ಸಕ್ಕರೆ ಕಾರ್ಖಾನೆಗೆ ಹೋಗಿ ಸಭೆ- ಎಚ್ಚರಿಕೆ

ಕಾರ್ಖಾನೆಗೆ ಹೋಗಿ ಸಭೆ- ಎಚ್ಚರಿಕೆ
ಕಾರ್ಖಾನೆಗೆ ಹೋಗಿ ಸಭೆ- ಎಚ್ಚರಿಕೆ
Advertisement

ಬೆಳಗಾವಿ : ಪ್ರತಿ ಟನ್ ಕಬ್ಬಿಗೆ 5500 ರೂ. ದರ ನೀಡಲೇಬೇಕು. ಇಲ್ಲದಿದ್ದರೆ ಅ.10ರಂದು ಆರಂಭಗೊಳ್ಳುವ ರೈತ ಸಂಘದ ಪ್ರತಿಭಟನೆ ಉಗ್ರರೂಪ ಪಡೆಯಲಿದೆ ಎಂದು ಎಂದು ರೈತ ಸಂಘಟನೆಗಳು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಬೇಡಿಕೆ ಈಡೇರುವವರೆಗೆ ಬೆಳಗಾವಿಯಲ್ಲಿ ನಡೆಯುವ ಪ್ರತಿಭಟನೆ ಹಿಂತೆಗೆದುಕೊಳ್ಳುವ ಮಾತೇ ಇಲ್ಲ. ಅಷ್ಟೇ ಅಲ್ಲ ಖುದ್ದು ಸಕ್ಕರೆ ಮಂತ್ರಿಗಳೇ ಬೆಳಗಾವಿಗೆ ಆಗಮಿಸಿ ನಮ್ಮೊಂದಿಗೆ ಚರ್ಚಿಸುವವರೆಗೂ ಪ್ರತಿಭಟನೆ ಸ್ಥಳದಿಂದ ಕದಲುವುದಿಲ್ಲವೆದು ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಡಳಿತ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರೆದ 29 ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ಆಡಳಿತ ಮಂಡಳಿಯವರ ಸಭೆಗೆ ಮಾಲೀಕರ ಗೈರು ಹಾಜರಾಗಿದ್ದರಿಂದ ರೈತರು ಅಸಮಾಧಾನಗೊಂಡರು.
ಒಂದು ಟನ್ ಕಬ್ಬಿನಿಂದ 4500 ರೂ. ಅಬಕಾರಿ ಇಲಾಖೆಗೆ ತೆರಿಗೆ ಜಮಾ ಆಗುತ್ತದೆ. ಅಂದರೆ ವರ್ಷಕ್ಕೆ ಸರ್ಕಾರಕ್ಕೆ ಅಂದಾಜು 28 ಸಾವಿರ ಕೋಟಿ ರೂ. ರೈತರ ಕಬ್ಬಿನ ಉಪ ಉತ್ಪನ್ನದಿಂದ ಜಮಾ ಆಗುತ್ತದೆ. ಒಂದು ಟನ್ ಕಬ್ಬಿಗೆ ನಮ್ಮ ತೆರಿಗೆ ಪಾಲು ಕನಿಷ್ಠ 2 ಸಾವಿರ ರೂ. ಮತ್ತು ಕಾರ್ಖಾನೆ ಮಾಲಿಕರು ಟನ್ ಕಬ್ಬಿಗೆ 3500 ರೂ. ಸೇರಿಸಿ ಒಟ್ಟು 5500 ರೂ. ಕೊಡಲೇಬೇಕು ಎಂದು ರೈತ ಧುರೀಣರು ಪಟ್ಟು ಹಿಡಿದಿದ್ದಾರೆ. ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಎಫ್ಆರ್‌ಪಿ ರೈತರಿಗೆ ಮೋಸದ ಬೆಲೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ತಕ್ಷಣ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ಕೈಕೊಟ್ಟ ಮಾಲೀಕರು…!
ರೈತರ ಕಬ್ಬಿನ ಬಾಕಿ ಬಿಲ್ಲು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಕರೆದ ಸಭೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಗೈರಾಗಿದ್ದು ರೈತರ ಅಸಮಾಧಾನಕ್ಕೆ ಕಾರಣವಾಯಿತು. ಆದರೆ ಜಿಲ್ಲಾಧಿಕಾರಿಗಳು ಈ ಸಭೆಗೆ ಬನ್ನಿ ಅಂತ ಕರೆದಿದ್ದೆವು. ಆದರೆ ಆದೇಶ ಮಾಡಿಲ್ಲ. ಕೆಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾರಣಾಂತರದಿಂದ ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆಂದರು.
ಕಾರ್ಖಾನೆಗೆ ಹೋಗಿ ಸಭೆ ಮಾಡ್ತಿವಿ…
ಈಗಾಗಲೇ ಕೇಂದ್ರ ಸರಕಾರ ಕಬ್ಬಿಗೆ ಎಫ್ಆರ್‌ಪಿ ಬೆಲೆ ನಿಗದಿ ಮಾಡಿದೆ. ಈ ಕುರಿತಂತೆ ನಾವೂ ಕೂಡ ನಮ್ಮ ಜಿಲ್ಲೆಯಲ್ಲಿ ಪ್ರಕಟಣೆಯ ಮೂಲಕ ತಿಳಿಸಿದ್ದೇವೆ. ಈ ಕುರಿತಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೂ ತಿಳಿಸಲಾಗಿದೆ. ಈ ಸಭೆಗೆ ಕೆಲ ಸಕ್ಕರೆ ಕಾರ್ಖಾನೆಯವರು ಹಾಜರಾಗಿಲ್ಲ. ಪ್ರತಿ ಕಾರ್ಖಾನೆ ತನ್ನ ದರ ಹಾಗೂ ಕಬ್ಬು ಕಟಾವು ದರ ನಿರ್ಧಾರ ಮಾಡಲಿ. ಈ ಕುರಿತಂತೆ ಈಗಾಗಲೇ ಪ್ರಾರಂಭವಾಗಿರುವ ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ ತಿಳಿಸಲಾಗುವುದು. ಈ ಸಂಬಂಧ ಮತ್ತೆ ನಡೆಯುವ ಸಭೆಗೆ ಕಾರ್ಖಾನೆ ಮಾಲಿಕರು ಬರದಿದ್ದರೆ ಅವರ ಕಾರ್ಖಾನೆಗೆ ಹೋಗಿ ಸಭೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.