ್ಲಿ ಶೇ. ೪೨ ರಷ್ಟು ನಿರುದ್ಯೋಗವಿದೆ. ಕೇಂದ್ರ ಸರ್ಕಾರದಲ್ಲಿರುವ ೩೦ ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕಾಂಗ್ರೆಸ್ ಸಿದ್ಧವಿದೆ. ಅಪ್ರೆಂಟಿಸ್ ಕಾಯ್ದೆ, ಸಾರ್ಟ್ಅಪ್‌ಗಳಿಗೆ ಉತ್ತೇಜನಕ್ಕೆ ಪ್ರತ್ಯೇಕ ನಿಧಿ ನೀಡಲಿದೆ. ಬಿಜೆಪಿ- ಎನ್‌ಡಿಎ ಇದರ ಬಗ್ಗೆ ಚಕಾರ ಎತ್ತಿಲ್ಲ.
ಮಹಿಳೆಯರು ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಕಾಂಗ್ರೆಸ್ ಮಹಾಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಮಹಿಳೆಗೆ ಪ್ರತಿ ವರ್ಷ ೧ ಲಕ್ಷ ರೂ. ನೀಡಲಿದೆ. ನರೇಗಾ ಯೋಜನೆಯಲ್ಲಿ ೪೦೦ ರೂ. ದಿನಗೂಲಿ ಹೆಚ್ಚಿಸಲಾಗುವುದು. ಕೇಂದ್ರೀಯ ನೌಕರಿಯಲ್ಲಿ ಶೇ.೫೦ ಮಹಿಳೆಯರಿಗೆಮೀಸಲು. ಬಿಜೆಪಿ ಅಧಿಕಾರಶಾಹಿ ಧೋರಣೆ ಅನುಸರಿಸಿ ಒಕ್ಕೂಟವ್ಯವಸ್ಥೆಗೆ ದರಕ್ಕೆ ತರಲಿದೆ ಎಂಬ ಆರೋಪ ಕೇಳಿಬರುತ್ತಿದೆ. ಒಂದು ದೇಶ ಒಂದೇ ಚುನಾವಣೆ ಇದರ ಮೊದಲ ಹೆಜ್ಜೆ. ಇದು ಮುಂದಕ್ಕೆ ಒಂದು ಪಕ್ಷ ಒಂದೇ ನಾಯಕ ಎಂಬ ಪ್ರತಿಪಾದನೆಗೆ ದಾರಿ ಮಾಡಿಕೊಡಲಿದೆ. ಈಗ ಕೇಂದ್ರ ಮತ್ತು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿರುವ ಕೆಲವು ವಿಷಯಗಳ ಬಗ್ಗೆ ೧೨ ಅಂಶಗಳಿವೆ. ಇವುಗಳ ಬಗ್ಗೆ ಮುಕ್ತಚರ್ಚೆ ಅಗತ್ಯ. ಇವುಗಳ ಬಗ್ಗೆ ಬಿಜೆಪಿ ಅಗ್ನಿ ಪರೀಕ್ಷೆ ಎದುರಿಸಲು ಸಿದ್ಧವಿದೆಯೇ ಎಂಬುದು ಸ್ಪಷ್ಟಗೊಳ್ಳಬೇಕು. ನಮ್ಮೆಲ್ಲರ ಗುರಿ ಒಂದೇ ಸಂವಿಧಾನ ರಕ್ಷಣೆ.