ಸಕಾಲಕ್ಕೆ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ ರೈಲ್ವೆ ಸಿಬ್ಬಂದಿ

Advertisement


ಹುಬ್ಬಳ್ಳಿ : ಪೆಟ್ರೋಲ್ ತುಂಬಿದ ವ್ಯಾಗನ್ ನ ಹಾರ್ಟ್ ಎಕ್ಸ್ ಲ್ ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ತಕ್ಷಣ ಯುದ್ದೋಪಾದಿಯಲ್ಲಿ ನಂದಿಸುವ ಮೂಲಕ ಸಂಶಿ ರೈಲ್ವೆ ನಿಲ್ದಾಣದ ಕೀ ಮ್ಯಾನ್, ಪಾಯಿಂಟ್ ಮ್ಯಾನ್ ಗಳು ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ರವಿವಾರ ಮಧ್ಯಾಹ್ನ ತಪ್ಪಿಸಿದ್ದಾರೆ.

ಸಂಶಿಯಿಂದ ಎರಡುವರೆ ಕಿ.ಮೀಯಷ್ಟು ದೂರ ಇರುವ ಕಡೆ ಪೆಟ್ರೋಲ್ ತುಂಬಿದ 54 ವ್ಯಾಗನ್ ( ಒಂದು ವ್ಯಾಗನ್ ನಲ್ಲಿ 73 ಸಾವಿರ ಲೀಟರ್ ಇರುತ್ತದೆ ) ಹೊಂದಿದ ರೈಲು ಸಾಗುತ್ತಿದ್ದ ವೇಳೆ ರೈಲಿನ ಗಾಲಿಯ ಹಾರ್ಟ್ ಎಕ್ಸೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದನ್ನು ಗಮನಿಸಿದ ಪಾಯಿಂಟ್ ಮನ್ ಗಳು ರೈಲಿನ ಲೊಕೊ ಪೈಲೆಟ್, ಸಂಶಿ ರೈಲ್ವೆ ನಿಲ್ದಾಣದ ಕೀ ಮ್ಯಾನ್, ಸಿಬ್ಬಂದಿ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಎಚ್ಚೆತ್ತ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಪಾಯಿಂಟ್ ಗಳಿಂದ ನಮಗೆ ಮಾಹಿತಿ ಬಂದಿತು. ತಕ್ಷಣ ಕಾರ್ಯಾಚರಣೆಗಿಳಿದೆವು. ಲೋಕೋ ಪೈಲೆಟ್ ಗಳು ತಕ್ಷಣ ರೈಲು ನಿಲುಗಡೆ ಮಾಡಿದ್ದರು. ಅಗ್ನಿ ನಿರೋಧಕ ( ಎಸ್ಡಿಂಗಿಶರ್) , ನೀರಿನಿಂದ ಬೆಂಕಿ ನಂದಿಸಲಾಯಿತು ಎಂದು ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಕೀ ಮ್ಯಾನ್ ಬಾಲಚಂದ್ರರೆಡ್ಡಿ ತಿಳಿಸಿದರು.

54 ವ್ಯಾಗನ್ ಪೆಟ್ರೋಲ್ ತುಂಬಿದ್ದವೇ ಇದ್ದು, ಬೆಂಕಿ ಹೊತ್ತಿಕೊಂಡಿದ್ದು ಗಮನಕ್ಕೆ ಬಾರದೇ ಇದ್ದಿದ್ದರೆ ದೊಡ್ಡ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಸಕಾಲಕ್ಕೆ ಕೈಗೊಂಡ ಕಾರ್ಯಾಚರಣೆಯಿಂದ ಅಪಾಯ ತಪ್ಪಿದೆ ಎಂದು ಹೇಳಿದರು.