ಸಂಸ್ಕಾರ ಮಾಡಿದ ಶವ ತೆಗೆದು ಸುಟ್ಟಿರುವುದಕ್ಕೆ ಖಂಡನೆ

Advertisement

ಕೊಪ್ಪಳ: ೬ ತಿಂಗಳ ಹಿಂದೆ ಸಂಸ್ಕಾರ ಮಾಡಿದ ಮುಸ್ಲಿಂ ಮಹಿಳೆಯ ಶವವನ್ನು ತೆಗೆದು ಸುಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಯುನಿಟಿಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನ ದನಕನದೊಡ್ಡಿ ಗ್ರಾಮದಲ್ಲಿ 6 ತಿಂಗಳ ಹಿಂದೆ ಮೃತಪಟ್ಟಿದ್ದ ಓರ್ವ ಮುಸ್ಲಿಂ ಮಹಿಳೆಯ ಶವವನ್ನು ಸಂಸ್ಕಾರ ಮಾಡಲಾಗಿತ್ತು. ಆದರೆ ಸೆ. ೧೨ರಂದು ಸಮಾಧಿಯಿಂದ ಹೊರತೆಗೆದು ಆ ಮಹಿಳೆಯ ಶವವನ್ನು ಸುಟ್ಟಿರುವ ಅಮಾನವೀಯ ಘಟನೆ ನಡೆದಿದೆ. ದೇಹದ ಮೇಲೆ ಬಿಳಿ ತೇಪೆ ಹೊಂದಿದ ಮುಸ್ಲಿಂ ಮಹಿಳೆಯ ಶವವನ್ನು ಸುಟ್ಟರೇ ಮಳೆ ಆಗುತ್ತದೆ ಎಂಬ ಮೂಢನಂಬಿಕೆಯಿಂದ ಕೃತ್ಯ ಎಸಗಿರುವುದು ಖಂಡನೀಯ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಮಹಿಳೆಯ ಶವವನ್ನು ಸಮಾಧಿ ಹೊಡೆದು, ಮಣ್ಣು ಬಗೆದು ಸುಟ್ಟಿರುವುದು ಆಶ್ಚರ್ಯಕರ ಘಟನೆಯಾಗಿದ್ದು, ಇಸ್ಲಾಂ ಧರ್ಮದ ಮಹಿಳೆಯ ಶವವನ್ನು ತೆಗೆದು ಸುಟ್ಟಿರುವುದು ಧರ್ಮ ಬಾಹಿರವಾಗಿದೆ. ಅಲ್ಲದೇ ಜನರಲ್ಲಿ ಭಯ ಭೀತರಾಗುವಂತಹ ಪಿತೂರಿ ಮಾಡುವ ಕಿಡಿಗೇಡಿಗಳು ಸಮಾಜದಲ್ಲಿದ್ದು, ಸಮಾಜದ ಶಾಂತಿ ಕದಡಲು ಮೂಢನಂಬಿಕೆಯ ವಿಷಬೀಜ ಬಿತ್ತುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಗ್ರಾಮದ ಜನರು ಹಾಗೂ ಕುಟುಂಬದವರು ದೂರು ನೀಡಲು ಹಿಂಜರಿಯುತ್ತಿದ್ದು, ಈ ಕೃತ್ತದ ಬಗ್ಗೆ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.