ವಿಜಯಪುರ : ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಪೋಟಗೊಂಡು ಬೆಂಕಿ ತಗುಲಿದ ಘಟನೆ ನಡೆದಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ.
ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರೋ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇತ್ತೀಚೆಗೆ ನೂತನವಾಗಿ ಬಾಯ್ಲರ್ ಸ್ಥಾಪನೆ ಮಾಡಲಾಗಿತ್ತು. ನೂತನ ಬಾಯ್ಲರ್ ಪ್ರಾಯೋಗಿಕ ಪರೀಕ್ಷೆ ಮಾಡುವ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ನಾಲ್ಕು ಜನ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿ ಆತಂಕ ಮನೆ ಮಾಡಿದೆ. ಪೂನಾದ ಎಸ್ ಎಸ್ ಇಂಜೀನಿಯರ್ಸ್ ನಿಂದ 220 ಟನ್ ಸಾಮರ್ಥ್ಯದ ನೂತನ ಬಾಯ್ಲರ್ ಅಳವಡಿಸಲಾಗಿತ್ತು. ಈ ಬಾಯ್ಲರ್ 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ದೆಹಲಿಯ ಐ ಎಸ್ ಜಿ ಸಿ ಕಂಪನಿಯ ಬಾಯ್ಲರ್ ಅಳವಡಿಸಲು ಆಡಳಿತ ಮಂಡಳಿ ಒಪ್ಪಂದ ಮಾಡಿಕೊಂಡಿತ್ತು. ಆಡಳಿತ ಮಂಡಳಿ ತನ್ನ ನಿರ್ಧಾರ ಬದಲಿಸಿ ಪೂನಾದ ಎಸ್ ಎಸ್ ಇಂಜೀನಿಯರ್ಸ್ ನಿಂದ ನೂತನ ಬಾಯ್ಲರ್ ಅಳವಡಿಸಲು ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿತ್ತು. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.